ಕೊರೊನಾ ವೈರಸ್ ಎರಡನೇ ಅಲೆಯ ಅಬ್ಬರದಿಂದಾಗಿ ಅರ್ಧಕ್ಕೆ ನಿಂತಿದ್ದ ‘ಬಿಗ್ ಬಾಸ್ ಕನ್ನಡ ಸೀಸನ್ 8’ ರಿಯಾಲಿಟಿ ಶೋ ಮತ್ತೆ ಆರಂಭಗೊಂಡಿದೆ. ಹೊಸ ಉತ್ಸಾಹದೊಂದಿಗೆ ಸ್ಪರ್ಧಿಗಳೆಲ್ಲರೂ ದೊಡ್ಮೆನೆಗೆ ಎಂಟ್ರಿ ನೀಡಿದ್ದಾರೆ. ಬಹಳ ಅದ್ದೂರಿಯಾಗಿಯೇ ಎಲ್ಲ 12 ಜನರನ್ನು ಕಿಚ್ಚ ಸುದೀಪ್ ಅವರು ವೇದಿಕೆ ಆಹ್ವಾನಿಸಿ ಮಾತನಾಡಿಸಿದ್ದಾರೆ. ಎಂದಿನಂತೆ ಕಾಲೆಳೆಯುತ್ತ, ತಮಾಷೆ ಮಾಡುತ್ತ ಇಡೀ ಕಾರ್ಯಕ್ರಮದ ರಂಗೇರಿಸಿದ್ದಾರೆ ಕಿಚ್ಚ. ಈ ವೇಳೆ ಸುದೀಪ್ ಮತ್ತು ಪ್ರಶಾಂತ್ ಸಂಬರಗಿ ನಡುವೆ ಕೆಲವು ಮಾತುಕಥೆ ಆಗಿದೆ.
ಮೊದಲ ಇನ್ನಿಂಗ್ಸ್ನಲ್ಲಿ ಸ್ಪರ್ಧಿಗಳು ತಮ್ಮದೇ ಆದಂತಹ ಸ್ಟ್ರಾಟಜಿ ಬಳಸಿದ್ದರು. ಅದು ವರ್ಕೌಟ್ ಆಗುವುದಕ್ಕೂ ಮುನ್ನವೇ ಶೋ ಅರ್ಧಕ್ಕೆ ನಿಲ್ಲುವಂತಾಗಿತ್ತು. ಆ ಬಳಿಕ ಮನೆಯಿಂದ ಹೊರ ಹೋಗಿದ್ದ ಎಲ್ಲರೂ ತಮ್ಮ ತಮ್ಮ ಎಪಿಸೋಡ್ಗಳನ್ನು ನೋಡಿಕೊಂಡು ಈಗ ಪುನಃ ಬಂದಿದ್ದಾರೆ. ಎಲ್ಲರಿಗೂ ಅವರವರ ಪ್ಲಸ್ ಮತ್ತು ಮೈನಸ್ಗಳು ಚೆನ್ನಾಗಿ ಅರ್ಥ ಆಗಿವೆ. ಅದನ್ನೆಲ್ಲ ತಿದ್ದಿಕೊಂಡು ಎರಡನೇ ಇನ್ನಿಂಗ್ಸ್ನಲ್ಲಿ ಆಟ ಶುರು ಮಾಡಿದ್ದಾರೆ.
ತಾವು ಮಾಡಿಕೊಳ್ಳಬೇಕು ಎಂದುಕೊಂಡಿರುವ ಬದಲಾವಣೆಗಳ ಬಗ್ಗೆ ಪ್ರಶಾಂತ್ ಸಂಬರಗಿ ಅವರು ಹೇಳಿಕೊಂಡರು. ‘ಎಲ್ಲದಕ್ಕೂ ವಾಯ್ಸ್ ಹೊರತೆಗೆಯಬೇಕು ಅಂತೇನಿಲ್ಲ. ಆ ವಾಯ್ಸ್ಗೆ ಬೆಲೆ ಇದ್ದರೆ ಮಾತ್ರ ಮಾತನಾಡಬೇಕು. ಸುಮ್ಮನೆ ವಾಯ್ಸ್ ತೆಗೆಯುವುದು ಬೇಡ ಎಂಬ ಲೆಕ್ಕಾಚಾರದಲ್ಲಿ ಬಂದಿದ್ದೇನೆ’ ಎಂದು ಸಂಬರಗಿ ಹೇಳಿದರು. ‘ಇದು ಅದ್ಭುತ ಪಾಯಿಂಟ್. ಹೊರಗಡೆಯೂ ಇದನ್ನೇ ಅಳವಡಿಸಿಕೊಳ್ಳುತ್ತೀರಾ?’ ಎಂದು ಸುದೀಪ್ ಮರುಪ್ರಶ್ನೆ ಹಾಕಿದರು.
‘ಖಂಡಿತವಾಗಿ ಹೊರಗಡೆಯೂ ಅಳವಡಿಸಿಕೊಳ್ಳುತ್ತೇನೆ’ ಎಂದು ಪ್ರಶಾಂತ್ ಸಂಬರಗಿ ಉತ್ತರಿಸಿದರು. ‘ಇದನ್ನು ದಯವಿಟ್ಟು ಎಲ್ಲ ಸುದ್ದಿ ವಾಹಿನಿಯವರು ನೋಟ್ ಮಾಡಿಕೊಳ್ಳಿ. ಸಂಬರಗಿ ಹೇಳಿದ್ದೇನೆಂದರೆ, ಧ್ವನಿ ಇದೆ ಅಂತ ಎತ್ತುವುದಲ್ಲ. ಎಲ್ಲಿ ಬೆಲೆ ಇದೆಯೋ ಅಲ್ಲಿ ಮಾತ್ರ ಎತ್ತಬೇಕು ಅಂತ. ಅಪ್ಪಿತಪ್ಪಿ ಏನಾದರೂ ಇವರು ನಿಮಗೆ ಸುಮ್ಮನೆ ಮಾತನಾಡಲು ಸಿಕ್ಕಿದರೆ, ದಯವಿಟ್ಟು ನಮ್ ಕಡೆಯಿಂದ (ಕ್ಲಾಸ್ತೆಗೆದುಕೊಳ್ಳಿ)’ ಎಂದು ಸುದೀಪ್ ಲುಕ್ ಕೊಟ್ಟರು. ‘ನನ್ನ ಧ್ವನಿ ಯಾವಾಗಲೂ ರೈಟ್ ಆಗಿ ಎತ್ತಿದ್ದೇನೆ ಸರ್’ ಎಂದು ಸಂಬರಗಿ ಸಮಜಾಯಿಷಿ ನೀಡಲು ಮುಂದಾದರು. ‘ನಾವೇನು ಲೆಫ್ಟ್ನಲ್ಲಿ ಧ್ವನಿ ಎತ್ತುತ್ತೀವೇನ್ರೀ?’ ಎಂದು ಕಿಚ್ಚ ಸುದೀಪ್ ಕೌಂಟರ್ ನೀಡಿದರು.
ಸದ್ಯ ಎರಡನೇ ಇನ್ನಿಂಗ್ಸ್ ಆರಂಭದಲ್ಲಿಯೇ ಮನೆಯ ಬಹುತೇಕ ಸದಸ್ಯರಿಂದ ಪ್ರಶಾಂತ್ ಸಂಬರಗಿ ವಿರೋಧ ಎದುರಿಸುತ್ತಿದ್ದಾರೆ. ಹೆಚ್ಚು ಜನರು ಅವರನ್ನು ನಾಮಿನೇಟ್ ಮಾಡಿದ್ದಾರೆ. 73ನೇ ದಿನದಿಂದ ಆಟ ಮುಂದುವರಿದಿದೆ.
ಇದನ್ನೂ ಓದಿ:
Bigg Boss Kannada: ಬಿಗ್ ಬಾಸ್ ಮತ್ತೆ ಶುರುವಾಗಲು ಕಾರಣವಾದ ಪ್ರಮುಖ ವ್ಯಕ್ತಿ ಯಾರು? ಆ ಸ್ಪರ್ಧಿಯ ಮೇಲಿದೆ ಗುಮಾನಿ
‘ಭಾಷಣ ಚೆನ್ನಾಗಿ ಮಾಡ್ತೀರಾ’; ಬಿಗ್ ಬಾಸ್ ವೇದಿಕೆ ಮೇಲೆ ದಿವ್ಯಾ ಉರುಡುಗಗೆ ಸುದೀಪ್ ಎಚ್ಚರಿಕೆ