
ಬಾಲಿವುಡ್ನಲ್ಲಿ (Bollywood) ನೆಪೊಟಿಸಂ ಚರ್ಚೆ ವರ್ಷಗಳಿಂದಲೂ ನಡೆಯುತ್ತಲೇ ಬಂದಿದೆ. ಬಾಲಿವುಡ್ ಹೇಗೆ ನೆಪೊಟಿಸಂ ಅನ್ನು ಸಾಕುತ್ತಾ, ಚಿತ್ರರಂಗದ ಹಿನ್ನೆಲೆ ಇರದವರನ್ನು ನಿರ್ಲಕ್ಷಿಸುತ್ತಾ ಬಂದಿದೆ. ಸುಶಾಂತ್ ಸಿಂಗ್ ನಿಧನದ ಬಳಿಕ ಈ ಚರ್ಚೆ ಇನ್ನಷ್ಟು ಹೆಚ್ಚಾಗಿದೆ. ಆದರೆ ಇದೀಗ ಹಿರಿಯ ನಟನೊಬ್ಬ ಬಾಲಿವುಡ್ನಲ್ಲಿ ನೆಪೊಟಿಸಂಗಿಂತಲೂ ಒಳ ರಾಜಕೀಯ ಇನ್ನೂ ಕೆಟ್ಟದಾಗಿದೆ, ಅದು ನೆಪೊಟಿಸಂಗಿಂತಲೂ ಅಪಾಯಕಾರಿ ಎಂದಿದ್ದು, ತಮ್ಮದೇ ಉದಾಹರಣೆಯನ್ನು ಅವರು ನೀಡಿದ್ದಾರೆ.
ಆದಿತ್ಯ ಪಂಚೋಲಿ, ಬಾಲಿವುಡ್ನ ಹಿರಿಯ ನಟ. ಚಿತ್ರರಂಗದ ಹಿನ್ನೆಲೆಯಿಂದ ಬಂದಿದ್ದ ಆದಿತ್ಯ ಪಂಚೋಲಿ, 80, 90ರ ದಶಕದ ಹಲವಾರು ಹಿಂದಿ ಸಿನಿಮಾಗಳಲ್ಲಿ ನಾಯಕ ನಟನಾಗಿ, ಪೋಷಕ ನಟನಾಗಿ ಕೆಲವು ಸಿನಿಮಾಗಳಲ್ಲಿ ವಿಲನ್ ಆಗಿಯೂ ಮಿಂಚಿದ್ದಾರೆ. ಈಗಲೂ ನಟನೆಯಲ್ಲಿ ಸಕ್ರಿಯವಾಗಿರುವ ಆದಿತ್ಯ ಪಂಚೋಲಿ ಇತ್ತೀಚೆಗೆ ಬಿಡುಗಡೆ ಆದ ‘ವಾರ್ 2’ ಸಿನಿಮಾನಲ್ಲಿ ನಟಿಸಿದ್ದಾರೆ. ಈಗ ಆಲಿಯಾ ಭಟ್ ನಟನೆಯ ‘ಆಲ್ಫಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.
ಇದೀಗ ಆದಿತ್ಯ ಪಂಚೋಲಿ ಮಾಡಿರುವ ಟ್ವೀಟ್ ಬಾಲಿವುಡ್ನಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ. ಹೇಗೆ ತಮ್ಮಿಂದ ಸಿನಿಮಾ ಅನ್ನು ಕಿತ್ತುಕೊಳ್ಳಲಾಯ್ತು ಎಂದು ಅವರು ಟ್ವೀಟ್ನಲ್ಲಿ ವಿವರಿಸಿದ್ದಾರೆ. ಜೊತೆಗೆ ಬಾಲಿವುಡ್ನ ಒಳರಾಜಕೀಯಗಳನ್ನು ತೆರೆದಿಟ್ಟಿದ್ದಾರೆ. ‘1988 ರಲ್ಲಿ ಬಿಡುಗಡೆ ಆದ ಸೂಪರ್ ಹಿಟ್ ಸಿನಿಮಾ ‘ತೇಜಾಬ್’ಗೆ ಮಾಧುರಿ ದೀಕ್ಷಿತ್ ಎದುರು ನಾನು ನಾಯಕನಾಗಿ ಆಯ್ಕೆ ಆಗಿದ್ದೆ. ಇದಕ್ಕೆ ಆ ಸಿನಿಮಾದ ನಿರ್ದೇಶಕ ಚಂದ್ರ ಅವರೇ ಸಾಕ್ಷಿ. ಆದರೆ ನಾಯಕನೊಬ್ಬ ತನ್ನ ಅಣ್ಣನ ಮೂಲಕ ನಿರ್ಮಾಪಕರ ಮೇಲೆ ಪ್ರಭಾವ ಬೀರಿ ನನ್ನನ್ನಿಂದ ಪಾತ್ರವನ್ನು ಕಿತ್ತುಕೊಂಡ’ ಎಂದಿದ್ದಾರೆ.
ಇದನ್ನೂ ಓದಿ:ಬಾಲಿವುಡ್ಗೆ ಕಾಲಿಟ್ಟ ಸೂಪರ್ ಮಾಡೆಲ್ ವರ್ತಿಕಾ ಸಿಂಗ್: ಯಾರೀಕೆ?
‘ತೇಜಾಬ್’ ಸಿನಿಮಾನಲ್ಲಿ ಮಾಧುರಿ ದೀಕ್ಷಿತ್ ಎದುರು ಅನಿಲ್ ಕಪೂರ್ ನಾಯಕನಾಗಿ ನಟಿಸಿದ್ದಾರೆ. ಆ ಸಿನಿಮಾ ಭಾರಿ ದೊಡ್ಡ ಹಿಟ್ ಆಯ್ತು. ಆದಿತ್ಯ ಹೇಳಿರುವಂತೆ, ಅನಿಲ್ ಕಪೂರ್ ಅವರು ತಮ್ಮ ಸಹೋದರ ಬೋನಿ ಕಪೂರ್ ಅವರ ಕಡೆಯಿಂದ ‘ತೇಜಾಬ್’ ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕ ಎರಡೂ ಆಗಿದ್ದ ಚಂದ್ರ ಮೇಲೆ ಒತ್ತಡ ಹೇರಿಸಿ ಪಾತ್ರವನ್ನು ತಮ್ಮದಾಗಿಸಿಕೊಂಡರಂತೆ.
ಟ್ವೀಟ್ನಲ್ಲಿ ಈ ಬಗ್ಗೆ ಹೇಳಿರುವ ಆದಿತ್ಯ, ‘ಆ ಸಿನಿಮಾ ಸೂಪರ್ ಹಿಟ್ ಆಯ್ತು, ಮುಂದಿನದ್ದು ಇತಿಹಾಸ. ಸಿನಿಮಾ ರಂಗದಲ್ಲಿ ರಾಜಕೀಯ ಎಂಬುದು ನೆಪೊಟೀಸಂಗಿಂತಲೂ ಅಪಾಯಕಾರಿ, ಅದು ಬಾಲಿವುಡ್ನ ಬೇರುಗಳ ವರೆಗೆ ತಲುಪಿದೆ. ಪಕ್ಷಪಾತ, ಕುತಂತ್ರ ಮತ್ತು ಅಧಿಕಾರದ ಆಟಗಳು ನೆಪೊಟೀಸಂಗಿಂತಲೂ ಚೆನ್ನಾಗಿ ವೃತ್ತಿಜೀವನವನ್ನು ರೂಪಿಸುತ್ತವೆ ಬಾಲಿವುಡ್ನಲ್ಲಿ’ ಎಂದಿದ್ದಾರೆ ನಟ.
‘ತೇಜಾಬ್’ ಸಿನಿಮಾ ಬಿಡುಗಡೆ ಆಗುವ ವೇಳೆಗೆ ಅನಿಲ್ ಕಪೂರ್ ನಾಯಕನಾಗಿ ಹೆಸರು ಮಾಡಿದ್ದರು. ‘ತೇಜಾಬ್’ ಸಿನಿಮಾದ ಬಳಿಕ ಅವರ ಸ್ಟಾರ್ಡಂ ಇನ್ನೂ ಹೆಚ್ಚಾಯ್ತು. ಆದರೆ ಆದಿತ್ಯ ಪಂಚೋಲಿ ಆಗಷ್ಟೆ ಚಿತ್ರರಂಗಕ್ಕೆ ಬಂದಿದ್ದರು. ಅವರು ಈಗ ಹೇಳಿರುವಂತೆ, ‘ತೇಜಾಬ್’ ಅವರಿಗೆ ಸಿಕ್ಕಿದ್ದರೆ ಅವರು ದೊಡ್ಡ ಸ್ಟಾರ್ ಆಗಿರುತ್ತಿದ್ದರಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:53 pm, Tue, 28 October 25