ತೆಲುಗು ಚಿತ್ರರಂಗದ (Tollywood) ಜನಪ್ರಿಯ ಸಿನಿಮಾ ನಿರ್ಮಾಪಕ, ಹಾಸ್ಯ ನಟ ಬಂಡ್ಲ ಗಣೇಶ್ಗೆ ವಂಚನೆ ಪ್ರಕರಣವೊಂದರಲ್ಲಿ ಒಂದು ವರ್ಷ ಜೈಲು ಶಿಕ್ಷೆ ಹಾಗೂ 95 ಲಕ್ಷ ರೂಪಾಯಿ ಜುಲ್ಮಾನೆ ವಿಧಿಸಿ ನ್ಯಾಯಾಲಯ ಆದೇಶ ನೀಡಿದೆ. ಜೈಲು ಶಿಕ್ಷೆ, ಜುಲ್ಮಾನೆ ಜೊತೆಗೆ ಕೋರ್ಟ್ ಖರ್ಚುಗಳನ್ನು ಭರಿಸಲು 10 ಸಾವಿರ ರೂಪಾಯಿ ಹೆಚ್ಚುವರಿಯಾಗಿ ನೀಡಲು ಆದೇಶಿಸಲಾಗಿದ್ದು, ಜುಲ್ಮಾನೆ ಹಾಗೂ 10 ಸಾವಿರ ದಂಡವನ್ನು ಮುಂದಿನ 30 ದಿನಗಳ ಒಳಗಾಗಿ ಕಟ್ಟಬೇಕೆಂದು ತೀರ್ಪಿನಲ್ಲಿ ಸೂಚಿಸಲಾಗಿದೆ.
ಬಂಡ್ಲ ಗಣೇಶ್, ಒಂಗೂಲಿನ ಜೆಟ್ಟಿ ವೆಂಕಟೇಶ್ವರ ಎಂಬುವರೊಟ್ಟಿಗೆ ಹಣಕಾಸು ವ್ಯವಹಾರ ಇಟ್ಟುಕೊಂಡಿದ್ದರು. ಬಂಡ್ಲ ಗಣೇಶ್, ವೆಂಕಟೇಶ್ವರ ಅವರಿಗೆ ನೀಡಬೇಕಿದ್ದ ಹಣದಲ್ಲಿ 95 ಲಕ್ಷ ಹಣದ ಚೆಕ್ ಅನ್ನು ನೀಡಿದ್ದರು. ಆದರೆ ಆ ಚೆಕ್ ಬೌನ್ಸ್ ಆಗಿತ್ತು. ಹಾಗಾಗಿ ವೆಂಕಟೇಶ್ವರ ಅವರು ಒಂಗೂಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಹಲವು ವಿಚಾರಣೆಗಳ ಬಳಿಕ ಇತ್ತೀಚೆಗಷ್ಟೆ ಬಂಡ್ಲ ಗಣೇಶ್, ಒಂಗೂಲ್ ನ್ಯಾಯಾಲಯಕ್ಕೆ ಹಾಜರಾಗಿ ವಿಚಾರಣೆ ಎದುರಿಸಿದ್ದರು. ಕೊನೆಗೆ ನ್ಯಾಯಾಲವು ಬಂಡ್ಲ ಗಣೇಶ್ಗೆ ಒಂದು ವರ್ಷ ಜೈಲು ಶಿಕ್ಷೆಯ ಜೊತೆಗೆ 95 ಲಕ್ಷ ಹಣ ಪಾವತಿಸುವಂತೆ ಹೇಳಿದೆ. 30 ದಿನಗಳ ಒಳಗಾಗಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸುವ ಅವಕಾಶವೂ ಬಂಡ್ಲ ಗಣೇಶ್ಗೆ ಇದೆ.
ಇದನ್ನೂ ಓದಿ:ನನ್ನ ಸಿನಿಮಾ ಟೈಟಲ್ ಕದ್ದಿದ್ದಾರೆ: ಜೂ ಎನ್ಟಿಆರ್ ಹೊಸ ಸಿನಿಮಾ ವಿರುದ್ಧ ಬಂಡ್ಲ ಗಣೇಶ್ ಆಕ್ರೋಶ
ಬಂಡ್ಲ ಗಣೇಶ್ ಚತುರ ವ್ಯವಹಾರಸ್ತನೆಂದೇ ಚಿತ್ರರಂಗದಲ್ಲಿ ಗುರುತು ಪಡೆದಿದ್ದಾರೆ. ರಿಯಲ್ ಎಸ್ಟೇಟ್, ಫೈನ್ಯಾನ್ಸಿಂಗ್ ಸೇರಿದಂತೆ ಹಲವು ಉದ್ಯಮಗಳಲ್ಲಿ ಬಂಡ್ಲ ಗಣೇಶ್ ತಮ್ಮನ್ನು ತೊಡಿಗಿಸಿಕೊಂಡಿದ್ದಾರೆ. ರಾಜಕಾರಣದಲ್ಲಿಯೂ ಬಂಡ್ಲ ಗಣೇಶ್ ಸಕ್ರಿಯರಾಗಿದ್ದು ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದಾರೆ. ಇದೆಲ್ಲದರ ಜೊತೆಗೆ ಪವನ್ ಕಲ್ಯಾಣ್ರ ಆಪ್ತ ವಲಯದಲ್ಲಿ ಸಹ ಬಂಡ್ಲ ಗುರುತಿಸಿಕೊಂಡಿದ್ದರು. ಆದರೆ ಅವರು ಪವನ್ ಕಲ್ಯಾಣ್ರ ಮತ್ತೊಬ್ಬ ಆಪ್ತ ತ್ರಿವಿಕ್ರಮ್ ಶ್ರೀನಿವಾಸ್ ಬಗ್ಗೆ ಖಾಸಗಿ ಆಗಿ ಆಡಿದ ಆಡಿಯೋ ವೈರಲ್ ಆದ ಬಳಿಕ ಪವನ್ ಕಲ್ಯಾಣ್, ಬಂಡ್ಲ ಗಣೇಶ್ ಜೊತೆ ಅಂತರ ಕಾಯ್ದುಕೊಂಡರು ಎನ್ನಲಾಗುತ್ತದೆ.
1996ರಲ್ಲಿ ಹಾಸ್ಯ ನಟನಾಗಿ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದ ಬಂಡ್ಲ ಗಣೇಶ್ ಈ ವರೆಗೆ ಅನೇಕ ಸಿನಿಮಾಗಳಲ್ಲಿ ಹಾಸ್ಯ ನಟನಾಗಿ ನಟಿಸಿದ್ದಾರೆ. 2009 ರಲ್ಲಿ ರವಿತೇಜ ನಟನೆಯ ‘ಆಂಜನೇಯುಲು’ ಸಿನಿಮಾ ಮೂಲಕ ನಿರ್ಮಾಪಕರಾದ ಬಂಡ್ಲ ಗಣೇಶ್, ಪವನ್ ಕಲ್ಯಾಣ್ ನಟನೆಯ ‘ತೀನ್ ಮಾರ್’ ಹಾಗೂ ಸೂಪರ್-ಡೂಪರ್ ಹಿಟ್ ಸಿನಿಮಾ ‘ಗಬ್ಬರ್ ಸಿಂಗ್’ ನಿರ್ಮಾಣ ಮಾಡಿದರು. ಅದಾದ ಬಳಿಕ ಅಲ್ಲು ಅರ್ಜುನ್ ಜೊತೆಗೆ ‘ಇದ್ದರಮ್ಮಾಯಿಲತೋ’, ಜೂ ಎನ್ಟಿಆರ್ ಜೊತೆಗೆ ‘ಬಾದ್ಶಾ’ ಮತ್ತು ‘ಟೆಂಪರ್’ ಸಿನಿಮಾಗಳನ್ನು ನಿರ್ಮಿಸಿದರು. ರಾಮ್ ಚರಣ್ ಜೊತೆಗೆ ‘ಗೋವಿಂದುಡು ಅಂದಡಿವಾಡೆಲೇ’ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಜೂ ಎನ್ಟಿಆರ್ ನಟಿಸಿರುವ ‘ಟೆಂಪರ್’ ಬಂಡ್ಲ ಗಣೇಶ್ ನಿರ್ಮಿಸಿರುವ ಕೊನೆಯ ಸಿನಿಮಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ