ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ (Aishwarya Rai) ಚಿತ್ರರಂಗದಲ್ಲಿ 26 ವರ್ಷಗಳನ್ನು ಕಳೆದಿದ್ದಾರೆ. ಮಣಿರತ್ನಂ ನಿರ್ದೇಶನದ ಇರುವರ್ (Iruvar) ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಐಶ್ವರ್ಯಾ ರೈ ಆ ಬಳಿಕ ಹಿಂತಿರುಗಿ ನೋಡಿದ್ದಿಲ್ಲ. ಅದ್ಭುತ ಸುಂದರಿ, ಅದ್ಭುತ ನಟಿಯಾಗಿದ್ದರೂ ಸಹ ತಮ್ಮ ಕಾಲಘಟ್ಟದ ಕೆಲವು ನಟಿಯರಿಗೆ ಹೋಲಿಸಿದರೆ ಐಶ್ವರ್ಯಾ ರೈ ನಟಿಸಿರುವುದು ಕಡಿಮೆ ಸಿನಿಮಾಗಳಲ್ಲಿಯೇ. ಅದಕ್ಕೆ ಕಾರಣ ಅವರು ಪಾತ್ರಗಳನ್ನು ಆಯ್ದುಕೊಳ್ಳುತ್ತಿದ್ದ ರೀತಿ. ಕೇವಲ ಗ್ಲಾಮರ್ಗೆ ಸ್ಕೋಪ್ ಇರುವ ಪಾತ್ರಗಳನ್ನಲ್ಲದೆ ನಟನೆಗೆ ಅವಕಾಶವುಳ್ಳ, ಕತೆಯಲ್ಲಿ ಪ್ರಾಮುಖ್ಯತೆ ಇರುವ ಪಾತ್ರಗಳನ್ನಷ್ಟೆ ಐಶ್ವರ್ಯಾ ಒಪ್ಪಿ ನಟಿಸುತ್ತಾ ಬರುತ್ತಿರುವ ಕಾರಣ ಅವರ ಫಿಲ್ಮೊಗ್ರಫಿಯಲ್ಲಿ ದೊಡ್ಡ ಸಂಖ್ಯೆಯ ಸಿನಿಮಾಗಳಿಲ್ಲ.
ಇತ್ತೀಚೆಗೆ ಮಣಿರತ್ನಂ (Mani Ratnam) ನಿರ್ದೇಶನದ ಪೊನ್ನಿಯಿನ್ ಸೆಲ್ವನ್ ಭಾಗ 1 ಹಾಗೂ 2ರಲ್ಲಿ ನಟಿಸಿರುವ ಐಶ್ವರ್ಯಾ ರೈ, ಫಿಲಂ ಕೊಂಪ್ಯಾನಿಯನ್ಗೆ ನೀಡಿರುವ ಸಂದರ್ಶನದಲ್ಲಿ, ತಮಗೆ ಬಾಲಿವುಡ್ನಿಂದ ಒಳ್ಳೆಯ ಪಾತ್ರದ ಅವಕಾಶಗಳು ಕಡಿಮೆ ಬಂದಿವೆ ಹಾಗೂ ಬರುತ್ತಿವೆ ಎಂದು ಒಪ್ಪಿಕೊಂಡಿದ್ದಾರೆ. ”ಈ ಪ್ರಶ್ನೆಯನ್ನು ಹಲವರು ಕೇಳುತ್ತಾರೆ. ಯಾವುದೋ ಒಂದು ಪಾತ್ರವು ಜನರಿಗೆ, ನಟರಿಗೆ ಹಾಗೂ ನಿರ್ದೇಶಕರಿಗೂ ಸೂಕ್ತ ಎನಿಸಿದಾಗ ಈ ರೀತಿಯ ಪ್ರಶ್ನೆಗಳು ಸಹಜವಾಗಿಯೇ ಹುಟ್ಟುತ್ತವೆ. ಈ ರೀತಿಯ ಪ್ರಶ್ನೆಗಳು ಹುಟ್ಟುವುದು ನಟರಿಗೆ ಒಂದು ರೀತಿಯ ಪ್ರಶಂಸೆಯೇ. ಇಂಥಹಾ ಶಕ್ತಿಯುತ ಪಾತ್ರಗಳನ್ನು ಸೃಷ್ಟಿಸುವ ಕಾರಣಕ್ಕೆ ನಾವು ಮಣಿರತ್ನಂ ಅವರನ್ನು ಅಷ್ಟಾಗಿ ಗೌರವಿಸುವುದು, ಹೊಗಳುವುದು” ಎಂದಿದ್ದಾರೆ ನಟಿ.
ಮಣಿರತ್ನಂರ ಇರುವರ್ ಸಿನಿಮಾ ಮೂಲಕ ನಟನೆಗೆ ಕಾಲಿಟ್ಟ ಐಶ್ವರ್ಯಾ ರೈ ಅವರ ನಿರ್ದೇಶನದ ಗುರು, ರಾವಣನ್ ಸಿನಿಮಾದಲ್ಲಿ ನಟಿಸಿದ್ದರು. ಅದಾದ ಬಳಿಕ ಇತ್ತೀಚೆಗೆ ಪೊನ್ನಿಯಿನ್ ಸೆಲ್ವನ್ 1 ಹಾಗೂ 2 ಸಿನಿಮಾಗಳಲ್ಲಿ ನಾಐಕಿಯಾಗಿ ನಟಿಸಿದ್ದಾರೆ. ತಾವು ಈ ವರೆಗೆ ನಟಿಸಿರುವ ಪಾತ್ರಗಳಲ್ಲಿ ಪೊನ್ನಿಯಿನ್ ಸೆಲ್ವನ್ ಸಿನಿಮಾದ ನಂದಿನಿ ಪಾತ್ರ ಅತ್ಯುತ್ತಮ ಎಂದು ಐಶ್ವರ್ಯಾ ರೈ ಹೇಳಿಕೊಂಡಿದ್ದಾರೆ. ಬಾಲಿವುಡ್ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿರುವ ಐಶ್ವರ್ಯಾ ರೈಗೆ ಅತ್ಯುತ್ತಮ ಪಾತ್ರಗಳನ್ನು ನೀಡುವುದು ತಮಿಳು ಸಿನಿಮಾಗಳೇ, ಮಣಿರತ್ನಂ ಹಾಗೂ ಶಂಕರ್ ಅವರ ಸಿನಿಮಾಗಳಲ್ಲಿನ ಪಾತ್ರಗಳು ಐಶ್ವರ್ಯಾ ರೈಗೆ ದೊಡ್ಡ ಹೆಸರು ತಂದುಕೊಟ್ಟಿವೆ.
ಇದನ್ನೂ ಓದಿ:ಮಣಿರತ್ನಂ ಕಾಲಿಗೆ ನಮಸ್ಕರಿಸಿದ ಐಶ್ವರ್ಯಾ ರೈ; ನಿರ್ದೇಶಕನ ಬಗ್ಗೆ ನಟಿಗೆ ಇದೆ ವಿಶೇಷ ಗೌರವ
ಆರಂಭದಲ್ಲಿ ಬಾಲಿವುಡ್ನಲ್ಲಿ ಕೆಲವು ಹಿನ್ನಡೆಗಳನ್ನು ಸಹ ನಟಿ ಐಶ್ವರ್ಯಾ ರೈ ಎದುರಿಸಿದ್ದರು. ಸಲ್ಮಾನ್ ಖಾನ್ ಜೊತೆಗೆ ಕೆಟ್ಟ ಬ್ರೇಕಪ್ ಬಳಿಕವಂತೂ ಹಲವು ಸಿನಿಮಾಗಳಿಂದ ಐಶ್ವರ್ಯಾ ರೈ ಅವರನ್ನು ಹೊರಗಿಡಲಾಗಿತ್ತು. ಐಶ್ವರ್ಯಾ ರೈ ಗೆ ಅಡ್ವಾನ್ಸ್ ನೀಡಿದ್ದ ಸಿನಿಮಾಗಳಿಂದಲೂ ಸಹ ಅವರನ್ನು ಕೈಬಿಡಲಾಗಿತ್ತು. ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಅವರನ್ನು ದೂರ ಇಟ್ಟವು. ಹಾಗಿದ್ದರೂ ಸಹ ಐಶ್ವರ್ಯಾ ರೈ ಹಲವು ನೆನಪುಳಿವ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿಂದಿಯ ತಾಲ್, ಹಮ್ ದಿಲ್ ದೇಚುಕೆ ಸನಮ್, ಮೊಹಾಬತ್ತೇನ್, ದೇವ್ದಾಸ್, ಗುರು, ಧೂಮ್ 2, ಜೋಧಾ ಅಕ್ಬರ್, ಸರ್ಕಾರ್ ರಾಜ್, ಗುಜಾರಿಷ್, ಸರಬ್ಜಿತ್ ಇನ್ನೂ ಕೆಲವು ನೆನಪುಳಿವ ಸಿನಿಮಾಗಳಲ್ಲಿ ಐಶ್ವರ್ಯಾ ನಟಿಸಿದ್ದಾರೆ. ಪೊನ್ನಿಯಿನ್ ಸೆಲ್ವನ್ ಬಳಿಕ ಯಾವುದೇ ಸಿನಿಮಾಗಳನ್ನು ಐಶ್ವರ್ಯಾ ರೈ ಒಪ್ಪಿಕೊಂಡಿಲ್ಲ. ಪ್ರಸ್ತುತ ಅವರು ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ