ಬಿಗ್​ಬಾಸ್ ಗೆದ್ದವಗೆ ಶೋ ಮುಗಿದ ಐದು ತಿಂಗಳ ಬಳಿಕ ಬಂತು ಬಹುಮಾನ

|

Updated on: Jun 01, 2024 | 7:21 PM

ಬಿಗ್​ಬಾಸ್ ಗೆದ್ದವರಿಗೆ ಭಾರಿ ಮೊತ್ತದ ಹಣವನ್ನು ಬಹುಮಾನವಾಗಿ ನೀಡಲಾಗುತ್ತದೆ. ಇದರ ಜೊತೆಗೆ ಕಾರು ಸೇರಿದಂತೆ ಇನ್ನಿತರೆ ಬಹುಮಾನಗಳನ್ನು ನೀಡಲಾಗುತ್ತದೆ. ಆದರೆ ಇದೆಲ್ಲವೂ ಗೆದ್ದವರನ್ನು ತಲುಪಲು ತಿಂಗಳುಗಳೇ ಬೇಕು. ಬಿಗ್​ಬಾಸ್ ಮುಗಿದ ಐದು ತಿಂಗಳ ಬಳಿಕ ಈಗ ವಿನ್ನರ್​ಗೆ ಬಹುಮಾನಗಳನ್ನು ಹಸ್ತಾಂತರಿಸಲಾಗಿದೆ.

ಬಿಗ್​ಬಾಸ್ ಗೆದ್ದವಗೆ ಶೋ ಮುಗಿದ ಐದು ತಿಂಗಳ ಬಳಿಕ ಬಂತು ಬಹುಮಾನ
Follow us on

ಬಿಗ್​ಬಾಸ್ (Bigg Boss) ರಿಯಾಲಿಟಿ ಶೋನಲ್ಲಿ ಭಾಗವಹಿಸುವವರಿಗೆ ದೊಡ್ಡ ಮೊತ್ತದ ಸಂಭಾವನೆಯನ್ನು ನೀಡಲಾಗುತ್ತದೆ. ಜೊತೆಗೆ ಬಿಗ್​ಬಾಸ್ ಗೆದ್ದವರಿಗೂ ಸಹ ಲಕ್ಷಾನುಗಟ್ಟಲೆ ಬಹುಮಾನದ ಮೊತ್ತದ ಜೊತೆಗೆ ಕಾರು ಇನ್ನಿತರೆ ಉಡುಗೊರೆಗಳು ಸಹ ದೊರಕುತ್ತವೆ. ಆದರೆ ಈ ಬಹುಮಾನದ ಮೊತ್ತ, ಕಾರು ಇನ್ನಿತರೆ ಬಹುಮಾನಗಳು ಶೋ ಮುಗಿದ ಕೂಡಲೇ ಬರುವುದಿಲ್ಲ. ಅದಕ್ಕೆ ಬಹಳ ದಿನ ಕಾಯಬೇಕಾಗುತ್ತದೆ. ಬಿಗ್​ಬಾಸ್ ಶೋ ಮುಗಿದ ಐದು ತಿಂಗಳ ಬಳಿಕ ಈಗ ಬಿಗ್​ಬಾಸ್ ವಿನ್ನರ್​ಗೆ ಬಹುಮಾನದ ಮೊತ್ತ, ಕಾರು ಇನ್ನಿತರೆ ಉಡುಗೊರೆಗಳು ದೊರಕಿವೆ. ಅಂದಹಾಗೆ ಈ ವಿನ್ನರ್ ಕನ್ನಡದ ಕಾರ್ತಿಕ್ ಮಹೇಶ್ ಅಲ್ಲ ಬದಲಿಗೆ ತೆಲುಗಿನ ಪಲ್ಲವಿ ಪ್ರಶಾಂತ್.

ತೆಲುಗು ಬಿಗ್​ಬಾಸ್ 7 ರಿಯಾಲಿಟಿ ಶೋ ಭಾರಿ ಜನಪ್ರಿಯತೆ ಗಳಿಸಿತ್ತು. ಈ ಶೋನಲ್ಲಿ ಸಾಮಾನ್ಯ ವ್ಯಕ್ತಿ, ಯುವ ರೈತ ಪಲ್ಲವಿ ಪ್ರಶಾಂತ್ ಸಹ ಭಾಗಿಯಾಗಿದ್ದರು. ಪಲ್ಲವಿ ಪ್ರಶಾಂತ್ ಶೋನಲ್ಲಿ ಅದ್ಭುತವಾಗಿ ಆಡಿದ್ದರು. ಅಲ್ಲದೆ ಅವರಿಗೆ ಭಾರಿ ಜನ ಬೆಂಬಲವೂ ವ್ಯಕ್ತವಾಗಿತ್ತು. ಅಂತಿಮವಾಗಿ ಪಲ್ಲವಿ ಪ್ರಶಾಂತ್ ಬಿಗ್​ಬಾಸ್ ವಿನ್ನರ್ ಆಗಿದ್ದರು. ಅವರಿಗೆ 35 ಲಕ್ಷ ಹಣದ ಚೆಕ್, ಒಂದು ಮಾರುತಿ ಬ್ರೆಜಾ ಕಾರು ಹಾಗೂ ಒಂದು ಚಿನ್ನದ ನೆಕ್ಲೆಸ್ ಉಡುಗೊರೆಯಾಗಿ ನೀಡಲಾಗಿತ್ತು. ವೇದಿಕೆ ಮೇಲೆ ಇದನ್ನು ನೀಡಿದಂತೆ ಮಾಡಿದರಾದರೂ ಯಾವುದೂ ಸಹ ಪಲ್ಲವಿ ಪ್ರಶಾಂತ್ ಕೈಸೇರಿರಲಿಲ್ಲ.

ತೆಲುಗು ಬಿಗ್​ಬಾಸ್ ಸೀಸನ್ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮುಗಿದಿತ್ತು. ಈಗ ಶೋ ಮುಗಿದ ಐದು ತಿಂಗಳಿಗೂ ಹೆಚ್ಚು ಸಮಯದ ಬಳಿಕ ವಿನ್ನರ್ ಪಲ್ಲವಿ ಪ್ರಶಾಂತ್​ಗೆ ಬಹುಮಾನದ ಹಣ, ಕಾರು ಹಾಗೂ ನೆಕ್ಲೆಸ್ ದೊರೆತಿದೆ. 35 ಲಕ್ಷದ ಚೆಕ್, ಹಾಗೂ ನೆಕ್ಲೆಸ್ ಅನ್ನು ಹಿಡಿದು ತಮ್ಮ ಅಪ್ಪ-ಅಮ್ಮನೊಡನೆ ಪಲ್ಲವಿ ಪ್ರಶಾಂತ್ ಫೋಟೊ ಸೆಲ್ಫಿ ತೆಗೆದುಕೊಂಡು ಹಂಚಿಕೊಂಡಿದ್ದಾರೆ. ಇನ್ನು ಕಾರು ತೆಗೆದುಕೊಳ್ಳಲು, ಬಿಗ್​ಬಾಸ್​ ಶೋನಲ್ಲಿ ಅವರಿಗೆ ಆಪ್ತವಾಗಿದ್ದ ಶಿವಾಜಿ ಅವರನ್ನು ಕರೆದುಕೊಂಡು ಹೋಗಿ ಅವರಿಂದಲೇ ಕಾರನ್ನು ಪಡೆದುಕೊಂಡಿದ್ದಾರೆ. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:Shehnaaz Gill: ಹಾಟ್ ಅವತಾರದಲ್ಲಿ ಫೋಟೋಶೂಟ್​​ ಮಾಡಿಸಿಕೊಂಡ ಬಿಗ್‌ಬಾಸ್ ಬೆಡಗಿ

ಪಲ್ಲವಿ ಪ್ರಶಾಂತ್ ಯುವ ರೈತನಾಗಿದ್ದು, ತಾವು ಹಾಗೂ ತಮ್ಮ ಕುಟುಂಬ ಹೊಲದಲ್ಲಿ ದುಡಿಯುವುದನ್ನು ವ್ಲಾಗ್ ರೀತಿ ಮಾಡಿ ಇನ್​ಸ್ಟಾಗ್ರಾಂನಲ್ಲಿ ಅಪ್​ಲೋಡ್ ಮಾಡುತ್ತಿದ್ದರು. ಬಿಗ್​ಬಾಸ್​ಗೆ ಹೋಗಬೇಕೆಂಬ ಆಸೆಯಿಂದ ಹಲವು ಬಾರಿ ವಿಡಿಯೋಗಳಲ್ಲಿ ತಮ್ಮನ್ನು ಬಿಗ್​ಬಾಸ್​ಗೆ ಆಯ್ಕೆ ಮಾಡುವಂತೆ ಮನವಿ ಮಾಡಿದ್ದರು. ಕೊನೆಗೆ ಬಿಗ್​ಬಾಸ್ 7 ನಲ್ಲಿ ಸ್ಪರ್ಧಿಯಾಗಿ ಭಾಗವಹಿಸುವ ಅವಕಾಶ ಪಲ್ಲವಿ ಪ್ರಶಾಂತ್​ಗೆ ದೊರಕಿತು. ಅದ್ಭುತವಾಗಿ ಆಟವಾಡಿದ ಪಲ್ಲವಿ ಪ್ರಶಾಂತ್ ಬಿಗ್​ಬಾಸ್​ ನಿಂದಾಗಿ ಹೊರಗಿನ ಪ್ರಪಂಚದಲ್ಲಿ ಹೀರೋ ಅಂತಾಗಿದ್ದರು. ಕೊನೆಗೆ ಅವರೇ ಬಿಗ್​ಬಾಸ್ ವಿನ್ನರ್ ಸಹ ಆದರು.

ಇನ್ನು ಕನ್ನಡದ ಬಿಗ್​ಬಾಸ್ ಸೀಸನ್ 10 ಜನವರಿ 28 ಕ್ಕೆ ಅಂತ್ಯವಾಯಿತು. ನಟ ಕಾರ್ತಿಕ್ ಮಹೇಶ್ ವಿಜೇತರಾದರು. ಡ್ರೋನ್ ಪ್ರತಾಪ್ ರನ್ನರ್ ಅಪ್ ಆದರು. ಆದರೆ ಕಾರ್ತಿಕ್​ಗೆ ಬಿಗ್​ಬಾಸ್​ನಿಂದ ಬಹುಮಾನವಾಗಿ ಬರಬೇಕಿದ್ದ ಕಾರು ಇನ್ನೂ ಸಿಕ್ಕಿಲ್ಲ. ಪ್ರತಾಪ್​ಗೆ ಎಲೆಕ್ಟ್ರಿಕ್ ಬೈಕ್ ನೀಡಲಾಯ್ತು. ಆ ಬೈಕ್ ಅನ್ನು ಅವರು ಒಬ್ಬ ಡೆಲಿವರಿ ಯುವಕನಿಗೆ ಉಚಿತವಾಗಿ ನೀಡಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Sat, 1 June 24