ಮತ್ತೊಂದು ಬಾಲಿವುಡ್ ಸಿನಿಮಾನಲ್ಲಿ ಕೀರ್ತಿ ಸುರೇಶ್, ಸ್ಟಾರ್ ನಟನೊಟ್ಟಿಗೆ ನಟನೆ

ದಕ್ಷಿಣ ಭಾರತದ ಬೇಡಿಕೆಯ ನಟಿ ಕೀರ್ತಿ ಸುರೇಶ್ ತಮ್ಮ ಮೊದಲ ಬಾಲಿವುಡ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಸಿನಿಮಾ ಬಿಡುಗಡೆ ಆಗುವ ಮುನ್ನವೇ ಹೊಸ ಹಿಂದಿ ಸಿನಿಮಾ ಅವಕಾಶ ಅರಸಿ ಬಂದಿದೆ. ದೊಡ್ಡ ಸ್ಟಾರ್ ನಟನೊಟ್ಟಿಗೆ ನಟಿಸಲಿದ್ದಾರೆ ಕೀರ್ತಿ ಸುರೇಶ್.

ಮತ್ತೊಂದು ಬಾಲಿವುಡ್ ಸಿನಿಮಾನಲ್ಲಿ ಕೀರ್ತಿ ಸುರೇಶ್, ಸ್ಟಾರ್ ನಟನೊಟ್ಟಿಗೆ ನಟನೆ

Updated on: May 14, 2024 | 12:09 PM

ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ (Keerthy Suresh) ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರು. ದಕ್ಷಿಣದ ಹಲವು ಸ್ಟಾರ್ ನಟರೊಟ್ಟಿಗೆ ನಟಿಸಿರುವ ಕೀರ್ತಿ ಸುರೇಶ್ ಇದೀಗ ಬಾಲಿವುಡ್​ಗೂ ಎಂಟ್ರಿ ನೀಡಿದ್ದಾರೆ. ಕೀರ್ತಿ ಸುರೇಶ್ ನಟಿಸುತ್ತಿರುವ ಮೊದಲ ಬಾಲಿವುಡ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿ ಕೆಲ ತಿಂಗಳಷ್ಟೆ ಆಗಿವೆ. ಸಿನಿಮಾದ ಟ್ರೈಲರ್, ಟೀಸರ್ ಸಹ ಇನ್ನೂ ಹೊರಬಂದಿಲ್ಲ. ಅದಾಗಲೇ ಕೀರ್ತಿ ಸುರೇಶ್​ಗೆ ಬಾಲಿವುಡ್​ನ ಮತ್ತೊಂದು ದೊಡ್ಡ ಆಫರ್ ಸಿಕ್ಕಿದೆ. ಬಾಲಿವುಡ್​ನ ಸ್ಟಾರ್ ನಟನೊಟ್ಟಿಗೆ ಕೀರ್ತಿ ಸುರೇಶ್ ನಟಿಸಲಿದ್ದಾರೆ. ಸಿನಿಮಾವನ್ನು ದೊಡ್ಡ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿದೆ.

ಸತತ ಸೋಲು ಕಂಡು, ಗೆಲುವಿಗಾಗಿ ಹಪ-ಹಪಿಸುತ್ತಿರುವ ಬಾಲಿವುಡ್ ಸ್ಟಾರ್ ನಟ ಅಕ್ಷಯ್ ಕುಮಾರ್ ನಟಿಸಲಿರುವ ಹೊಸ ಸಿನಿಮಾದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸಲಿದ್ದಾರೆ. ಸಿನಿಮಾವನ್ನು ಹಿರಿಯ ಮತ್ತು ಜನಪ್ರಿಯ ನಿರ್ದೇಶಕ ಪ್ರಿಯದರ್ಶನ್ ನಿರ್ದೇಶನ ಮಾಡಲಿದ್ದಾರೆ. ಕೀರ್ತಿ ಸುರೇಶ್ ಆಯ್ಕೆ ಆಗುವುದಕ್ಕೆ ಮುನ್ನ ಈ ಪಾತ್ರಕ್ಕಾಗಿ ಆಲಿಯಾ ಭಟ್ ಹಾಗೂ ಕಿಯಾರಾ ಅಡ್ವಾಣಿಯನ್ನು ಪರಿಗಣಿಸಲಾಗಿತ್ತು. ಆದರೆ ಅಂತಿಮವಾಗಿ ಕೀರ್ತಿ ಸುರೇಶ್ ಅವರನ್ನೇ ನಿರ್ದೇಶಕರು ಆಯ್ಕೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಬಾಲಿವುಡ್​ಗೆ ಹೋಗಿ ಏಕಾಏಕಿ ಗ್ಲಾಮರ್​ ಅವತಾರ ತಾಳಿದ ನಟಿ ಕೀರ್ತಿ ಸುರೇಶ್​

ಸಿನಿಮಾವು ಹಾಸ್ಯಮಿಶ್ರಿತ ಕೌಟುಂಬಿಕ ಕತೆ ಹೊಂದಿದ್ದು, ನಾಯಕಿಗೆ ನಾಯಕನಷ್ಟೆ ಪ್ರಧಾನ ಪಾತ್ರವಿದೆಯಂತೆ. ಇದೇ ಕಾರಣಕ್ಕೆ ಸುಂದರವಾಗಿರುವ ಜೊತೆಗೆ ಚೆನ್ನಾಗಿ ನಟಿಸುವ ನಟಿಯ ಹುಡುಕಾಟದಲ್ಲಿ ಚಿತ್ರತಂಡ ಇತ್ತು. ನಟನೆಗೆ ರಾಷ್ಟ್ರಪ್ರಶಸ್ತಿ ಪಡೆದಿರುವ ಕೀರ್ತಿ ಸುರೇಶ್ ಅವರನ್ನು ಅಂತಿಮವಾಗಿ ಆಯ್ಕೆ ಮಾಡಲಾಗಿದೆ. ಅಕ್ಷಯ್ ಕುಮಾರ್ ಪ್ರಸ್ತುತ ‘ಜಾಲಿ ಎಲ್​ಎಲ್​ಬಿ 3’ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾದ ಬಳಿಕ ಅಕ್ಷಯ್ ಹಾಗೂ ಕೀರ್ತಿ ಸುರೇಶ್ ಸಿನಿಮಾ ಸೆಟ್ಟೇರಲಿದೆ.

ಕೀರ್ತಿ ಸುರೇಶ್ ಸಹ ಪ್ರಸ್ತುತ ಸಖತ್ ಬ್ಯುಸಿಯಾಗಿದ್ದಾರೆ. ಕೀರ್ತಿ ಸುರೇಶ್ ಪ್ರಸ್ತುತ ವರುಣ್ ಧವನ್ ಜೊತೆಗೆ ‘ಜಾನಿ ಬೇಬಿ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದು ಕೀರ್ತಿ ಸುರೇಶ್​ರ ಮೊದಲ ಬಾಲಿವುಡ್ ಸಿನಿಮಾ. ಕೀರ್ತಿ ಈಗಾಗಲೇ ತಮಿಳಿನ ‘ರಘುತಾತ’ ಸಿನಿಮಾ ಮುಗಿಸಿದ್ದಾರೆ. ಈ ಸಿನಿಮಾವನ್ನು ಹೊಂಬಾಳೆ ಪ್ರೊಡಕ್ಷನ್ಸ್ ನಿರ್ಮಿಸಿದೆ. ಇದರ ಜೊತೆಗೆ ‘ರಿವಾಲ್ವರ್ ರೀಟಾ’ ಮತ್ತು ‘ಕನ್ನಿವೇಡಿ’ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ದಕ್ಷಿಣ ಭಾರತದ ಹಲವು ನಟಿಯರು ಬಾಲಿವುಡ್​ನಲ್ಲಿ ತಮ್ಮ ಛಾಪು ಮೂಡಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಅಂತೂ ಬಾಲಿವುಡ್​ನ ಬೇಡಿಕೆಯ ನಟಿಯಾಗುವತ್ತ ಹೆಜ್ಜೆ ಇಟ್ಟಿದ್ದಾರೆ. ಇದೀಗ ಕೀರ್ತಿ ಸಹ ಅದೇ ಹಾದಿಯಲ್ಲಿರುವಂತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ