
ಆಮಿರ್ ಖಾನ್ (Aamir Khan) ನಟಿಸಿ ನಿರ್ಮಾಣ ಮಾಡಿರುವ ‘ಸಿತಾರೆ ಜಮೀನ್ ಪರ್’ ಸಿನಿಮಾ ಇಂದು (ಜೂನ್ 20) ಬಿಡುಗಡೆ ಆಗಿದೆ. ಆಮಿರ್ ಖಾನ್ ಅವರೇ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು ಆರ್ಎಸ್ ಪ್ರಸನ್ನ ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ವಿಶೇಷ ಚೇತನ ಮಕ್ಕಳ ಬಗ್ಗೆ ಜಾಗೃತಿ ಮೂಡಿಸುವ ಸಿನಿಮಾ ಇದಾಗಿದೆ. ಸಿನಿಮಾನಲ್ಲಿ ಬಾಸ್ಕೆಟ್ ಬಾಲ್ ಕೋಚ್ ಪಾತ್ರದಲ್ಲಿ ಆಮಿರ್ ಖಾನ್ ನಟಿಸಿದ್ದಾರೆ. ಸಿನಿಮಾ ಇಂದು (ಜೂನ್ 20) ಬಿಡುಗಡೆ ಆಗುತ್ತಿದ್ದು, ಆಮಿರ್ ಖಾನ್ ಹಲವು ಷರತ್ತುಗಳನ್ನು ಸಿನಿಮಾ ಬಿಡುಗಡೆಗೆ ಹಾಕಿದ್ದಾರೆ. ಆಮಿರ್ ಖಾನ್ ಅವರ ಷರತ್ತಿನ ಅನ್ವಯವೇ ಸಿನಿಮಾ ಬಿಡುಗಡೆ ಆಗಿದೆ.
ಈ ವರ್ಷದ ಆರಂಭದಿಂದಲೂ ಸಿನಿಮಾ ಉದ್ಯಮದ ಗೊಂದಲಗಳ ಬಗ್ಗೆ ಮಾತನಾಡುತ್ತಲೇ ಬಂದಿರುವ ಆಮಿರ್ ಖಾನ್, ಈಗ ತಮ್ಮ ನಿರ್ಮಾಣದ ಸಿನಿಮಾನಲ್ಲಿ ಭಿನ್ನ ಹಾದಿ ತುಳಿದಿದ್ದಾರೆ. ‘ಸಿತಾರೆ ಜಮೀನ್ ಪರ್’ ಸಿನಿಮಾವನ್ನು 11 ಗಂಟೆಗೆ ಮುಂಚೆ ಎಲ್ಲಿಯೂ ಬಿಡುಗಡೆ ಮಾಡಿಲ್ಲ. ಜನ ಹರಿ-ಬರಿಯಲ್ಲಿ ಬಂದು ಸಿನಿಮಾ ನೋಡುವುದು ಬೇಡ, ಆರಾಮವಾಗಿ, ತಾಜಾ ಮನಸ್ಥಿತಿಯಲ್ಲಿ ಬಂದು ಸಿನಿಮಾ ನೋಡಲಿ ಎಂಬ ಕಾರಣಕ್ಕೆ ‘ಸಿತಾರೆ ಜಮೀನ್ ಪರ್’ ಸಿನಿಮಾವನ್ನು 11 ಗಂಟೆಗೆ ಮುಂಚೆ ಬಿಡುಗಡೆ ಮಾಡಿಸಿಲ್ಲ ಆಮಿರ್ ಖಾನ್.
ಇದರ ಜೊತೆಗೆ ಸಿನಿಮಾದ ಟಿಕೆಟ್ ಬೆಲೆಯನ್ನು ಉದ್ದೇಶಪೂರ್ವಕವಾಗಿ ಕಡಿಮೆ ಇರಿಸಿದ್ದಾರೆ ಆಮಿರ್ ಖಾನ್, ತಮ್ಮ ಸಿನಿಮಾ ಸಾಧ್ಯವಾದಷ್ಟು ಹೆಚ್ಚು ಜನರನ್ನು ತಲುಪಲಿ ಎಂಬ ಕಾರಣಕ್ಕೆ ಲಾಭ ಕಡಿಮೆಯಾದರೂ ಸಹ ಟಿಕೆಟ್ ಬೆಲೆಯನ್ನು ಕಡಿಮೆ ಇಡಬೇಕೆಂಬ ಷರತ್ತಿನಲ್ಲಿ ತಮ್ಮ ಸಿನಿಮಾವನ್ನು ವಿತರಕರಿಗೆ ಕಡಿಮೆ ಮೊತ್ತಕ್ಕೆ ಮಾರಾಟ ಮಾಡಿದ್ದಾರೆ ಆಮಿರ್ ಖಾನ್.
ಇದನ್ನೂ ಓದಿ:ಆಮಿರ್ ಖಾನ್ ಸಿನಿಮಾದ ಗೆಲುವಿಗಾಗಿ ಕೈ ಜೋಡಿಸಲಿದ್ದಾರೆ ಶಾರುಖ್, ಸಲ್ಮಾನ್
ಇನ್ನು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ತಮ್ಮ ‘ಸಿತಾರೆ ಜಮೀನ್ ಪರ್’ ಸಿನಿಮಾ ಪ್ರದರ್ಶಿಸುವುದಾದರೆ ದಿನದ ನಾಲ್ಕು ಶೋಗಳನ್ನೂ ‘ಸಿತಾರೆ ಜಮೀನ್ ಪರ್’ ಸಿನಿಮಾವನ್ನೇ ಪ್ರದರ್ಶಿಸಬೇಕು ಎಂಬ ಷರತ್ತು ವಿಧಿಸಿದ್ದಾರೆ. ಬೇರೆ ಸಿನಿಮಾದ ಶೋ ಪ್ರದರ್ಶಿಸಿದರೆ ಪ್ರೇಕ್ಷಕನಿಗೆ ಗೊಂದಲ ಮೂಡಿಸಿದಂತಾಗುತ್ತದೆ ಎಂಬ ಕಾರಣಕ್ಕೆ ಆಮಿರ್ ಖಾನ್ ಈ ನಿರ್ಣಯ ತೆಗೆದುಕೊಂಡಿದ್ದಾರೆ.
ಇನ್ನು ಒಟಿಟಿ ಬಿಡುಗಡೆ ವಿಷಯದಲ್ಲಿ ಬಹುದೊಡ್ಡ ಹೆಜ್ಜೆಯನ್ನು ಆಮಿರ್ ಖಾನ್ ಇರಿಸಿದ್ದಾರೆ. ಅಮೆಜಾನ್ ಪ್ರೈಂನವರು ‘ಸಿತಾರೆ ಜಮೀನ್ ಪರ್’ ಸಿನಿಮಾಕ್ಕೆ ಬರೋಬ್ಬರಿ 120 ಕೋಟಿ ಆಫರ್ ನೀಡಿದ್ದರು. ಆದರೆ ಅಷ್ಟು ದೊಡ್ಡ ಆಫರ್ ಅನ್ನು ತಿರಸ್ಕಾರ ಮಾಡಿರುವ ಆಮಿರ್ ಖಾನ್, ಎಲ್ಲರಿಗೂ ಸಿನಿಮಾ ನೋಡುವಂತಾಗಲಿ ಎಂಬ ಕಾರಣಕ್ಕೆ ಯೂಟ್ಯೂಬ್ನಲ್ಲಿ ಸಿನಿಮಾ ಬಿಡುಗಡೆ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ