‘ಐರಾವತ’ ಸಿನಿಮಾ ನಿರ್ಮಾಪಕರ ಜೊತೆ ಕಿಚ್ಚ ಸುದೀಪ್ ಸಿನಿಮಾ
‘ಮ್ಯಾಕ್ಸ್’ ಸಿನಿಮಾದ ಚಿತ್ರೀಕರಣ ಮುಗಿಸಿರುವ ಕಿಚ್ಚ ಸುದೀಪ್, ಇದೀಗ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸಂದೇಶ್ ನಾಗರಾಜ್, ಸುದೀಪ್ರ ಮುಂದಿನ ಸಿನಿಮಾ ನಿರ್ಮಿಸಲಿದ್ದಾರೆ.
ದರ್ಶನ್ರ (Darshan) ‘ಐರಾವತ’, ‘ಪ್ರಿನ್ಸ್’, ‘ಒಡೆಯ’ ಸಿನಿಮಾಗಳು ಸೇರಿದಂತೆ ಕನ್ನಡ ಚಿತ್ರೋದ್ಯಮಕ್ಕೆ ಹಲವಾರು ಒಳ್ಳೆಯ ಸಿನಿಮಾಗಳನ್ನು ನೀಡಿರುವ ಸಂದೇಶ್ ನಾಗರಾಜ್ (Sandesh Nagaraj) ಇದೀಗ ಕನ್ನಡದ ಸ್ಟಾರ್ ನಟ ಕಿಚ್ಚ ಸುದೀಪ್ ಜೊತೆ ಕೈಜೋಡಿಸಿದ್ದಾರೆ. ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಶಿವರಾಜ್ ಕುಮಾರ್ ನಟಿಸಿದ್ದ ‘ಘೋಸ್ಟ್’ ಸಿನಿಮಾವನ್ನು ಸಹ ಸಂದೇಶ್ ನಾಗರಾಜ್ ನಿರ್ಮಾಣ ಮಾಡಿದ್ದರು. ಇದೀಗ ಇದೇ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ, ಮತ್ತೊಂದು ಬಿಗ್ ಸಿನಿಮಾವನ್ನು ಕೈಗೆತ್ತಿಕೊಂಡಿದೆ. ಈ ಬಾರಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜತೆಗೆ ಕೈ ಜೋಡಿಸಿದ್ದಾರೆ ನಿರ್ಮಾಪಕ ಎನ್. ಸಂದೇಶ್.
ಸಂದೇಶ್ ನಾಗರಾಜ್ ಅರ್ಪಿಸುವ ಸಂದೇಶ್ ಪ್ರೊಡಕ್ಷನ್ ಬ್ಯಾನರ್‌ನಲ್ಲಿ ಎನ್ ಸಂದೇಶ್ ನಿರ್ಮಾಣದಲ್ಲಿ ಕಿಚ್ಚ ಸುದೀಪ್ ಸಿನಿಮಾ ಮಾಡುವುದು ಅಧಿಕೃತವಾಗಿದೆ. ಸಂದೇಶ್ ನಾಗರಾಜ್ ಮತ್ತು ಎನ್ ಸಂದೇಶ್ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿ, ಸಿನಿಮಾದ ಬಗ್ಗೆ ಚರ್ಚೆ ನಡೆಸಿದ್ದಾರೆ. ಸುದೀಪ್ ಸಹ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದು, ಇದು ದೊಡ್ಡ ಬಜೆಟ್ನ ಸಿನಿಮಾ ಆಗಿರಲದೆ.
ಕಿಚ್ಚ ಸುದೀಪ್ ನಟಿಸಿರುವ ‘ಮ್ಯಾಕ್ಸ್’ ಸಿನಿಮಾ ಬಹುತೇಕ ರೆಡಿಯಾಗಿದ್ದು, ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಬಾಕಿ ಇವೆ. ‘ಮ್ಯಾಕ್ಸ್’ ಸಿನಿಮಾದ ಬಿಡುಗಡೆ ಬಳಿಕ, ಸಂದೇಶ್ ನಾಗರಾಜ್ ನಿರ್ಮಾಣದ ಸಿನಿಮಾ ಪ್ರಾರಂಭವಾಗಲಿದೆ. ಸಂದೇಶ್ ಪ್ರೊಡಕ್ಷನ್ನಲ್ಲಿ ಕಿಚ್ಚ ಸುದೀಪ್ ನಟಿಸಲಿರುವ ಸಿನಿಮಾವನ್ನು ಯಾರು ನಿರ್ದೇಶನ ಮಾಡಲಿದ್ದಾರೆ, ಚಿತ್ರೀಕರಣ ಯಾವಾಗ ಪ್ರಾರಂಭವಾಗಲಿದೆ ಎಂಬ ಬಗ್ಗೆ ಇನ್ನಷ್ಟು ಮಾಹಿತಿ ಹೊರಬೀಳಬೇಕಿದೆ.
ಇದನ್ನೂ ಓದಿ:‘ನಿಮ್ಮತ್ರ ಲ್ಯಾಂಬೋರ್ಗಿನಿ ಕಾರಿರಲಿ, ರಸ್ತೆಗೆ ಇಳಿದಾಗ..’ ಕಿಚ್ಚ ಸುದೀಪ್ ಹೀಗೆ ಹೇಳಿದ್ದೇಕೆ?
ಈ ನಡುವೆ ಇದೇ ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಪ್ರಭುದೇವ ನಟನೆಯ “ವುಲ್ಫ್” ಸಿನಿಮಾ ರೆಡಿಯಾಗಿದೆ. ಶೀಘ್ರವೇ ಆ ಸಿನಿಮಾ ಬಿಡುಗಡೆ ಆಗಲಿದೆ. ಸೃಜನ್ ಲೋಕೇಶ್ ನಟಿಸಿರುವ ‘ಜಿಎಸ್‌ಟಿ’ ಸಿನಿಮಾದ ಶೂಟಿಂಗ್ ಕೆಲಸಗಳು ಮುಕ್ತಾಯವಾಗಿದ್ದು, ಬಿಡುಗಡೆಯ ಹೊಸ್ತಿಲಲ್ಲಿದೆ. ಶಿವಣ್ಣ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ‘ಘೋಸ್ಟ್’ನ ಮುಂದಿನ ಭಾಗಕ್ಕೆ ಸಿದ್ಧತೆ ಆರಂಭವಾಗಿದೆ. ‘ಘೋಸ್ಟ್ 2’ ಜೊತೆಗೆ ಶಿವಣ್ಣನ ಜತೆಗಿನ “ದಳವಾಯಿ ಮುದ್ದಣ್ಣ” ಸಿನಿಮಾವನ್ನು ಸಹ ಸಂದೇಶ್ ಪ್ರೊಡಕ್ಷನ್ ನಿರ್ಮಾಣ ಮಾಡಲಿದೆ. ಇವುಗಳ ಮಧ್ಯೆ “ಬೀರಬಲ್ 2” ಸಿನಿಮಾ ಸಹ ಸೆಟ್ಟೇರಲಿದೆ.
ಇನ್ನು ಕಿಚ್ಚ ಸುದೀಪ್ ಸಹ ಸಿನಿಮಾಗಳಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ‘ಮ್ಯಾಕ್ಸ್’ ಸಿನಿಮಾ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ನಲ್ಲಿ ತೊಡಗಿಕೊಂಡಿದ್ದಾರೆ. ಅದಾದ ಬಳಿಕ ತಮಿಳಿನ ಇಬ್ಬರು ನಿರ್ದೇಶಕರೊಟ್ಟಿಗೆ ಸಿನಿಮಾ ಮಾಡಲಿದ್ದಾರೆ. ಸುದೀಪ್ರ ಹಳೆಯ ಗೆಳೆಯ ಚೇರನ್, ಸುದೀಪ್ಗಾಗಿ ಸಿನಿಮಾ ನಿರ್ದೇಶಿಸಲಿದ್ದಾರೆ. ತಮಿಳಿನ ಮತ್ತೊಬ್ಬ ಹಿಟ್ ನಿರ್ದೇಶಕ ಕೆಎಸ್ ರವಿಕುಮಾರ್ ಸಹ ಸುದೀಪ್ ಜೊತೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ