ಬಿಗ್ ಬಾಸ್ ಮನೆಯಲ್ಲಿ ಅರವಿಂದ್ ಕೆ.ಪಿ. ಮತ್ತು ದಿವ್ಯಾ ಉರುಡುಗ ಅವರಿಗೆ ವಿರಹ ವೇದನೆ ಶುರುವಾಗಿದೆ. ಇಷ್ಟು ವಾರಗಳ ಕಾಲ ಕೈ ಕೈ ಹಿಡಿದುಕೊಂಡು ಓಡಾಡುತ್ತಿದ್ದ ಈ ಜೋಡಿಹಕ್ಕಿಗಳು ಈಗ ಬೇರಾಗಿವೆ. ದಿವ್ಯಾ ಉರುಡುಗ ಅವರ ಸ್ಯೂಟ್ಕೇಸ್ ಪ್ಯಾಕ್ ಆಗಿದೆ. ಅವರೀಗ ಬಿಗ್ ಬಾಸ್ ಮನೆಯೊಳಗೆ ಇಲ್ಲ. ಅವರನ್ನು ಬಿಟ್ಟಿರಲು ಸಾಧ್ಯವಾಗದೇ ಅರವಿಂದ್ ಕಣ್ಣೀರು ಹಾಕುತ್ತಿದ್ದಾರೆ. ಉಳಿದವರೆಲ್ಲರೂ ಅರವಿಂದ್ಗೆ ಸಮಾಧಾನ ಮಾಡುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ದಿವ್ಯಾ ಇಲ್ಲ ಎಂದರೆ ಅವರು ಎಲಿಮಿನೇಟ್ ಆಗಿದ್ದಾರೆ ಎಂದರ್ಥವಲ್ಲ. ಅವರಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಹಾಗಾಗಿ ಚಿಕಿತ್ಸೆ ನೀಡಲು ವೈದ್ಯರ ಬಳಿಗೆ ಕರೆದುಕೊಂಡು ಹೋಗಲಾಗಿದೆ. ಇದರಿಂದಾಗಿ ಅರವಿಂದ್ ಬೇಸರ ಮಾಡಿಕೊಂಡಿದ್ದಾರೆ. ಅಷ್ಟೂ ಸಾಲದೆಂಬಂತೆ ಬಿಗ್ ಬಾಸ್ ಕಡೆಯಿಂದ ಇನ್ನೊಂದು ಆದೇಶ ಬಂದಿದೆ. ದಿವ್ಯಾ ಉರುಡುಗ ಅವರ ಸ್ಯೂಟ್ಕೇಸ್ ಪ್ಯಾಕ್ ಮಾಡಿ ಕೂಡಲೇ ಸ್ಟೋರ್ ರೂಮ್ಗೆ ತಂದು ಇರಿಸಿ ಎಂದು ಸೂಚಿಸಲಾಗಿದೆ.
ಬಿಗ್ ಬಾಸ್ ಕಡೆಯಿಂದ ಈ ಆದೇಶ ಬಂದ ಬಳಿಕ ಅರವಿಂದ್ ಸಂಪೂರ್ಣ ಡಲ್ ಆಗಿದ್ದಾರೆ. ಒಮ್ಮೆ ಹೋದರೆ ದಿವ್ಯಾ ವಾಪಸ್ ಬರುವುದಿಲ್ಲ ಎಂದು ಅವರಿಗೆ ಅನಿಸೋಕೆ ಶುರು ಆಗಿದೆ. ಹಾಗಾಗಿ ಪದೇಪದೇ ದಿವ್ಯಾರನ್ನು ನೆನಪು ಮಾಡಿಕೊಂಡು ಅವರು ಅಳುತ್ತಿದ್ದಾರೆ. ಅವರನ್ನು ಸಮಾಧಾನ ಪಡಿಸಲು ಎಲ್ಲರೂ ಪ್ರಯತ್ನಿಸಿದ್ದಾರೆ. ‘ನಂಗೆ ಅರವಿಂದ್ನ ನೋಡೋಕೆ ಆಗ್ತಾ ಇಲ್ಲ’ ಎಂದು ಮಂಜು ಬೇಸರ ವ್ಯಕ್ತಪಡಿಸಿದ್ದಾರೆ.
‘ಬೆಳಗ್ಗೆಯಿಂದ ರಾತ್ರಿತನಕ ಜೊತೆಯಲ್ಲೇ ಇರುತ್ತಿದ್ದಳು. ಖುಷಿ ಆದ್ರೂ ನಿಮ್ಮ ಜೊತೆ, ಹರ್ಟ್ ಆದ್ರೂ ನಿಮ್ಮ ಜೊತೆಯೇ ಎಂದು ಹೇಳುತ್ತಿದ್ದಳು. ಈಗ ಎಲ್ಲವೂ ಹೋಯ್ತು’ ಎಂದು ಅರವಿಂದ್ ಅಳುತ್ತ ಕೂತಿರುವ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ತನ್ನ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ. ಮೇ 6ರ ಸಂಚಿಕೆಯಲ್ಲಿ ಇದು ಪ್ರಸಾರ ಆಗಲಿದೆ. ಚಿಕಿತ್ಸೆ ಪಡೆದು ದಿವ್ಯಾ ಉರುಡುಗ ವಾಪಸ್ ಬರುತ್ತಾರಾ ಅಥವಾ ಅವರ ಬಿಗ್ ಬಾಸ್ ಪಯಣ ಇಲ್ಲಿಗೆ ಅಂತ್ಯವಾಗಲಿದೆಯಾ ಎಂಬ ಕೌತುಕದ ಪ್ರಶ್ನೆ ಎಲ್ಲರ ಮನದಲ್ಲಿ ಮೂಡಿದೆ.
ಇದನ್ನೂ ಓದಿ:
ನಂಗೆ ಒಂಥರಾ ಆಗ್ತಿದೆ; ಅರವಿಂದ್ ಮಾಡಿದ ಸೇವೆ ನೋಡಿ ದಿವ್ಯಾ ಉರುಡುಗ ನಾಚಿ ನೀರಾದರು
ಅರವಿಂದ್ಗೆ ಪ್ರೀತಿಯ ರಿಂಗ್ ತೊಡಿಸಿದ ದಿವ್ಯಾ! ಮರುಕ್ಷಣವೇ ಇಬ್ಬರ ಲವ್ನಲ್ಲಿ ಸುನಾಮಿ