ಪೌರಾಣಿಕ ಕಥಾಹಂದರ ಹೊಂದಿರುವ ‘ಆದಿಪುರುಷ್’ (Adipurush) ಚಿತ್ರದ ಟೀಸರ್ಗೆ ಭಾರಿ ಮೆಚ್ಚುಗೆ ಸಿಗಬಹುದು ಎಂದು ಚಿತ್ರತಂಡ ಊಹಿಸಿತ್ತು. ಆದರೆ ಆಗಿದ್ದೇ ಬೇರೆ. ಅಕ್ಟೋಬರ್ 2ರಂದು ಅಯೋಧ್ಯೆಯಲ್ಲಿ ಅದ್ದೂರಿಯಾಗಿ ಟೀಸರ್ (Adipurush Teaser) ಬಿಡುಗಡೆ ಮಾಡಲಾಯಿತು. ಅದನ್ನು ನೋಡಿ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪ್ರಭಾಸ್ ನಟನೆಯ ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಆದರೆ ಟೀಸರ್ನಲ್ಲಿ ಕಾಣಿಸಿದ ಗ್ರಾಫಿಕ್ಸ್ ಗುಣಮಟ್ಟ ತೀರಾ ಕಳಪೆ ಆಗಿದೆ ಎಂದು ಎಲ್ಲರೂ ಹೇಳುತ್ತಿದ್ದಾರೆ. ಈ ಕುರಿತು ಅನೇಕ ಮೀಮ್ಸ್ ಕೂಡ ಹರಿದಾಡುತ್ತಿವೆ. ಒಟ್ಟಾರೆ ಬೆಳವಣಿಗೆಗಳ ಬಗ್ಗೆ ನಿರ್ದೇಶಕ ಓಂ ರಾವತ್ (Om Raut) ಅವರು ಪ್ರತಿಕ್ರಿಯೆ ನೀಡಿದ್ದಾರೆ.
ರಾಮಾಯಣದ ಕಥೆಯನ್ನು ‘ಆದಿಪುರುಷ್’ ಸಿನಿಮಾ ಹೊಂದಿರಲಿದೆ. ಆ ವೈಭವವನ್ನು ತೋರಿಸಲು ಗ್ರಾಫಿಕ್ಸ್ ಬಳಸಲಾಗಿದೆ. ಆದರೆ ಅದರ ಗುಣಮಟ್ಟ ಕಂಡು ನೆಟ್ಟಿಗರು ಬೇಸರ ಮಾಡಿಕೊಂಡಿದ್ದಾರೆ. ನಿರ್ದೇಶಕ ಓಂ ರಾವತ್ ಹೇಳುವ ಪ್ರಕಾರ, ಯೂಟ್ಯೂಬ್ನಲ್ಲಿ ಟೀಸರ್ ನೋಡಿದ್ದೇ ಇದಕ್ಕೆ ಕಾರಣವಂತೆ! ‘ಈ ಸಿನಿಮಾವನ್ನು ನಾನು ಮಾಡಿರುವುದು ದೊಡ್ಡ ಪರದೆಗಾಗಿ. ನಾನು ಈ ಚಿತ್ರದ ಯಾವುದೇ ತುಣುಕನ್ನು ಯೂಟ್ಯೂಬ್ನಲ್ಲಿ ರಿಲೀಸ್ ಮಾಡುತ್ತಿರಲಿಲ್ಲ. ಆದರೆ ಪ್ರಚಾರದ ಸಲುವಾಗಿ ಮಾಡಿದ್ದೇವೆ’ ಎಂದು ಓಂ ರಾವತ್ ಹೇಳಿದ್ದಾರೆ.
‘ಆದಿಪುರುಷ್’ ಟೀಸರ್ನಲ್ಲಿನ ಅನೇಕ ವಿಚಾರಗಳ ಬಗ್ಗೆ ಜನರು ತಕರಾರು ತೆಗೆದಿದ್ದಾರೆ. ಇದರಲ್ಲಿ ರಾವಣನ ಪಾತ್ರವನ್ನು ಸೈಫ್ ಅಲಿ ಖಾನ್ ಮಾಡಿದ್ದಾರೆ. ಅವರು ರಾವಣನ ರೀತಿ ಕಾಣಿಸುವ ಬದಲು ಅಲ್ಲಾವುದ್ದೀನ್ ಖಿಲ್ಜಿ ರೀತಿ ಕಾಣುತ್ತಿದ್ದಾರೆ ಎಂದು ಕೆಲವರು ಟೀಕೆ ಮಾಡಿದ್ದಾರೆ. ವಾನರ ಸೇನೆಯ ಕೋತಿಗಳು ಕೂಡ ಬೇರೆ ಪ್ರಾಣಿಗಳ ರೀತಿಯಲ್ಲಿ ಕಾಣುತ್ತಿವೆ ಎಂಬ ಕಮೆಂಟ್ಸ್ ಬಂದಿವೆ. ‘ಗೇಮ್ ಆಫ್ ಥ್ರೋನ್ಸ್’ ದೃಶ್ಯಗಳನ್ನು ಕಾಪಿ ಮಾಡಲಾಗಿದೆ ಎಂದು ಕೂಡ ಕೆಲವರು ಆರೋಪಿಸಿದ್ದಾರೆ.
ಎಷ್ಟೇ ಟೀಕೆ ಕೇಳಿಬಂದರೂ ನಿರ್ದೇಶಕ ಓಂ ರಾವತ್ ತಲೆ ಕೆಡಿಸಿಕೊಂಡಿಲ್ಲ. ಈ ಸಿನಿಮಾ 3ಡಿ ವರ್ಷನ್ನಲ್ಲೂ ಬಿಡುಗಡೆ ಆಗಲಿದೆ. ಚಿತ್ರಮಂದಿರದಲ್ಲಿ ಸಿನಿಮಾ ನೋಡಿದಾಗ ಗ್ರಾಫಿಕ್ಸ್ ಚೆನ್ನಾಗಿ ಕಾಣಲಿದೆ ಎಂಬುದು ಅವರ ಅಭಿಪ್ರಾಯ. ಈ ಕುರಿತಂತೆ ಅಭಿಮಾನಿಗಳ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
ಬಹುಕೋಟಿ ರೂಪಾಯಿ ಬಜೆಟ್ನಲ್ಲಿ ‘ಆದಿಪುರುಷ್’ ಚಿತ್ರ ಮೂಡಿಬರುತ್ತಿದೆ. 2023ರ ಜನವರಿ 12ರಂದು ಈ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಲಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಪ್ರದರ್ಶನ ಕಾಣಲಿದೆ. ಎಲ್ಲ ಭಾಷೆಯಲ್ಲಿಯೂ ಟೀಸರ್ ರಿಲೀಸ್ ಆಗಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.