ಆದಿಪುರುಷ್ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆಗೆ ಮುನ್ನ ಸಿನಿಮಾ ಗಳಿಸಿರುವುದೆಷ್ಟು?

|

Updated on: Jun 02, 2023 | 10:21 PM

Adipurush: ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಆದರೆ ಬಿಡುಗಡೆಗೆ ಮುನ್ನವೇ ಭಾರಿ ದೊಡ್ಡ ಮೊತ್ತವನ್ನು ಗಳಿಸಿಕೊಂಡಿದೆ. ಎಷ್ಟು? ಹೇಗೆ? ಇಲ್ಲಿ ತಿಳಿಯಿರಿ...

ಆದಿಪುರುಷ್ ಸಿನಿಮಾದ ಬಜೆಟ್ ಎಷ್ಟು? ಬಿಡುಗಡೆಗೆ ಮುನ್ನ ಸಿನಿಮಾ ಗಳಿಸಿರುವುದೆಷ್ಟು?
ಆದಿಪುರುಷ್
Follow us on

ಇದು ಬಿಗ್ ಬಜೆಟ್ (Big Budget)​ ಸಿನಿಮಾಗಳ ಜಮಾನ. ಪ್ಯಾನ್ ಇಂಡಿಯಾ (Pan India) ಸಿನಿಮಾ ಕಾನ್ಸೆಪ್ಟ್ ಬಂದ ಬಳಿಕವಂತೂ ಬಿಗ್​ಬಜೆಟ್ ಸಿನಿಮಾಗಳು ಒಂದರ ಹಿಂದೊಂದು ಬಿಡುಗಡೆ ಆಗುತ್ತಿವೆ. ಹಲವು ಬಿಗ್​ಬಜೆಟ್ ಸಿನಿಮಾಗಳ ಬಂಡವಾಳ ವಾಪಸ್ಸಾಗುವುದು ಮಾತ್ರವೇ ಅಲ್ಲದೆ ಭಾರಿ ದೊಡ್ಡ ಹಿಟ್ ಸಹ ಆಗುತ್ತಿವೆ. ಕೆಲವು ಸ್ಟಾರ್ ನಟರ ಸಿನಿಮಾಗಳಂತೂ ಬಿಡುಗಡೆಗೆ ಮೊದಲೇ ಹಾಕಿರುವ ಬಂಡವಾಳದ ಮೇಲೆ ಲಾಭದ ಮೊತ್ತವನ್ನೂ ಗಳಿಸಿಕೊಳ್ಳುತ್ತಿವೆ. ಇದೀಗ ಮತ್ತೊಂದು ಬಿಗ್​ಬಜೆಟ್ ಸಿನಿಮಾ ಬಿಡುಗಡೆಗೆ ತಯಾರಾಗಿದ್ದು ಈ ಸಿನಿಮಾ ಸಹ ಬಿಡುಗಡೆಗೆ ಮುನ್ನ ದೊಡ್ಡ ಮೊತ್ತದ ಬ್ಯುಸಿನೆಸ್ ಮಾಡಿದೆ. ಅದುವೆ ಪ್ರಭಾಸ್ ನಟನೆಯ ಆದಿಪುರುಷ್ (Adipurush).

ಪ್ರಭಾಸ್, ಕೃತಿ ಸೆನನ್ ನಟಿಸಿರುವ ರಾಮಾಯಣದ ಕತೆ ಆಧರಿಸಿದ ಆದಿಪುರುಷ್ ಸಿನಿಮಾ ಜೂನ್ 16ಕ್ಕೆ ವಿಶ್ವದಾದ್ಯಂತ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ. ಭಾರತದ ಈ ವರೆಗೆ ದೊಡ್ಡ ಬಜೆಟ್ ಸಿನಿಮಾ ಎಂಬ ಖ್ಯಾತಿ ಈ ಸಿನಿಮಾಕ್ಕಿದೆ. ಟಿ-ಸಿರೀಸ್ ಸಂಸ್ಥೆಯ ಮಾಲೀಕ ಭೂಷಣ್ ಕುಮಾರ್ ಈ ಸಿನಿಮಾಕ್ಕೆ ಬಂಡವಾಳ ಹೂಡಿದ್ದು, ಸಿನಿಮಾಕ್ಕೆ ಬರೋಬ್ಬರಿ 500 ಕೋಟಿ ಬಂಡವಾಳ ಹೂಡಿದ್ದಾರಂತೆ. ಇಷ್ಟು ದೊಡ್ಡ ಬಜೆಟ್ ಹಾಕಲಾಗಿರುವ ಆದಿಪುರುಷ್ ಸಿನಿಮಾ ಬಿಡುಗಡೆಗೆ ಮುನ್ನವೇ ದೊಡ್ಡ ಮೊತ್ತದ ಬ್ಯುಸಿನೆಸ್ ಸಹ ಮಾಡಿದೆ.

ಆದಿಪುರುಷ್ ಸಿನಿಮಾವು 430 ಕೋಟಿ ಹಣವನ್ನು ಬಿಡುಗಡೆಗೆ ಮುಂಚೆಯೇ ಗಳಿಸಿದೆ ಎನ್ನಲಾಗುತ್ತಿದೆ. ಸಿನಿಮಾದ ಎಲ್ಲ ಭಾಷೆಯ ಸ್ಯಾಟಲೈಟ್ ಹಾಗೂ ಡಿಜಿಟಲ್ ಹಕ್ಕುಗಳಿಂದ 230 ಕೋಟಿ ರುಪಾಯಿ ಈಗಾಗಲೇ ವಾಪಸ್ಸಾಗಿದೆಯಂತೆ. ಸಿನಿಮಾದ ದಕ್ಷಿಣ ಭಾರತದ ಬಿಡುಗಡೆ ಹಕ್ಕು 180 ಕೋಟಿಗೆ ಮಾರಾಟವಾಗಿದ್ದು ಅದೂ ಕಮೀಷನ್ ಮಾದರಿಯಲ್ಲಿ ಈ ಮಾರಾಟ ಒಪ್ಪಂದ ನಡೆದಿದೆಯಂತೆ. ಅಂದರೆ ಸಿನಿಮಾದ ಬಿಡುಗಡೆ ಬಳಿಕವೂ ದೊಡ್ಡ ಮೊತ್ತದ ಹಣ ವಿತರಕರಿಂದ ನಿರ್ಮಾಪಕರಿಗೆ ಸೇರಲಿದೆ. ಇನ್ನು ಸಿನಿಮಾದ ಆಡಿಯೋ ಹಕ್ಕು ಹಾಗೂ ವಿದೇಶದಲ್ಲಿ ಬಿಡುಗಡೆ ಹಕ್ಕುಗಳು ನಿರ್ಮಾಪಕರ ಸಂಸ್ಥೆಯಾದ ಟಿ-ಸೀರೀಸ್ ಬಳಿಯೇ ಇದ್ದು, ಇವುಗಳಿಂದಲೂ ಭಾರಿ ದೊಡ್ಡ ಮೊತ್ತವೇ ನಿರ್ಮಾಪಕರ ಜೇಬು ಸೇರಲಿದೆ.

ಇದನ್ನೂ ಓದಿ:‘ಆದಿಪುರುಷ್’ ಚಿತ್ರದ ಮತ್ತೊಂದು ಟ್ರೇಲರ್ ನೋಡಲು ರೆಡಿ ಆಗಿ; ಇದರಲ್ಲಿ ಇರಲಿದೆ ದೃಶ್ಯ ವೈಭವ

ಈ ಹಿಂದೆ ಕೆಜಿಎಫ್ 2, ಆರ್​ಆರ್​ಆರ್ ಸಿನಿಮಾ ರೀತಿಯಲ್ಲಿ ಆದಿಪುರುಷ್ ಸಿನಿಮಾ ಸಹ 1000 ಕೋಟಿ ಕಲೆಕ್ಷನ್ ಅನ್ನು ದಾಟಲಿದೆ ಎಂಬ ಲೆಕ್ಕಾಚಾರವನ್ನು ಕೆಲವು ಟ್ರೇಡ್ ವಿಶ್ಲೇಷಕರು ಹಾಕಿದ್ದಾರೆ. ಸಿನಿಮಾದ ಬಿಡುಗಡೆ ಜೂನ್ 16ಕ್ಕೆ ಆಗಲಿದ್ದು, ಪ್ರಭಾಸ್ ಹಾಗೂ ಚಿತ್ರತಂಡ ದೊಡ್ಡ ಮಟ್ಟದ ಪ್ರಚಾರವನ್ನೇನೂ ಮಾಡುತ್ತಿಲ್ಲ. ಬದಲಿಗೆ ಪೋಸ್ಟರ್, ಟೀಸರ್, ಟ್ರೈಲರ್​ಗಳ ಮೂಲಕ ಡಿಜಿಟಲ್ ಪ್ರಚಾರಕ್ಕಷ್ಟೆ ಸದ್ಯಕ್ಕೆ ಸೀಮಿತವಾಗಿದ್ದಾರೆ. ಆನ್​ಫೀಲ್ಡ್ ಪ್ರಚಾರವನ್ನು ದೊಡ್ಡಮಟ್ಟದಲ್ಲಿ ಇನ್ನೂ ಆರಂಭಿಸಿಲ್ಲ, ಇದರಿಂದ ಸಿನಿಮಾಕ್ಕೆ ಹಿನ್ನಡೆ ಆಗುವ ಸಾಧ್ಯತೆಯೂ ಇದೆ.

ಆದಿಪುರುಷ್ ಸಿನಿಮಾವನ್ನು ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಓಂ ರಾವತ್ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಶ್ರೀರಾಮನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದು ಸೀತಾಮಾತೆಯ ಪಾತ್ರದಲ್ಲಿ ಕೃತಿ ಸೆನನ್ ನಟಿಸಿದ್ದಾರೆ. ರಾವಣನಾಗಿ ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ ನಟಿಸಿದ್ದಾರೆ. ಭಾರಿ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ