ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ 2026: ಉಚಿತ ಪ್ರವೇಶಾವಕಾಶ

2026ನೇ ಸಾಲಿನ ‘ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ’ಕ್ಕೆ ಕನ್ನಡ ಮತ್ತು ಪ್ರಾದೇಶಿಕ ಭಾಷೆಯ ಕಿರುಚಿತ್ರಗಳನ್ನು ಉಚಿತವಾಗಿ ಸಲ್ಲಿಕೆ ಮಾಡಬಹುದಾಗುದೆ. ಯುವ ಮತ್ತು ಹವ್ಯಾಸಿ ಕಿರುಚಿತ್ರ ನಿರ್ಮಾತೃಗಳಿಗೆ ಇದೊಂದು ಉತ್ತಮ ವೇದಿಕೆಯಾಗಿದೆ. ಇಲ್ಲಿ ಪರಿಣಿತರಿಂದ ವಿಮರ್ಶಾತ್ಮಕ ಪ್ರತಿಕ್ರಿಯೆ ಪಡೆಯಲು ಅವಕಾಶವಿದೆ. ಆ ಕುರಿತು ಇಲ್ಲಿದೆ ಇನ್ನಷ್ಟು ವಿವರ..

ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ 2026: ಉಚಿತ ಪ್ರವೇಶಾವಕಾಶ
Bengaluru International Short Film Festival

Updated on: Jan 29, 2026 | 6:35 PM

ಸಿನಿಮಾ ನಿರ್ಮಾಣ, ನಿರ್ದೇಶನದಲ್ಲಿ ಆಸಕ್ತಿ ಇರುವವರಿಗೆ ಚಿತ್ರೋತ್ಸವಗಳು (Film Festival) ಅತ್ಯುತ್ತಮ ವೇದಿಕೆ. ಪ್ರತಿಷ್ಠಿತ ಚಿತ್ರೋತ್ಸವಗಳಲ್ಲಿ ಸಿನಿಮಾ ಪ್ರದರ್ಶನಗೊಂಡರೆ ಅದರ ಹಿರಿಮೆಯೇ ಬೇರೆ. ಬರೀ ಪೂರ್ಣಾವಧಿ ಸಿನಿಮಾಗಳಿಗೆ ಮಾತ್ರವಲ್ಲ, ಕಿರುಚಿತ್ರಗಳಿಗೂ ಈ ಮಾತು ಅನ್ವಯ. ಎಷ್ಟೋ ನಿರ್ದೇಶಕರು ಮೊದಲ ಹೆಜ್ಜೆ ಇಡುವುದೇ ಕಿರುಚಿತ್ರಗಳ ಮೂಲಕ. ಕಿರುಚಿತ್ರಗಳ ಫೆಸ್ಟಿವಲ್ (Short Film Festival) ಕೂಡ ಸಿನಿಮಾಸಕ್ತರಿಗೆ ಹಲವು ಅವಕಾಶಗಳನ್ನು ಒದಗಿಸಿಕೊಡುತ್ತವೆ. ಅದಕ್ಕೆ ಉತ್ತಮ ಉದಾಹರಣೆ ಎಂದರೆ, ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ (BISFF). ಈ ಚಿತ್ರೋತ್ಸವದ 2026ನೇ ವರ್ಷದ ಆವೃತ್ತಿಗೆ ಪ್ರವೇಶ ಆರಂಭ ಆಗುತ್ತಿದೆ.

ಈ ಬಾರಿ ರಾಜ್ಯದ ಚಲನಚಿತ್ರ ನಿರ್ಮಾತೃಗಳಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸುತ್ತಿರುವುದು ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವದ ವಿಶೇಷವಾಗಿದೆ. ಅಂದಹಾಗೆ, ಇದು ಭಾರತದ ಏಕೈಕ ಆಸ್ಕರ್ ಅಕಾಡೆಮಿ ಅರ್ಹತೆ ಪಡೆದ ಕಿರುಚಿತ್ರೋತ್ಸವ ಎಂಬುದು ಗಮನಿಸಬೇಕಾದ ಅಂಶ. ಈ ಕಿರುಚಿತ್ರೋತ್ಸವ ತನ್ನ 2026ನೇ ಸಾಲಿನ ಆವೃತ್ತಿಗೆ ಅರ್ಜಿ ಆಹ್ವಾನಿಸಿದೆ.

ಫೆಬ್ರವರಿ 1ರಿಂದ ಕಿರುಚಿತ್ರಗಳ ಸಲ್ಲಿಕೆ ಪ್ರಕ್ರಿಯೆ ಆರಂಭ ಆಗಲಿದೆ ಎಂದು ‘ಬೆಂಗಳೂರು ಅಂತಾರಾಷ್ಟ್ರೀಯ ಕಿರುಚಿತ್ರೋತ್ಸವ’ದ ಆಯೋಜಕರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಿರುಚಿತ್ರಗಳ ಸಲ್ಲಿಕೆಗೆ ಕೆಲವು ಮಾನದಂಡಗಳು ಇವೆ. ಸಲ್ಲಿಕೆ ದಿನಾಂಕ ಮತ್ತು ಮಾನದಂಡಗಳ ಬಗ್ಗೆ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ.

ಕರ್ನಾಟಕದ ಪ್ರತಿಭೆಗಳಿಗೆ ಸುವರ್ಣಾವಕಾಶ: ಕನ್ನಡ ಹಾಗೂ ಪ್ರಾದೇಶಿಕ ಭಾಷೆಯ ಸಿನಿಮಾಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, BISFF ‘ಕರ್ನಾಟಕ ವಿಭಾಗ’ದ ಸ್ಪರ್ಧೆಗೆ ಫೆಬ್ರವರಿ 28ರವರೆಗೆ ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಮಾರ್ಚ್ 1ರಿಂದ ಸಾಮಾನ್ಯ ಶುಲ್ಕ ಅನ್ವಯವಾಗಲಿದೆ. ಅಂತಿಮ ಸಲ್ಲಿಕೆಗೆ ಏಪ್ರಿಲ್ 30 ಕಡೆಯ ದಿನಾಂಕ ಆಗಿರಲಿದೆ.

ಇದನ್ನೂ ಓದಿ: 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ: ಈ ಬಾರಿ ಏನೆಲ್ಲ ಇರಲಿದೆ?

ಕಿರುಚಿತ್ರಗಳ ಸಲ್ಲಿಕೆಗೆ ಅರ್ಹತಾ ಮಾನದಂಡಗಳು ಹೀಗಿವೆ: ಕಿರುಚಿತ್ರಗಳು ಕನ್ನಡ ಅಥವಾ ಕರ್ನಾಟಕದ ಇತರೆ ಪ್ರಾದೇಶಿಕ ಭಾಷೆಗಳಲ್ಲಿರಬೇಕು. ಚಿತ್ರದ ಅವಧಿ 30 ನಿಮಿಷಗಳಿಗಿಂತ ಕಡಿಮೆ ಇರಬೇಕು. 2024ರ ಜನವರಿ 1ರ ನಂತರ ನಿರ್ಮಾಣವಾದ ಚಿತ್ರಗಳಾಗಿರಬೇಕು. ಕಡ್ಡಾಯವಾಗಿ ಇಂಗ್ಲಿಷ್ ಉಪಶೀರ್ಷಿಕೆಗಳನ್ನು ಹೊಂದಿರಬೇಕು. ಆಸಕ್ತರು ಹೆಚ್ಚಿನ ವಿವರಗಳಿಗೆ ಮತ್ತು ನೋಂದಣಿಗಾಗಿ ಅಧಿಕೃತ ವೆಬ್‌ಸೈಟ್ www.bisff.in ಗೆ ಭೇಟಿ ನೀಡಬಹುದು ಎಂದು ತಿಳಿಸಲಾಗಿದೆ. Email: bisffblr@gmail.com

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.