ಒಂದು ಕಾಲದಲ್ಲಿ ನಟ ಅಕ್ಷಯ್ ಕುಮಾರ್ ಅವರು ನಟಿಸಿದ ಎಲ್ಲ ಸಿನಿಮಾಗಳು ಸಕ್ಸಸ್ ಆಗುತ್ತಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಅವರು ಡಲ್ ಆಗಿದ್ದಾರೆ. ಅವರ ಸಿನಿಮಾಗಳು ಸಾಲು ಸಾಲು ಸೋಲು ಕಂಡಿವೆ. ಅದರ ಮಧ್ಯೆ ಬೇರೆ ಹೀರೋಗಳ ಸಿನಿಮಾಗಳು ಸಾವಿರ ಕೋಟಿ ರೂಪಾಯಿ ಬಿಸ್ನೆಸ್ ಮಾಡುತ್ತಿವೆ. ಶಾರುಖ್ ಖಾನ್ ನಟನೆಯ ‘ಜವಾನ್’ (Jawan Movie), ‘ಪಠಾಣ್’ ಚಿತ್ರಗಳು ಇಂಥ ಸಾಧನೆ ಮಾಡಿವೆ. ಈ ಕುರಿತು ಅಕ್ಷಯ್ ಕುಮಾರ್ ಮಾತನಾಡಿದ್ದಾರೆ. ಅವರು ನಟಿಸಿದ ‘ಮಿಷನ್ ರಾಣಿಗಂಜ್’ ಸಿನಿಮಾಗೆ ನಿರೀಕ್ಷಿತ ಮಟ್ಟದ ಓಪನಿಂಗ್ ಸಿಕ್ಕಿಲ್ಲ. ಹಾಗಿದ್ದರೂ ಕೂಡ ಬಾಲಿವುಡ್ನ ಬೇರೆ ಹೀರೋಗಳ ಗೆಲುವಿಗೆ ಅಕ್ಷಯ್ ಕುಮಾರ್ (Akshay Kumar) ಅವರು ಸಂಸತ ವ್ಯಕ್ತಪಡಿಸಿದ್ದಾರೆ.
‘ಇಂಡಿಯಾ ಟುಡೇ’ ನಡೆಸಿದ ಸಂದರ್ಶನದಲ್ಲಿ ಅಕ್ಷಯ್ ಕುಮಾರ್ ಅವರು ಈ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ‘ನಮ್ಮ ಚಿತ್ರರಂಗದಿಂದ ಇನ್ನೂ ಹೆಚ್ಚಿನ ಸೂಪರ್ ಹಿಟ್ ಸಿನಿಮಾಗಳು ಬರಲಿವೆ ಎಂಬ ನಂಬಿಕೆ ನನಗೆ ಇದೆ. ಶಾರುಖ್ ಖಾನ್ ನಟನೆಯ ‘ಜವಾನ್’ ಸಿನಿಮಾ ಅತ್ಯುತ್ತಮ ಬಿಸ್ನೆಸ್ ಮಾಡಿದಾಗ ನನಗೆ ತುಂಬ ಖುಷಿ ಆಯಿತು. ‘ಗದರ್ 2’, ‘ಒಎಂಜಿ 2’ ಮುಂತಾದ ಸಿನಿಮಾಗಳು ಕೂಡ ಉತ್ತಮವಾಗಿ ಪ್ರದರ್ಶನ ಕಂಡಿವೆ. ಇದು ಚಿತ್ರರಂಗಕ್ಕೆ ಒಳ್ಳೆಯದು’ ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: 56ನೇ ವಯಸ್ಸಲ್ಲೂ ಅಕ್ಷಯ್ ಕುಮಾರ್ ಫಿಟ್ನೆಸ್ ಸೀಕ್ರೆಟ್ ಏನು?
‘ಕೊವಿಡ್ 19 ಸಂದರ್ಭದಲ್ಲಿ ನಮ್ಮ ಚಿತ್ರರಂಗಕ್ಕೆ ಬಹಳ ಕಷ್ಟ ಆಗಿತ್ತು. ಈಗ ಪರಿಸ್ಥಿತಿ ಸುಧಾರಿಸಿದೆ. ಸಾವಿರ ಕೋಟಿ ರೂಪಾಯಿ ಮೈಲಿಗಲ್ಲು ಸೃಷ್ಟಿ ಆಗಿರುವುದು ಒಳ್ಳೆಯದು. ಹಾಲಿವುಡ್ ಸಿನಿಮಾಗಳ ರೀತಿ ನಾವು 2 ಸಾವಿರ ಕೋಟಿ ಅಥವಾ ಮೂರು ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಆಗುವಂತಹ ಸಿನಿಮಾಗಳನ್ನು ಮಾಡುತ್ತೇವೆ ಎಂಬ ನಂಬಿಕೆ ನನಗಿದೆ. ಹಾಲಿವುಡ್ನವರ ಬಳಿಯೂ ಇಲ್ಲದೇ ಕಥೆ ಮತ್ತು ಚಿತ್ರಕಥೆ ನಮ್ಮ ಬಳಿ ಇದೆ’ ಎಂದು ಅಕ್ಷಯ್ ಕುಮಾರ್ ಅವರು ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಒಂದೇ ಸಿನಿಮಾದಲ್ಲಿ ಜೂ. ಎನ್ಟಿಆರ್, ಶಾರುಖ್ ಖಾನ್, ಸಲ್ಮಾನ್, ಹೃತಿಕ್ ರೋಷನ್?
ಈ ವರ್ಷ ಕೆಲವು ಬಹುನಿರೀಕ್ಷಿತ ಸಿನಿಮಾಗಳು ಬಾಕ್ಸ್ ಆಫೀಸ್ನಲ್ಲಿ ಉತ್ತಮವಾಗಿ ಕಲೆಕ್ಷನ್ ಮಾಡಲು ವಿಫಲ ಆಗಿವೆ. ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ವ್ಯಾಕ್ಸಿನ್ ವಾರ್’ ಸಿನಿಮಾಗೆ ಅಂದುಕೊಂಡ ಮಟ್ಟಕ್ಕೆ ಗಳಿಕೆ ಆಗಿಲ್ಲ. ಅಕ್ಷಯ್ ಕುಮಾರ್ ನಟನೆಯ ‘ವಿಷನ್ ರಾಣಿಗಂಜ್’ ಸಿನಿಮಾ ಇಂದು (ಅಕ್ಟೋಬರ್ 6) ಬಿಡುಗಡೆ ಆಗಿದ್ದು ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ಈ ಸಿನಿಮಾ ಸಾಧಾರಣ ಓಪನಿಂಗ್ ಪಡೆದುಕೊಂಡಿದೆ. ಈ ವರ್ಷ ದೀಪಾವಳಿಗೆ ಸಲ್ಮಾನ್ ಖಾನ್ ನಟನೆಯ ‘ಟೈಗರ್ 3’ ಹಾಗೂ ಡಿಸೆಂಬರ್ 1ರಂದು ರಣಬೀರ್ ಕಪೂರ್ ನಟನೆಯ ‘ಅನಿಮಲ್’ ಸಿನಿಮಾಗಳು ರಿಲೀಸ್ ಆಗಲಿವೆ. ಆ ಚಿತ್ರಗಳ ಮೇಲೆ ನಿರೀಕ್ಷೆ ಇದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.