ಸೆಲೆಬ್ರಿಟಿಗಳ ಲೈಫ್ ಎಂದರೆ ಕಲರ್ಫುಲ್ ಎಂಬುದು ಅನೇಕರ ನಂಬಿಕೆ. ಆದರೆ, ಬಹುತೇಕ ಸೆಲೆಬ್ರಿಟಿಗಳು ಕಷ್ಟದ ದಿನಗಳನ್ನು ಎದುರಿಸಿ ಗೆಲುವು ಸಾಧಿಸಿರುತ್ತಾರೆ. ಈಗ ಹಿಂದಿ ಬಿಗ್ ಬಾಸ್ 14ನೇ ಸೀಸನ್ ಸ್ಪರ್ಧಿ ಜಾಸ್ಮಿನ್ ಭಸಿನ್ ಕೂಡ ತಮ್ಮ ಕಷ್ಟದ ದಿನಗಳನ್ನು ನೆನೆದಿದ್ದಾರೆ. ಅಷ್ಟೇ ಅಲ್ಲ, ಅವರ ತಲೆಯಲ್ಲಿ ಹಾದು ಹೋಗುತ್ತಿದ್ದ ಆತ್ಮಹತ್ಯೆ ಆಲೋಚನೆಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇಂಗ್ಲಿಷ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಜಾಸ್ಮಿನ್ ಈ ವಿಚಾರ ಹೇಳಿಕೊಂಡಿದ್ದಾರೆ. ನಾನು ಬಣ್ಣದ ಬದುಕು ಆರಂಭಿಸಿದ ದಿನಗಳು ಅವು. ಮುಂಬೈಗೆ ಬಂದಾಗ ನಾನು ತುಂಬಾನೇ ಕಷ್ಟ ಅನುಭವಿಸಿದ್ದೆ. ಹೊರಗಿನ ಜಗತ್ತಿನ ಜತೆಗೆ ನನ್ನ ಒಳಗೆ ಒಂದು ತಿಕ್ಕಾಟ ನಡೆಯುತ್ತಿತ್ತು. ನಾನು ಕಾನ್ಫಿಡೆನ್ಸ್ ಕಳೆದುಕೊಂಡಿದ್ದೆ. ನನ್ನಲ್ಲಿ, ನನ್ನ ಚರ್ಮದಲ್ಲಿ ಏನೋ ದೋಷವಿದೆ. ನಾನು ಸುಂದರವಾಗಿ ಕಾಣುತ್ತಿಲ್ಲ. ಎಲ್ಲರೂ ನನ್ನನ್ನು ರಿಜೆಕ್ಟ್ ಮಾಡುತ್ತಿದ್ದಾರೆ ಎಂದು ನನಗೆ ಭಾಸವಾಗುತ್ತಿತ್ತು ಎಂದರು.
ಕೈಯಲ್ಲಿ ಕೆಲಸ ಇರುತ್ತಿರಲಿಲ್ಲ. ಹೀಗಾಗಿ, ಬೇರೆ ಬೇರೆ ಆಲೋಚನೆಗಳು ಬರುತ್ತಿದ್ದವು. ಆತ್ಮಹತ್ಯೆ ಆಲೋಚನೆಗಳು ಕೂಡ ಹರಿದಾಡಿದ್ದವು. ಆದರೆ, ನನ್ನಲ್ಲಿ ಒಂದು ಕಾನ್ಫಿಡೆನ್ಸ್ ಬೆಳೆಸಿಕೊಂಡೆ. ನಂತರ ನನಗೆ ಆಫರ್ಗಳು ಕೂಡ ಸಿಗೋಕೆ ಆರಂಭವಾದವು. ನಂತರ ಎಲ್ಲವೂ ಬದಲಾಯಿತು ಎಂದಿದ್ದಾರೆ ಜಾಸ್ಮಿನ್.
ಜಾಸ್ಮಿನ್ ರಾಜಸ್ಥಾನ ಮೂಲದವರು. ಮಾಡೆಲಿಂಗ್ ಮೂಲಕ ಕೆರಿಯರ್ ಆರಂಭಿಸಿದ ಅವರು ತಾಶನ್-ಎ-ಇಷ್ಕ್ ಧಾರಾವಾಹಿ ಮೂಲಕ ಬಣ್ಣದ ಬದುಕು ಆರಂಭಿಸಿದರು. ನಂತರ ಅವರಿಗೆ ಸಿನಿಮಾಗಳಲ್ಲಿಯೂ ನಟಿಸೋಕೆ ಅವಕಾಶ ಸಿಕ್ಕಿತ್ತು.
ಸಾಕಷ್ಟು ಸೆಲೆಬ್ರಿಟಿಗಳು ಅವಕಾಶ ಸಿಗದಿದ್ದಾಗ ಖಿನ್ನತೆಗೆ ಒಳಗಾದ ಬಗ್ಗೆ ಹೇಳಿಕೊಂಡಿದ್ದರು. ನಟಿ ದೀಪಿಕಾ ಪಡುಕೋಣೆ ಕೂಡ ಖಿನ್ನತೆಗೆ ಒಳಗಾಗಿದ್ದರು. ಈ ಬಗ್ಗೆ ಅವರು ಸಾರ್ವಜನಿಕವಾಗಿಯೇ ಒಪ್ಪಿಕೊಂಡಿದ್ದರು.
ಇದನ್ನೂ ಓದಿ: ಬಣ್ಣದ ಲೋಕದ ಕನಸು ಕಂಡಿದ್ದ ಜಯಶ್ರೀಗೆ ಮನಸಿನ ಬಣ್ಣವೇ ಮಾಸಿಹೋಗಿತ್ತು; ಜೀವವನ್ನೇ ಕಸಿಯಿತು ಖಿನ್ನತೆಯೆಂಬ ಕೂಪ