
ಬಾಲಿವುಡ್ನ ಖ್ಯಾತ ತಾರೆಯರಾದ ಅಕ್ಷಯ್ ಕುಮಾರ್, ರಣವೀರ್ ಸಿಂಗ್ ಹಾಗೂ ಅಜಯ್ ದೇವಗನ್ ಒಂದಾಗಿ ಅಭಿಮಾನಿಗಳಿಗೆ ಬೇಡಿಕೆಯೊಂದನ್ನು ಸಲ್ಲಿಸಿದ್ದಾರೆ. ಅದರಲ್ಲಿ ಅಕ್ಷಯ್ ಕೈ ಮುಗಿದು ಮನವಿ ಕೂಡ ಸಲ್ಲಿಸಿದ್ದಾರೆ. ಈ ತಾರೆಯರು ಅಭಿಮಾನಿಗಳಲ್ಲಿ ಎಂತಹ ಕೋರಿಕೆ ಇಟ್ಟಿರಬಹುದು ಎಂದು ಯೋಚಿಸುತ್ತಿದ್ದೀರಾ? ದೀಪಾವಳಿಯ ಸಂಭ್ರಮದಲ್ಲಿ ಈ ಮೂವರು ನಟಿಸಿರುವ ಬಹುನಿರೀಕ್ಷಿತ ‘ಸೂರ್ಯವಂಶಿ’ ಚಿತ್ರ ಬಿಡುಗಡೆಯಾಗುತ್ತಿದೆ. ಆದ್ದರಿಂದ ಚಿತ್ರಪ್ರೇಮಿಗಳು ಚಿತ್ರಮಂದಿರಕ್ಕೆ ಮತ್ತೆ ಆಗಮಿಸಿ ಸಿನಿಮಾವನ್ನು ಯಶಸ್ವಿಗೊಳಿಸಬೇಕು ಎಂದು ನಟರು ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.
ಅಕ್ಷಯ್ ಕುಮಾರ್ ಟ್ವಿಟರ್ನಲ್ಲಿ ಪ್ರೋಮೋವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ‘ಇಂಟರ್ವಲ್ ಸಮಯ ಮುಗಿದಿದೆ. ಇನ್ನು ಪ್ರದರ್ಶನದ ಸಮಯ. ನವೆಂಬರ್ 5ರಂದು ನಿಮ್ಮ ಹತ್ತಿರದ ಚಿತ್ರಮಂದಿರಗಳಲ್ಲಿ ‘ಸೂರ್ಯವಂಶಿ’ ಬಿಡುಗಡೆಯಾಗುತ್ತಿದೆ. ಬನ್ನಿ, ನಮ್ಮೊಂದಿಗೆ ಸಂಭ್ರಮಿಸಿ’ ಎಂದು ಅವರು ಬರೆದುಕೊಂಡಿದ್ದಾರೆ. ಈ ಸಂದೇಶದಲ್ಲಿ ‘ಬ್ಯಾಕ್ ಟು ಸಿನಿಮಾಸ್’ ಎಂಬ ಹ್ಯಾಷ್ ಟ್ಯಾಗನ್ನು ಕೂಡ ಅಕ್ಷಯ್ ಹಾಕಿದ್ದಾರೆ.
ಅಕ್ಷಯ್ ಹಂಚಿಕೊಂಡಿರುವ ಪ್ರೋಮೋದಲ್ಲಿ ಮೂವರೂ ನಟರು ಚಿತ್ರಮಂದಿರಗಳ ಕುರಿತು ಮಾತನಾಡುತ್ತಿರುವ ದೃಶ್ಯಗಳಿವೆ. ‘ತಮ್ಮ ಜೀವನದ ನೋವು, ನಲಿವು, ಸಂತಸ, ದುಃಖ ಎಲ್ಲವುಗಳಿಗೂ ಕಾರಣವಾದ ಸ್ಥಳವಿದು. ಆದರೆ ಆ ಎಲ್ಲವುಗಳಿಗೂ ಇಂಟರ್ವಲ್ ಬಂದಿತ್ತು. ಇದೀಗ ಇಂಟರ್ವಲ್ ಮುಗಿದಿದ್ದು, ಪ್ರದರ್ಶನದ ಸಮಯ’ ಎಂದು ತಿಳಿಸಲಾಗಿದೆ. ಇದೇ ವೇಳೆ ಅಕ್ಷಯ್ ಕುಮಾರ್ ಕೈ ಮುಗಿದು ಅಭಿಮಾನಿಗಳು ಚಿತ್ರಮಂದಿರಕ್ಕೆ ಬನ್ನಿ ಎಂದು ಮನವಿ ಮಾಡಿದ್ದಾರೆ. ಇದಕ್ಕೆ ರಣವೀರ್ ಹಾಗೂ ಅಜಯ್ ದನಿಗೂಡಿಸಿದ್ದಾರೆ.
ಅಕ್ಷಯ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ:
ಅಕ್ಷಯ್ ಕುಮಾರ್ ನಟನೆಯ ‘ಬೆಲ್ ಬಾಟಂ’ ಚಿತ್ರ ಕೊವಿಡ್ ಎರಡನೇ ಅಲೆಯ ನಂತರ ದೇಶದಾದ್ಯಂತ ಬಿಡುಗಡೆಯಾದ ಮೊದಲ ಸ್ಟಾರ್ ಚಿತ್ರವಾಗಿತ್ತು. ಮುಂಬೈನಲ್ಲಿ ಚಿತ್ರಮಂದಿರಗಳ ಲಭ್ಯತೆ ಇಲ್ಲದೇ ಈ ಚಿತ್ರ ಬಿಡುಗಡೆಯಾಗಿ, ಬಾಕ್ಸಾಫೀಸ್ನಲ್ಲಿ ಕಮಾಯಿ ಮಾಡುವಲ್ಲಿ ಸೋತಿತ್ತು. ಇದೀಗ ದೇಶದೆಲ್ಲೆಡೆ ಚಿತ್ರಮಂದಿರಗಳು ನಿಧಾನಕ್ಕೆ ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಾಚರಣೆ ಮಾಡಲು ಆರಂಭಿಸುತ್ತಿವೆ. ಪ್ಯಾನ್ ಇಂಡಿಯಾ ಚಿತ್ರಗಳೂ ಸೇರಿದಂತೆ ಖ್ಯಾತ ನಟರ ಚಿತ್ರಗಳು ಬಿಡುಗಡೆಯ ದಿನಾಂಕವನ್ನೂ ಘೋಷಿಸುತ್ತವೆ. ಈ ನಡುವೆ ದೀಪಾವಳಿಯಲ್ಲಿ ‘ಸೂರ್ಯವಂಶಿ’ಯನ್ನು ತೆರೆಗೆ ತರಲು ನಿರ್ಧರಿಸಲಾಗಿದೆ.
ಸೂರ್ಯವಂಶಿ ಚಿತ್ರವನ್ನು ಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ನಿರ್ದೇಶಿಸಿದ್ದಾರೆ. ನಟಿ ಕತ್ರಿನಾ ಕೈಫ್ ಅಕ್ಷಯ್ ಕುಮಾರ್ಗೆ ಜೋಡಿಯಾಗಿ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ರೋಹಿತ್ ಶೆಟ್ಟಿಯವರ ‘ಪೊಲೀಸ್ ಸರಣಿ’ಯ ನಾಲ್ಕನೇ ಚಿತ್ರವಾಗಿದೆ. ಇದರಲ್ಲಿ ಅಕ್ಷಯ್ ಭಯೋತ್ಪಾದನಾ ನಿಗ್ರಹ ದಳದ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ವಿಶೇಷವೆಂದರೆ ರೋಹಿತ್ ಆಕ್ಷನ್ ಕಟ್ ಹೇಳಿದ್ದ, ಪೊಲೀಸ್ ಸರಣಿಯ ಚಿತ್ರಗಳಲ್ಲಿ ಮುಖ್ಯಪಾತ್ರ ನಿಭಾಯಿಸಿದ್ದ ರಣವೀರ್ ಸಿಂಗ್ (ಸಿಂಬಾ) ಹಾಗೂ ಅಜಯ್ ದೇವಗನ್ (ಸಿಂಗಂ) ಈ ಚಿತ್ರದಲ್ಲಿ ಅತಿಥಿ ಪಾತ್ರದ ಮೂಲಕ ಕಮ್ಬ್ಯಾಕ್ ಮಾಡಲಿದ್ದಾರೆ. ಆದ್ದರಿಂದಲೇ ಚಿತ್ರದ ಕುರಿತು ಕುತುಹಲ ಹೆಚ್ಚಿದೆ. ‘ಸೂರ್ಯವಂಶಿ’ಯನ್ನು 2020ರ ಮಾರ್ಚ್ನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಕಾರಣದಿಂದ ಮುಂದೂಡಲಾಗಿದ್ದು, ನವೆಂಬರ್ನಲ್ಲಿ ಬಿಡುಗಡೆಯಾಗುತ್ತಿದೆ.
ಇದನ್ನೂ ಓದಿ:
ಹೇಗಿದೆ ಕಿಚ್ಚ ಸುದೀಪ್ ನಟನೆಯ ‘ಕೋಟಿಗೊಬ್ಬ 3’ ಮೊದಲಾರ್ಧ? ಇಲ್ಲಿದೆ ಫುಲ್ ರಿಪೋರ್ಟ್
GGVV Trailer: ರಾಜ್ ಬಿ ಶೆಟ್ಟಿ ಇನ್ನೊಂದು ಮುಖ ಅನಾವರಣ; ಸಾಥ್ ನೀಡಿದ ರಿಷಬ್ ಶೆಟ್ಟಿ
‘ಕೋಟಿಗೊಬ್ಬ 3’ ನೋಡಲು ಸಾಲುಗಟ್ಟಿ ನಿಂತ ಫ್ಯಾನ್ಸ್; ಸುದೀಪ್ ಕಟೌಟ್ಗೆ ಹಾಲಿನ ಅಭಿಷೇಕ