ಐಫಾ ಉತ್ಸವ್ 2024 ಕಾರ್ಯಕ್ರಮವು ಅಬು ಧಾಬಿಯ ಯಾಸ್ ದ್ವೀಪದಲ್ಲಿ ನಡೆಯುತ್ತಿದೆ. ದಕ್ಷಿಣದ ಸ್ಟಾರ್ ಕಲಾವಿದರು ಹಾಗೂ ಬಾಲಿವುಡ್ ಸಿನಿಮಾ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದಾರೆ. ಈ ವೇದಿಕೆ ಹಲವು ಅಪರೂಪದ ಕ್ಷಣಗಳಿಗೆ ಸಾಕ್ಷಿ ಆಗಿದೆ. ಮಣಿರತ್ನಂ ಅವರ ಕಾಲಿಗೆ ನಟಿ ಐಶ್ವರ್ಯಾ ರೈ ನಮಸ್ಕರಿಸಿದ್ದು ವಿಶೇಷ ಕ್ಷಣ ಆಗಿತ್ತು.
ಮಣಿ ರತ್ನಂ ಅವರು ‘ಪೊನ್ನಿಯಿನ್ ಸೆಲ್ವನ್: II’ ಚಿತ್ರದ ನಿರ್ದೇಶನಕ್ಕೆ ಅವಾರ್ಡ್ ಪಡೆದರು. ತಮಿಳಿನ ಅತ್ಯುತ್ತಮ ನಿರ್ದೇಶಕ ಎಂಬ ಪಟ್ಟ ಅವರಿಗೆ ಸಿಕ್ಕಿತು. ಇದರಿಂದ ಐಶ್ವರ್ಯಾ ಕೂಡ ಖುಷಿ ಆದರು. ತಮ್ಮ ಗುರುವಿನ ಕಾಲಿಗೆ ಅವರು ನಮಸ್ಕರಿಸಿದರು. ಕೆಲವು ಸಿನಿಮಾಗಳಲ್ಲಿ ಐಶ್ವರ್ಯಾ ಹಾಗೂ ಮಣಿರತ್ನಂ ಒಟ್ಟಾಗಿ ಕೆಲಸ ಮಾಡಿದ್ದಾರೆ.
ಐಶ್ವರ್ಯಾ ಅವರು ವೇದಿಕೆ ಏರಿ ಮಣಿರತ್ನಂ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು. ‘ಆರಂಭದಿಂದಲೂ ಅವರು ನನ್ನ ಗುರು. ಅವರ ಜೊತೆ ಕೆಲಸ ಮಾಡೋಕೆ ಖುಷಿ ಆಗುತ್ತದೆ. ಪೊನ್ನಿಯಿನ್ ಸೆಲ್ವನ್ನಲ್ಲಿ ನಂದಿನಿ ಪಾತ್ರ ಮಾಡಿದ್ದಕ್ಕೆ ಖುಷಿ ಇದೆ. ಅವರ ಜೊತೆ ಯಶಸ್ಸನ್ನು ಆಚರಿಸೋಕೆ ಖುಷಿ ಆಗುತ್ತದೆ’ ಎಂದಿದ್ದಾರೆ ಐಶ್ವರ್ಯಾ. ಮಣಿರತ್ನಂ ನಿರ್ದೇಶನದ ಐದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮಣಿರತ್ನಂ ನಿರ್ದೇಶನದ ‘ಇರುವರ್’, ‘ರಾವಣನ್’, ‘ಗುರು’, ‘ಪೊನ್ನಿಯನ್ ಸೆಲ್ವನ್’ ಸಿನಿಮಾದ ಎರಡು ಭಾಗಗಳಲ್ಲಿ ಐಶ್ವರ್ಯಾ ನಟಿಸಿದ್ದಾರೆ.
ಇದನ್ನೂ ಓದಿ:ವಿಚ್ಛೇದನ ವಿಚಾರ ಬರೀ ಫೇಕ್: ಒಂದೇ ವಿಡಿಯೋದಿಂದ ಸ್ಪಷ್ಟನೆ ಕೊಟ್ಟ ಐಶ್ವರ್ಯಾ ರೈ
‘ಪೊನ್ನಿಯಿನ್ ಸೆಲ್ವನ್: II’ ಚಿತ್ರಕ್ಕೆ ಹಲವು ಅವಾರ್ಡ್ಳು ಸಿಕ್ಕವು. ವಿಕ್ರಮ್ ಅವರಿಗೆ ‘ಅತ್ಯುತ್ತಮ ನಟ’ (ತಮಿಳು), ಐಶ್ವರ್ಯಾ ರೈ ಅತ್ಯುತ್ತಮ ನಟಿ (ತಮಿಳು) ಸಿಕ್ಕಿತು. ಮಣಿರತ್ನಂ ಅವರು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿ ಪಡೆದರು. ಈ ಮೂಲಕ ಪ್ರಮುಖ ಅವಾರ್ಡ್ಗಳು ‘ಪೊನ್ನಿಯಿನ್ ಸೆಲ್ವನ್: II’ ಪಾಲಾಯಿತು.
‘ನಾಮಿನೇಟ್ ಆದ ಎಲ್ಲರೂ ವಿನ್ನರ್ಗಳು. ಪ್ರೇಕ್ಷಕರು ಸಿನಿಮಾನ ಮೆಚ್ಚುತ್ತಿದ್ದಾರೆ. ನಿಮ್ಮ ಪ್ರೀತಿಗೆ ಧನ್ಯವಾದ. ನಿಮ್ಮ ಬೆಂಬಲಕ್ಕೆ ಧನ್ಯವಾದ’ ಎಂದು ಐಶ್ವರ್ಯಾ ಹೇಳಿದ್ದಾರೆ. ರಜನಿಕಾಂತ್ ನಟನೆಯ ‘ಜೈಲರ್’ ಸಿನಿಮಾ ಅತ್ಯುತ್ತಮ ಸಿನಿಮಾ ಅವಾರ್ಡ್ ಪಡೆಯಿತು. ನಾನಿ ನಟನೆಯ ‘ದಸರಾ’ ತೆಲುಗು ವಿಭಾಗದಲ್ಲಿ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ.
ಈ ಕಾರ್ಯಕ್ರಮದಲ್ಲಿ ರಾನಾ ದಗ್ಗುಬಾಟಿ, ಚಿರಂಜೀವಿ, ಎಆರ್ ರೆಹಮಾನ್, ನಂದಮೂರಿ ಬಾಲಕೃಷ್ಣ, ಸಮಂತಾ, ಕರಣ್ ಜೋಹರ್, ವಿಕ್ಕಿ ಕೌಶಲ್, ರಿಷಬ್ ಶೆಟ್ಟಿ ಭಾಗಿ ಆಗಿದ್ದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ