‘3 ಇಡಿಯಟ್ಸ್’ ಸೀಕ್ವೆಲ್ ಕಥೆ ರಿವೀಲ್; ಮುಂದುವರಿಯಲಿದೆ ರಾಂಚೋ, ಫರ್ಹಾನ್ ಮತ್ತು ರಾಜು ಪಾತ್ರ

'3 ಇಡಿಯಟ್ಸ್ 2' ಸೀಕ್ವೆಲ್ ಖಚಿತವಾಗಿದೆ. ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಸ್ಕ್ರಿಪ್ಟ್ ಕೆಲಸಗಳಲ್ಲಿ ತೊಡಗಿದ್ದು, ಇದು ಪಾತ್ರಗಳ ಕಾಲೇಜು ಜೀವನದ ಬಗ್ಗೆ ಇರುವುದಿಲ್ಲ ಎಂದಿದ್ದಾರೆ. 15-20 ವರ್ಷಗಳ ನಂತರ ಅವರ ಮಧ್ಯವಯಸ್ಸಿನ ಬಿಕ್ಕಟ್ಟು ಕಥೆಯಾಗಲಿದೆ. ಆಮಿರ್ ಖಾನ್ ಕೂಡ 'ಫುನ್ಸುಖ್ ವಾಂಗ್ಡು' ಪಾತ್ರದಲ್ಲಿ ನಟಿಸಲು ಸಮ್ಮತಿ ನೀಡಿದ್ದು, ಸಿದ್ಧತೆಗಳು ಶುರುವಾಗಿವೆ. ಮೊದಲ ಭಾಗದಂತೆ ದೊಡ್ಡ ಸಂದೇಶವಿರಲಿದೆ.

3 ಇಡಿಯಟ್ಸ್ ಸೀಕ್ವೆಲ್ ಕಥೆ ರಿವೀಲ್; ಮುಂದುವರಿಯಲಿದೆ ರಾಂಚೋ, ಫರ್ಹಾನ್ ಮತ್ತು ರಾಜು ಪಾತ್ರ
3 ಈಡಿಯಟ್ಸ್

Updated on: Jun 19, 2026 | 8:52 AM

ಭಾರತೀಯ ಚಿತ್ರರಂಗದಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ‘3 ಇಡಿಯಟ್ಸ್’ (3 Idiots) ಸಿನಿಮಾ ಬಿಡುಗಡೆಯಾಗಿ ಹಲವು ವರ್ಷಗಳ ಬಳಿಕ, ಅದರ ಮುಂದುವರಿದ ಭಾಗ ಬರುತ್ತಿದೆ. ಈ ಕುರಿತು ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅತ್ಯಂತ ಆಸಕ್ತಿದಾಯಕ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. 2009ರಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ ಶಿಕ್ಷಣ ಪದ್ಧತಿಯ ಮೇಲಿನ ವಿಡಂಬನೆ ಹಾಗೂ ‘ಆಲ್ ಈಸ್ ವೆಲ್’ ಎಂಬ ಐಕಾನಿಕ್ ಡೈಲಾಗ್ ಮೂಲಕ ದೇಶಾದ್ಯಂತ ದೊಡ್ಡ ಯಶಸ್ಸು ಕಂಡಿತ್ತು. ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ನಿರ್ದೇಶಕ ಹಿರಾನಿ, ತಾವು ಮತ್ತು ಲೇಖಕ ಅಭಿಜಾತ್ ಜೋಶಿ ಸೇರಿ ಸದ್ಯ ‘3 ಇಡಿಯಟ್ಸ್ 2’ ಚಿತ್ರದ ಚಿತ್ರಕಥೆಯ ಕೆಲಸಗಳಲ್ಲಿ ತೊಡಗಿರುವುದಾಗಿ ಖಚಿತಪಡಿಸಿದ್ದಾರೆ.

ಮೊದಲ ಭಾಗದ ಅಂತ್ಯದಲ್ಲಿ ರಾಂಚೋ (ಆಮಿರ್ ಖಾನ್) ಲಡಾಖ್‌ನಲ್ಲಿ ಶಿಕ್ಷಕನಾಗಿ, ಫರ್ಹಾನ್ (ಆರ್. ಮಾಧವನ್) ವೈಲ್ಡ್‌ಲೈಫ್ ಫೋಟೋಗ್ರಾಫರ್ ಆಗಿ ಹಾಗೂ ರಾಜು (ಶರ್ಮನ್ ಜೋಶಿ) ತಮ್ಮ ಬದುಕಿನಲ್ಲಿ ಸೆಟಲ್ ಆಗಿರುವುದನ್ನು ತೋರಿಸಲಾಗಿತ್ತು. ಆದರೆ, ಸೀಕ್ವೆಲ್‌ನಲ್ಲಿ ಕಥೆ ಸಂಪೂರ್ಣ ಬದಲಾಗಲಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಹಿರಾನಿ, ‘ನಾವು ಸ್ಕ್ರಿಪ್ಟ್ ಕೆಲಸ ಮಾಡುತ್ತಿದ್ದೇವೆ. ಈ ಕಥೆ ಕಾಲೇಜು ದಿನಗಳ ಬಗ್ಗೆ ಇರುವುದಿಲ್ಲ. ಬದಲಿಗೆ, ಆ ಪಾತ್ರಗಳ ಬದುಕಿನಲ್ಲಿ 15-20 ವರ್ಷಗಳ ನಂತರ ಏನಾಗುತ್ತದೆ ಎಂಬುದರ ಸುತ್ತ ಸಾಗುತ್ತದೆ. ಈಗ ಅವರೆಲ್ಲರಿಗೂ ಮದುವೆಯಾಗಿ ಮಕ್ಕಳಾಗಿರುತ್ತಾರೆ. ಅವರು ತಮ್ಮ ಮಧ್ಯವಯಸ್ಸಿನ ಬಿಕ್ಕಟ್ಟನ್ನು ಎದುರಿಸುತ್ತಿರುತ್ತಾರೆ. ಅಲ್ಲಿಂದ ಮುಂದೆ ಏನಾಗುತ್ತದೆ ಎಂಬುದೇ ಕಥೆ’ ಎಂದು ಹೇಳಿದ್ದಾರೆ. ಮೊದಲ ಭಾಗದಂತೆ ಈ ಚಿತ್ರದಲ್ಲೂ ಸಮಾಜಕ್ಕೆ ಒಂದು ದೊಡ್ಡ ಸಂದೇಶ ಇರಲಿದೆ ಎಂದು ಅವರು ನಗುತ್ತಲೇ ತಿಳಿಸಿದ್ದಾರೆ.

ಇದನ್ನೂ ಓದಿ:  ‘3 ಇಡಿಯಟ್ಸ್’ ಸೀಕ್ವೆಲ್‌: ಆಮಿರ್ ಖಾನ್ ತಂಡ ಸೇರಲಿರುವ ‘4ನೇ ಇಡಿಯಟ್’

ಸೀಕ್ವೆಲ್ ಒಪ್ಪಿಕೊಂಡ ನಟ ಆಮಿರ್ ಖಾನ್!

ಚಿತ್ರದ ಮುಖ್ಯ ಪಾತ್ರಧಾರಿ ಆಮಿರ್ ಖಾನ್ ಕೂಡ ಈ ಸೀಕ್ವೆಲ್ ಅನ್ನು ಖಚಿತಪಡಿಸಿದ್ದು, ಹಿರಾನಿ ಕಥೆ ಹೇಳಿರುವುದಾಗಿ ತಿಳಿಸಿದ್ದಾರೆ. ‘ಕಥೆ ಮತ್ತು ಹಾಸ್ಯ ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾನು ಮತ್ತೊಮ್ಮೆ ‘ಫುನ್ಸುಖ್ ವಾಂಗ್ಡು’ ಪಾತ್ರದಲ್ಲಿ ನಟಿಸಲು ಕಾಯುತ್ತಿದ್ದೇನೆ’ ಎಂದು ಆಮಿರ್ ಹೇಳಿದ್ದಾರೆ. ಚಿತ್ರದಲ್ಲಿ ಆಮಿರ್ ಖಾನ್, ಆರ್. ಮಾಧವನ್, ಶರ್ಮನ್ ಜೋಶಿ ಮತ್ತು ಕರೀನಾ ಕಪೂರ್ ಖಾನ್ ತಮ್ಮ ಹಳೆಯ ಪಾತ್ರಗಳಲ್ಲೇ ಮುಂದುವರಿಯಲಿದ್ದಾರೆ. ಆದರೆ ‘ಚತುರ್’ (ಓಮಿ ವೈದ್ಯ) ಅಥವಾ ‘ವೈರಸ್’ (ಬೋಮನ್ ಇರಾನಿ) ಪಾತ್ರಗಳು ಇರುತ್ತವೆಯೇ ಎಂಬುದು ಇನ್ನು ಸ್ಪಷ್ಟವಾಗಿಲ್ಲ.

ಬಾಕ್ಸ್ ಆಫೀಸ್ ಧೂಳೆಬ್ಬಿಸಿದ್ದ ಮೊದಲ ಭಾಗ!

ಕೇವಲ 55 ಕೋಟಿ ರೂಪಾಯಿ ಬಜೆಟ್‌ನಲ್ಲಿ ತಯಾರಾಗಿದ್ದ ‘3 ಇಡಿಯಟ್ಸ್’ ಸಿನಿಮಾ ವಿಶ್ವಾದ್ಯಂತ ಬರೋಬ್ಬರಿ 400.61 ಕೋಟಿ ರೂಪಾಯಿ ಕಲೆಕ್ಷನ್ ಮಾಡಿ ಇತಿಹಾಸ ಸೃಷ್ಟಿಸಿತ್ತು. ಭಾರತದಲ್ಲೇ 202.95 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದ ಈ ಚಿತ್ರ ರಾಷ್ಟ್ರ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us