ಬಾಲಿವುಡ್ ನಟ ವಿಕ್ಕಿ ಕೌಶಲ್ ಸಂಭಾವಿತ ನಟ ಎಂದು ಅಭಿಮಾನಿಗಳಿಂದ ಗುರುತಿಸಿಕೊಳ್ಳುತ್ತಾರೆ. ಹೊಸ ವರ್ಷವನ್ನು ಆಚರಿಸಲು ಅವರು ಇತ್ತೀಚೆಗೆ ಆಗಮಿಸಿ, ನಿನ್ನೆ ಮತ್ತೆ ಚಿತ್ರೀಕರಣಕ್ಕೆ ವಾಪಸ್ಸಾಗಿದ್ದರು. ಇದರ ಬೆನ್ನಲ್ಲೇ ಅವರಿಗೆ ಶಾಕಿಂಗ್ ಸುದ್ದಿ ಎದುರಾಗಿದೆ. ಇಂದೋರ್ನಲ್ಲಿ ವಿಕ್ಕಿ ಕೌಶಲ್ ಅಕ್ರಮವಾಗಿ ತಮ್ಮ ನಂಬರ್ ಪ್ಲೇಟ್ ನಕಲಿಸಿದ್ದಾರೆ ಎಂದು ವ್ಯಕ್ತಿಯೋರ್ವರು ಪೊಲೀಸ್ ಕಂಪ್ಲೇಂಟ್ ನೀಡಿದ್ದಾರೆ. ಮೋಟಾರ್ ಸೈಕಲ್ ಆಕ್ಟ್ ಅನ್ವಯ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ವಿಕ್ಕಿ ಕೌಶಲ್ ಇಂದೋರ್ನ ಗಲ್ಲಿಗಳಲ್ಲಿ ಸಹ ನಟಿ ಸಾರಾ ಅಲಿ ಖಾನ್ ಜತೆ ಬೈಕ್ನಲ್ಲಿ ಸುತ್ತಾಡಿದ್ದರು. ಇದು ಚಿತ್ರೀಕರಣದ ಉದ್ದೇಶದಿಂದ ಮಾಡಿದ್ದಾಗಿತ್ತು. ಆದರೆ ಈ ವೇಳೆ ಚಿತ್ರತಂಡ ಎಡವಟ್ಟು ಮಾಡಿಕೊಂಡಿದೆ.
ಪ್ರಕರಣವೇನು?
ಇತ್ತೀಚೆಗೆ ವಿಕ್ಕಿ ಕೌಶಲ್ ಹಾಗೂ ನಟಿ ಸಾರಾ ಅಲಿ ಖಾನ್ ಡಿ-ಗ್ಲಾಮ್ ಲುಕ್ನಲ್ಲಿ ಬೈಕ್ ಸವಾರಿ ಮಾಡಿದ್ದು ದೊಡ್ಡ ಸುದ್ದಿಯಾಗಿತ್ತು. ಇಂದೋರ್ನ ಬೀದಿಗಳಲ್ಲಿ ಸಾಮಾನ್ಯ ಬೈಕ್ನಲ್ಲಿ ಈ ನಟರು ಸಂಚರಿಸಿದ್ದರು. ಆ ಸಂದರ್ಭದ ಚಿತ್ರಗಳು ವೈರಲ್ ಆಗಿದ್ದವು. ಆದರೆ ಇದೀಗ ಜೈ ಸಿಂಗ್ ಯಾದವ್ ಎಂಬ ವ್ಯಕ್ತಿಯೋರ್ವರು ಈ ಘಟನೆಯ ಕುರಿತು ಪೊಲೀಸ್ಗೆ ದೂರು ನೀಡಿದ್ದಾರೆ.
ಜೈ ಸಿಂಗ್ ಯಾದವ್ ದೂರೇನು?
ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿ ಖಾನ್ ಸಂಚರಿಸುತ್ತಿದ್ದ ಗಾಡಿಯ ನಂಬರ್ ಪ್ಲೇಟ್ ತಮ್ಮ ಗಾಡಿಯದ್ದಾಗಿದೆ ಎಂದು ದೂರುದಾರ ಜೈ ಸಿಂಗ್ ಯಾದವ್ ಹೇಳಿದ್ದಾರೆ. ಚಿತ್ರತಂಡಕ್ಕೆ ಈ ಕುರಿತು ಅರಿವಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಮತ್ತೊಬ್ಬರ ನಂಬರ್ ಪ್ಲೇಟ್ ಅನ್ನು ಅನುಮತಿಯಿಲ್ಲದೇ ಅಕ್ರಮವಾಗಿ ಬಳಸುವುದು ತಪ್ಪು ಎಂದು ಯಾದವ್ ಹೇಳಿದ್ದಾರೆ. ಅಲ್ಲದೇ ಈ ಕುರಿತು ಅವರು ಪೂರಕ ದಾಖಲೆಗಳನ್ನೂ ಒದಗಿಸಿದ್ದಾರೆ.
ಈ ಕುರಿತು ಪೊಲೀಸರು ಪ್ರತಿಕ್ರಿಯಿಸಿದ್ದು, ದೂರು ದಾಖಲಾಗಿದ್ದನ್ನು ಖಚಿತಪಡಿಸಿದ್ದಾರೆ. ಈ ಕುರಿತು ಮೊಟಾರ್ ಸೈಕಲ್ ಕಾಯ್ದೆಯ ಅನ್ವಯ ತನಿಖೆ ಮಾಡಲಾಗುವುದು. ಚಿತ್ರತಂಡ ಇಂದೋರ್ನಲ್ಲಿಯೇ ಇದ್ದರೆ ಅವರನ್ನು ಸಂಪರ್ಕಿಸಿ ವಿಚಾರಣೆ ನಡೆಸಲಾಗುವುದು ಎಂದು ಬಂಗಾಂಗದ ಎಸ್ಐ ರಾಜೇಂದ್ರ ಸೋನಿ ಎಎನ್ಐಗೆ ತಿಳಿಸಿದ್ದಾರೆ.
ಪ್ರಕರಣದ ಕುರಿತು ಎಎನ್ಐ ಟ್ವೀಟ್ ಇಲ್ಲಿದೆ:
Vehicle number used in the movie sequence is mine; don’t know if the film unit is aware of it…This is illegal, can’t use my number plate without permission. I have given a memorandum at the station. Action should be taken in the matter: Complainant Jai Singh Yadav (1.1.22) pic.twitter.com/CkpZBVUndu
— ANI (@ANI) January 1, 2022
ವಿಕ್ಕಿ ಕೌಶಲ್ ಹಾಗೂ ಸಾರಾ ಅಲಿ ಖಾನ್ ಈರ್ವರೂ ಜತೆಯಾಗಿ ನಟಿಸುತ್ತಿರುವ ಚಿತ್ರವೊಂದರ ಚಿತ್ರೀಕರಣದ ದೃಶ್ಯದಲ್ಲಿ ಕಾಣಿಸಿಕೊಳ್ಳುವಾಗ ಆ ಬೈಕ್ ಬಳಸಿದ್ದರು. ಆದರೆ ಈರ್ವರೂ ಜತೆಯಾಗಿ ಓಡಾಡಿದ ಚಿತ್ರಗಳು ಅಂತರ್ಜಾಲದಲ್ಲಿ ಸಖತ್ ವೈರಲ್ ಆಗಿದ್ದವು.
ಇದನ್ನೂ ಓದಿ:
Katrina Kaif: ಮತ್ತೆ ಅಭಿಮಾನಿಗಳ ಮನಗೆದ್ದ ವಿಕ್ಕಿ- ಕತ್ರಿನಾ; ಏನಿದು ಸಮಾಚಾರ? ವಿಡಿಯೋ ನೋಡಿ
ಶಿಲ್ಪಾ ಶೆಟ್ಟಿ ತಂಗಿಗೆ ಸಲ್ಮಾನ್ ಖಾನ್ ಖಡಕ್ ವಾರ್ನಿಂಗ್; ಎಲ್ಲರ ಎದುರು ಕಣ್ಣೀರು ಹಾಕಿದ ಶಮಿತಾ
Published On - 9:59 am, Sun, 2 January 22