ಅಕ್ಷಯ್ ಕುಮಾರ್ ಸಿನಿಮಾ ಆಯ್ಕೆ ಬಗ್ಗೆ ಆಪ್ತರಿಂದಲೇ ಮೂಡಿದೆ ಪ್ರಶ್ನೆ; ಬೇಸರ ಹೊರಹಾಕಿದ ನಟ

|

Updated on: Aug 14, 2024 | 7:05 AM

ಅಕ್ಷಯ್ ಕುಮಾರ್ ಅವರು ಮುಟ್ಟಿದ್ದೆಲ್ಲವೂ ಚಿನ್ನ ಆಗುತ್ತಿದ್ದ ಕಾಲ ಒಂದಿತ್ತು. ಆದರೆ, ಈಗ ಕಾಲ ಬದಲಾಗಿದೆ. ಅವರಿಗೆ ಕಷ್ಟದ ಸಮಯ ಬಂದಿದೆ. ಮಾಡಿದ ಸಿನಿಮಾಗಳೆಲ್ಲವೂ ಫ್ಲಾಪ್ ಸಾಲಿಗೆ ಸೇರುತ್ತಿವೆ. ಈ ವರ್ಷ ಅವರ ನಟನೆಯ ಎರಡು ಸಿನಿಮಾಗಳು ರಿಲೀಸ್ ಆಗಿವೆ. ಈ ಎರಡೂ ಚಿತ್ರಗಳು ಫ್ಲಾಪ್ ಎನಿಸಿಕೊಂಡಿವೆ. ಸಿನಿಮಾ ಆಯ್ಕೆ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ.

ಅಕ್ಷಯ್ ಕುಮಾರ್ ಸಿನಿಮಾ ಆಯ್ಕೆ ಬಗ್ಗೆ ಆಪ್ತರಿಂದಲೇ ಮೂಡಿದೆ ಪ್ರಶ್ನೆ; ಬೇಸರ ಹೊರಹಾಕಿದ ನಟ
ಅಕ್ಷಯ್ ಕುಮಾರ್
Follow us on

ತಮ್ಮ ಸೋಲಿನ ಬಗ್ಗೆ ಅಕ್ಷಯ್ ಕುಮಾರ್ ಅವರು ಸ್ಪಷ್ಟನೆ ನೀಡುವ ಕೆಲಸ ಮಾಡುತ್ತಿದ್ದಾರೆ. ತಮ್ಮ ಶ್ರಮ ಇದೆ ಆದರೆ ಗೆಲುವು ಸಿಗುತ್ತಿಲ್ಲ ಅನ್ನೋದು ಅವರ ವಾದ. ಅವರ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಫ್ಲ್ಯಾಟ್ ಪರ್ಫಾರ್ಮೆನ್ಸ್ ತೋರಿಸುತ್ತಿದೆ. ಈ ವರ್ಷ ರಿಲೀಸ್ ಆದ ‘ಬಡೇ ಮಿಯಾ ಚೋಟೆ ಮಿಯಾ’ ಹಾಗೂ ‘ಸರ್ಫಿರಾ’ ಸಿನಿಮಾಗಳು ಫ್ಲಾಪ್ ಎನಿಸಿಕೊಂಡಿವೆ.  ಆದರೆ, ಅಕ್ಷಯ್ ಕುಮಾರ್ ಅವರು ಈ ಬಗ್ಗೆ ಹೆಚ್ಚು ಚಿಂತಿಸುತ್ತಿಲ್ಲ.

ಈ ಮೊದಲು ಅಕ್ಷಯ್ ಕುಮಾರ್ ಅವರು ಕಾಮಿಡಿ ಸಿನಿಮಾಗಳ ಮೂಲಕ ಫೇಮಸ್ ಆದವರು. ಈ ಕಾರಣಕ್ಕೆ ಅವರು ಇಷ್ಟ ಆದರು. ಆ ಬಳಿಕ ಅವರು ಸಿನಿಮಾ ಆಯ್ಕೆಯಲ್ಲಿ ಬದಲಾವಣೆ ಮಾಡಿಕೊಂಡರು. ಸಾಮಾಜಿಕ ಸಂದೇಶ ಸಾರುವ ಸಿನಿಮಾಗಳ ಕಡೆ ಗಮನ ಹರಿಸಿದರು. ‘ಟಾಯ್ಲೆಟ್: ಏಕ್ ಪ್ರೇಮ್ ಕಥಾ’, ‘ಪ್ಯಾಡ್ ಮ್ಯಾನ್’, ‘ಒಎಂಜಿ 2’ ರೀತಿಯ ಸಿನಿಮಾಗಳನ್ನು ಮಾಡಿದರು. ಇದಲ್ಲದೆ, ‘ಏರ್​ಲಿಫ್ಟ್’, ‘ರುಸ್ತುಮ್’, ‘ಮಿಷನ್ ಮಂಗಳ್’, ‘ಮಿಷನ್ ರಾಣಿಗಂಜ್’ ಸಿನಿಮಾಗಳನ್ನು ಮಾಡಿ ನೈಜ ಘಟನೆಯನ್ನು ತೆರೆಮೇಲೆ ತರುವ ಪ್ರಯತ್ನ ಮಾಡಿದರು. ಈ ಬಗ್ಗೆ ಅವರಿಗೆ ಪ್ರಶ್ನೆ ಎದುರಾಗಿದೆ.

‘ನನ್ನ ಸಿನಿಮಾ ಆಯ್ಕೆಗಳನ್ನು ಅನೇಕರು ಪ್ರಶ್ನೆ ಮಾಡಿದ್ದಾರೆ’ ಎನ್ನುತ್ತಾರೆ ಅಕ್ಷಯ್ ಕುಮಾರ್. ‘ಕೆಲವು ಸಿನಿಮಾಗಳ ಕಥೆ ಕೇಳಿದಾಗ ಅವುಗಳನ್ನು ಮಾಡಬೇಕು ಎಂದು ನಿಮ್ಮ ಮನಸ್ಸಿಗೆ ಅನಿಸುತ್ತದೆ. ಈ ವಿಚಾರದ ಬಗ್ಗೆ ಇಂಡಸ್ಟ್ರಿಯ ಗೆಳೆಯರು ಹಾಗೂ ವಿಮರ್ಶಕರು ಟಾಯ್ಲೆಟ್ ಬಗ್ಗೆ, ಸ್ಯಾನಿಟರಿ ಪ್ಯಾಡ್ ಬಗ್ಗೆ ಏಕೆ ಸಿನಿಮಾ ಮಾಡಬೇಕು ಎಂದು ಪ್ರಶ್ನೆ ಮಾಡುತ್ತಾರೆ. ಲೈಂಗಿಕ ಶಿಕ್ಷಣದ ಬಗ್ಗೆ ಸಿನಿಮಾ ಮಾಡಿದೆ. ಅದನ್ನು ಕೆಲವರು ವಿರೋಧಿಸಿದರು. ಅವಕಾಶ ಸಿಕ್ಕರೆ ಈ ರೀತಿಯ ಸಿನಿಮಾಗಳನ್ನು ಮಾಡಿಯೇ ಮಾಡುತ್ತೇನೆ’ ಎಂದಿದ್ದಾರೆ ಅವರು.

ಇದನ್ನೂ ಓದಿ: ‘ವಿಧಿ ಬದಲಿಸಲು ಸಾಧ್ಯವಿಲ್ಲ’; ಸಿನಿಮಾ ಸೋಲಿನ ಬಗ್ಗೆ ಅಕ್ಷಯ್ ಕುಮಾರ್ ಬೇಸರದ ಮಾತು

ಆಗಸ್ಟ್ 15ರಂದು ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’ ಸಿನಿಮಾ ರಿಲೀಸ್ ಆಗುತ್ತಿದೆ. ತಾಪ್ಸಿ ಪನ್ನು, ಆ್ಯಮಿ ವಿರ್ಕ್​, ವಾಣಿ ಕಪೂರ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದ ಬಗ್ಗೆ ಫ್ಯಾನ್ಸ್ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.