ಸೆಲೆಬ್ರಿಟಿಗಳು ಎಲ್ಲಿಯೇ ಹೋದರೂ ಪಾಪರಾಜಿಗಳು ಹಿಂಬಾಲಿಸುತ್ತಾರೆ. ಮುಂಬೈನಲ್ಲಿ ಪಾಪರಾಜಿಗಳ ಹಾವಳಿ ಜಾಸ್ತಿಯೇ ಇದೆ. ಸ್ಟಾರ್ಗಳ ಫೋಟೋ ಮತ್ತು ವಿಡಿಯೋ ತೆಗೆಯುವ ಸಲುವಾಗಿ ಪಾಪರಾಜಿಗಳ ನಡುವೆ ಸಖತ್ ಪೈಪೋಟಿ ಇರುತ್ತದೆ. ಇನ್ನು, ಸ್ಟಾರ್ ಕಿಡ್ಗಳು ಸಿಕ್ಕರೆ ಪಾಪರಾಜಿಗಳಿಗೆ ತುಂಬ ಖುಷಿ. ಅದೇ ಕಾರಣಕ್ಕಾಗಿ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಖಾನ್ ದಂಪತಿಯ ಮಕ್ಕಳಾದ ತೈಮೂರ್ ಹಾಗೂ ಜಹಂಗೀರ್ ಕಂಡರೆ ಪಾಪರಾಜಿಗಳು ಫುಲ್ ಹ್ಯಾಪಿ ಆಗ್ತಾರೆ. ಹಾಗೆಯೇ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ದಂಪತಿಯ ಪುತ್ರಿ ರಹಾ ಕಪೂರ್ ಕೂಡ ಈಗ ಕ್ಯೂಟ್ ಆಗಿ ಪೋಸ್ ನೀಡಲು ಶುರು ಮಾಡಿದ್ದಾಳೆ.
ರಣಬೀರ್ ಕಪೂರ್ ಅವರು ತುಂಬ ಬ್ಯುಸಿ ಆಗಿದ್ದಾರೆ. ಹಾಗಿದ್ದರೂ ಕೂಡ ಅವರು ಫ್ಯಾಮಿಲಿಗೆ ಸಮಯ ನೀಡುವುದನ್ನು ತಪ್ಪಿಸುತ್ತಿಲ್ಲ. ಇಂದು (ಜುಲೈ 28) ಭಾನುವಾರ ಆದ್ದರಿಂದ ರಣಬೀರ್ ಕಪೂರ್ ಅವರು ಮಗಳ ಜೊತೆ ಕಾಲ ಕಳೆದಿದ್ದಾರೆ. ರಣಬೀರ್ ಕಪೂರ್ ಹೊರಗೆ ಬರುವುದಕ್ಕೂ ಮುನ್ನ ರಹಾ ಕಪೂರ್ ಪುಟ್ಟ ಪುಟ್ಟ ಹೆಜ್ಜೆಗಳನ್ನು ಇಟ್ಟು ಓಡಾಡಿದ್ದಾಳೆ. ಪಾಪರಾಜಿಗಳನ್ನು ನೋಡಿ ನಗು ಚೆಲ್ಲಿದ್ದಾಳೆ.
2022ರ ಏಪ್ರಿಲ್ 14ರಂದು ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ಮದುವೆ ಆದರು. ಅದೇ ವರ್ಷ ನವೆಂಬರ್ನಲ್ಲಿ ಆಲಿಯಾ ಭಟ್ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದರು. ಮಗುವಿಗೆ ರಹಾ ಕಪೂರ್ ಎಂದರು ಹೆಸರು ಇಟ್ಟರು. ಆರಂಭದಲ್ಲಿ ಮಗಳ ಮುಖವನ್ನು ಅವರು ತೋರಿಸಿರಲಿಲ್ಲ. ಮಗಳ ಫೋಟೋ, ವಿಡಿಯೋ ತೆಗೆಯಬೇಡಿ ಎಂದು ಪಾಪರಾಜಿಗಳಲ್ಲಿ ಅವರು ಮನವಿ ಮಾಡಿಕೊಂಡಿದ್ದರು. ಬಳಿಕ ಅವರೇ ಪುತ್ರಿಯ ಮುಖವನ್ನು ರಿವೀಲ್ ಮಾಡಿದರು.
ಇದನ್ನೂ ಓದಿ: ಸಂಭಾವನೆಯಲ್ಲಿ ದೀಪಿಕಾ ಪಡುಕೋಣೆ ನಂಬರ್ 1; ಕಂಗನಾ, ಆಲಿಯಾಗೆ ಎಷ್ಟನೇ ಸ್ಥಾನ?
ಸಿನಿಮಾ ವಿಚಾರಕ್ಕೆ ಬರುವುದಾದರೆ, ರಣಬೀರ್ ಕಪೂರ್ ಅವರು ‘ಅನಿಮಲ್’ ಚಿತ್ರದಿಂದ ಭಾರಿ ಸಕ್ಸಸ್ ಕಂಡರು. ಈಗ ಅವರು ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದಲ್ಲಿ ರಾಮನ ಪಾತ್ರ ಮಾಡುತ್ತಿದ್ದಾರೆ. ಆಲಿಯಾ ಭಟ್ ಕೂಡ ತುಂಬ ಬ್ಯುಸಿ ಆಗಿದ್ದಾರೆ. ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅವರು ‘ಲವ್ ಆ್ಯಂಡ್ ವಾರ್’ ಸಿನಿಮಾದಲ್ಲಿ ಒಟ್ಟಿಗೆ ನಟಿಸಲಿದ್ದಾರೆ. ‘ಯಶ್ ರಾಜ್ ಫಿಲ್ಮ್ಸ್’ ನಿರ್ಮಾಣದ ‘ಆಲ್ಫಾ’ ಸಿನಿಮಾದಲ್ಲಿ ಆಲಿಯಾ ಭಟ್ ಅವರು ಪ್ರಮುಖ ಪಾತ್ರ ಮಾಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.