ಮೋದಿ ಬಗ್ಗೆ ಆಯ್ತು ಈಗ ಯೋಗಿ ಆದಿತ್ಯನಾಥ್ ಜೀವನ ಕುರಿತ ಸಿನಿಮಾ
Yogi Adityanath: ಪ್ರಧಾನಿ ನರೇಂದ್ರ ಮೋದಿ, ಅಟಲ್ ಬಿಹಾರಿ ವಾಜಪೇಯಿ, ಬಾಳ್ ಠಾಕ್ರೆ, ರಾಜಶೇಖರ ರೆಡ್ಡಿ, ಎನ್ಟಿಆರ್, ಜಯಲಲಿತಾ ಇನ್ನೂ ಹಲವು ರಾಜಕೀಯ ನಾಯಕರುಗಳ ಬಗ್ಗೆ ಸಿನಿಮಾಗಳು ನಿರ್ಮಾಣಗೊಂಡಿವೆ. ಇದೀಗ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಬಗ್ಗೆಯೂ ಸಿನಿಮಾ ನಿರ್ಮಾಣ ಆಗುತ್ತಿದೆ. ಸಿನಿಮಾ ಬಿಡುಗಡೆ ಯಾವಾಗ? ಇಲ್ಲಿದೆ ಮಾಹಿತಿ...

ರಾಜಕೀಯ ನಾಯಕರುಗಳ ಬಗ್ಗೆ ಸಿನಿಮಾಗಳು (Cinema) ಇತ್ತೀಚೆಗೆ ಹೆಚ್ಚಾಗುತ್ತಿವೆ. ಪ್ರಧಾನಿ ನರೇಂದ್ರ ಮೋದಿ ಬಗ್ಗೆ, ಅಟಲ್ ಬಿಹಾರಿ ವಾಜಪೇಯಿ, ಆಂಧ್ರದ ಮಾಜಿ ಸಿಎಂ ರಾಜಶೇಖರ ರೆಡ್ಡಿ ಮತ್ತು ಅವರ ಪುತ್ರ ಜಗನ್ಮೋಹನ್ ರೆಡ್ಡಿ, ಎನ್ಟಿಆರ್, ಬಾಳ್ ಠಾಕ್ರೆ, ಮನಮೋಹನ್ ಸಿಂಗ್ ಬಗ್ಗೆ ವಿಡಂಬನಾತ್ಮಕ ಸಿನಿಮಾ ‘ದಿ ಆಕ್ಸಿಡೆಂಟಲ್ ಪ್ರೈಮಿನಿಸ್ಟರ್’ ಹೀಗೆ ಹಲವು ರಾಜಕೀಯ ನಾಯಕರುಗಳ ಬಗ್ಗೆ ಸಿನಿಮಾಗಳನ್ನು ಮಾಡಲಾಗಿದೆ. ಚುನಾವಣೆ ಸಮಯದಲ್ಲಿ ಈ ಸಿನಿಮಾಗಳನ್ನು ಪ್ರಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದೀಗ ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಅವರ ಬಗ್ಗೆ ಸಿನಿಮಾ ನಿರ್ಮಾಣ ಆಗುತ್ತಿದೆ.
ಯೋಗಿ ಆದಿತ್ಯನಾಥ್ ಅವರ ಜೀವನ ಕುರಿತು ನಿರ್ಮಾಣ ಆಗಲಿರುವ ಸಿನಿಮಾಕ್ಕೆ ‘ಅಜಯ್; ದಿ ಅನ್ಟೋಲ್ಡ್ ಸ್ಟೋರಿ ಆಫ್ ಯೋಗಿ’ ಎಂದು ಹೆಸರಿಡಲಾಗಿದೆ. ಸಿನಿಮಾದ ಪೋಸ್ಟರ್ಗಳನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಶಂತನು ಗುಪ್ತಾ ಬರೆದಿರುವ ‘ದಿ ಮಾಂಕ್ ಹು ಬಿಕೇಮ್ ಚೀಫ್ ಮಿನಿಸ್ಟರ್’ ಪುಸ್ತಕ ಆಧರಿಸಿ ಈ ಸಿನಿಮಾ ಮಾಡಲಾಗುತ್ತಿದ್ದು, ಸಿನಿಮಾದ ಮುಖ್ಯ ಪಾತ್ರದಲ್ಲಿ ಅಂದರೆ ಯೋಗಿ ಆದಿತ್ಯನಾಥ ಪಾತ್ರದಲ್ಲಿ ಅನಂತ ವಿಜಯ್ ಜೋಶಿ ನಟಿಸಿದ್ದಾರೆ.
ಇದನ್ನೂ ಓದಿ:ಸ್ನೇಹಿತೆಯ ಮದುವೆ ಸಂಭ್ರಮದಲ್ಲಿ ಬಾಲಿವುಡ್ ನಟಿ ಆಲಿಯಾ ಭಟ್
ಈಗ ಬಿಡುಗಡೆ ಆಗಿರುವ ಪೋಸ್ಟರ್ನಲ್ಲಿ ಅಜಯ್ ಜೋಶಿ ಸಿಟ್ಟಿನಿಂದ ಎಚ್ಚರಿಕೆ ಕೊಡುತ್ತಿರುವ ಚಿತ್ರ ಇದೆ. ಸಿನಿಮಾದ ಚಿತ್ರೀಕರಣ ಈಗಾಗಲೇ ಚಾಲ್ತಿಯಲ್ಲಿದ್ದು, ಸಿನಿಮಾ ಆಗಸ್ಟ್ 1 ರಂದು ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ಭೋಜ್ಪುರಿ ಚಿತ್ರರಂಗದ ಸ್ಟಾರ್ ನಟ ನಿರಹುವ, ಪ್ಯಾನ್ ಇಂಡಿಯಾ ನಟ ಪರೇಶ್ ರಾವಲ್, ರಾಜೇಶ್ ಖಟ್ಟರ್ ಇನ್ನು ಹಲವರು ನಟಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರ ಬಾಲ್ಯದಿಂದ ಸಿಎಂ ಆಗುವವರೆಗಿನ ಕತೆಯನ್ನು ಈ ಸಿನಿಮಾ ಒಳಗೊಂಡಿರಲಿದೆಯಂತೆ.
‘ಅಜಯ್: ದಿ ಅನ್ಟೋಲ್ಡ್ ಸ್ಟೋರಿ ಆಫ್ ಯೋಗಿ’ ಸಿನಿಮಾವನ್ನು ರವೀಂದ್ರ ಗೌತಮ್ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣ ಮಾಡುತ್ತಿರುವುದು ರಿತು ಮೇಂಗಿ. ದಿಲೀಪ್ ಬಚ್ಚನ್ ಮತ್ತು ದಿಲೀಪ್ ಮೇಂಗಿ ಈ ಸಿನಿಮಾಕ್ಕೆ ಚಿತ್ರಕತೆ ಬರೆದಿದ್ದಾರೆ. ಕ್ಯಾಮೆರಾ ಕೆಲಸ ಮಾಡಿರುವುದು ವಿಷ್ಣು ರಾವ್. ಸಂಗೀತ ಮೀತ್ ಬ್ರೋಸ್ ಅವರದ್ದು. ಖ್ಯಾತ ನಿರ್ಮಾಪಕ ಮತ್ತು ವಿತರಕ ಆಗಿರುವ ಅನಿಲ್ ತಂಡಾನಿ ಅವರು ಈ ಸಿನಿಮಾದ ವಿತರಣೆ ಮಾಡಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




