ಆಲಿಯಾ ಭಟ್ಗೆ 77 ಲಕ್ಷ ರೂಪಾಯಿ ವಂಚನೆ, ಮಾಜಿ ಸಹಾಯಕಿ ಬಂಧನ
Alia Bhatt: ಬಾಲಿವುಡ್ ನಟಿ ಆಲಿಯಾ ಭಟ್ ನಟಿಯಾಗಿರುವ ಜೊತೆಗೆ ನಿರ್ಮಾಪಕಿಯೂ ಹೌದು. ಪ್ರತಿ ವರ್ಷ ಕೋಟ್ಯಂತರ ರೂಪಾಯಿ ವ್ಯವಹಾರ ಮತ್ತು ಆದಾಯ ನಟಿಗೆ ಇದೆ. ಇದೀಗ ಆಲಿಯಾ ಭಟ್ಗೆ ಆಕೆಯ ಆಪ್ತರೇ ಮೋಸ ಮಾಡಿದ್ದಾರೆ. ಆಲಿಯಾರ ಆಪ್ತ ಸಹಾಯಕಿ ಆಗಿದ್ದ ಬೆಂಗಳೂರು ಮೂಲದ ಯುವತಿ ನಟಿಗೆ ಮೋಸ ಮಾಡಿದ್ದು, ಇದೀಗ ಪೊಲೀಸರ ಅತಿಥಿಯಾಗಿದ್ದಾಳೆ.

ನಟಿ ಆಲಿಯಾ ಭಟ್ (Alia Bhatt) ಅವರ ಮಾಜಿ ಆಪ್ತ ಸಹಾಯಕಿಯನ್ನು ವಂಚನೆ ಆರೋಪದಲ್ಲಿ ಬಂಧಿಸಲಾಗಿದೆ. ನಟಿ ಆಲಿಯಾ ಭಟ್ ಹಾಗೂ ಅವರ ನಿರ್ಮಾಣ ಸಂಸ್ಥೆಗೆ 77 ಲಕ್ಷ ರೂಪಾಯಿ ಹಣಕಾಸು ವಂಚನೆ ಮಾಡಿರುವ ಆರೋಪದಲ್ಲಿ ಆಲಿಯಾರ ಮಾಜಿ ಸಹಾಯಕಿ ವೇದಿಕಾ ಪ್ರಕಾಶ್ ಶೆಟ್ಟಿ (32) ಅನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಚಾಲ್ತಿಯಲ್ಲಿದೆ.
ಕಳೆದ ಕೆಲ ವರ್ಷಗಳಿಂದ ವೇದಿಕಾ ಪ್ರಕಾಶ್ ಶೆಟ್ಟಿ, ಆಲಿಯಾ ಭಟ್ ಅವರ ಆಪ್ತ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದರು. 2022 ರಿಂದ 2024 ರ ಅವಧಿಯಲ್ಲಿ ವೇದಿಕಾ ಪ್ರಕಾಶ್ ಶೆಟ್ಟಿ ಅವರು ಆಲಿಯಾರ ಖಾಸಗಿ ಹಾಗೂ ಆಲಿಯಾರ ಎಟರ್ನಲ್ ಸನ್ಶೈನ್ ನಿರ್ಮಾಣ ಸಂಸ್ಥೆಗೆ 76.9 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಆಲಿಯಾ ಭಟ್ ಅವರ ತಾಯಿ ಸೋನಿ ರಜ್ದಾನ್ ಅವರು ಮುಂಬೈನ ಜುಹು ಪೊಲೀಸ್ ಠಾಣೆಗೆ ದೂರು ನೀಡಿದ್ದರು.
2021 ರಿಂದ 2024ರ ವರೆಗೆ ವೇದಿಕಾ, ಆಲಿಯಾ ಭಟ್ ಅವರ ಸಹಾಯಕಿಯಾಗಿ ಕೆಲಸ ಮಾಡಿದ್ದರು. ಇದೇ ಅವಧಿಯಲ್ಲಿ ಅವರು ಆಲಿಯಾ ಭಟ್ರ ಶೂಟಿಂಗ್ ಡೇಟ್ಸ್ ಮತ್ತು ಕೆಲ ಹಣಕಾಸು ದಾಖಲೆಗಳನ್ನು ಸಹ ನೋಡಿಕೊಳ್ಳುತ್ತಿದ್ದರು. ಜೊತೆಗೆ ಅವರ ನಿರ್ಮಾಣ ಸಂಸ್ಥೆಯಾದ ಎಟರ್ನಲ್ ಸನ್ ಶೈನ್ ನ ಹಣಕಾಸು ವ್ಯವಹಾರಗಳನ್ನು ಸಹ ನೋಡಿಕೊಳ್ಳುತ್ತಿದ್ದರು. ಈ ವೇಳೆ ಆಲಿಯಾರ ಸಹಿ ನಕಲು ಮಾಡಿ ಹಾಗೂ ನಕಲಿ ಬಿಲ್ಗಳನ್ನು ಸೃಷ್ಟಿಸಿ ನಟಿಯಿಂದ ಸಹಿ ಪಡೆದು ಹಣಕಾಸು ವಂಚನೆ ಮಾಡಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ರಶ್ಮಿಕಾ To ಆಲಿಯಾ ಭಟ್; ಎಲ್ಲರಿಗೂ ಫೇವರಿಟ್ ನಟಿ ಇವರೇ ನೋಡಿ
ವೇದಿಕಾ, ಹೀಗೆ ವಂಚನೆಯಿಂದ ಪಡೆದ ಹಣವನ್ನು ತನ್ನ ಗೆಳತಿಯ ಖಾತೆಗೆ ವರ್ಗಾಯಿಸಿ, ಅಲ್ಲಿಂದ ಮತ್ತೆ ತಮ್ಮ ಖಾತೆಗೆ ರವಾನೆ ಮಾಡಿಸಿಕೊಳ್ಳುತ್ತಿದ್ದರಂತೆ. ಘಟನೆ ಬೆಳಕಿಗೆ ಬರುತ್ತಲೇ ವೇದಿಕಾ ಪರಾರಿ ಆಗಿದ್ದರು. ಸೋನಿ ರಜ್ದಾನ್ ಅವರು ದೂರು ನೀಡಿದ ಐದು ತಿಂಗಳ ಬಳಿಕ ಇತ್ತೀಚೆಗಷ್ಟೆ ವೇದಿಕಾರನ್ನು ಬೆಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಜುಲೈ 20ರ ವರೆಗೆ ವೇದಿಕಾರನ್ನು ನ್ಯಾಯಾಲಯವು ಪೊಲೀಸರ ವಶಕ್ಕೆ ನೀಡಿದೆ.
ಆಲಿಯಾ ಭಟ್ ಅವರು ತಮ್ಮ ಎಟರ್ನಲ್ ಸನ್ಶೈನ್ ಪ್ರೊಡಕ್ಷನ್ ಸಂಸ್ಥೆಯಿಂದ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಅವರ ನಟನೆಯ ‘ಡಾರ್ಲಿಂಗ್ಸ್’, ‘ಜಿಗ್ರಾ’ ಸೇರಿದಂತೆ ಇನ್ನೂ ಕೆಲವಾರು ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದಾರೆ. ಆಲಿಯಾ ಭಟ್ ಪ್ರಸ್ತುತ ‘ಲವ್ ಆಂಡ್ ವಾರ್’ ಸಿನಿಮಾನಲ್ಲಿ ಪತಿ ರಣ್ಬೀರ್ ಕಪೂರ್ ಜೊತೆಗೆ ನಟಿಸುತ್ತಿದ್ದಾರೆ. ಅದರ ಜೊತೆಗೆ ‘ಆಲ್ಫಾ’ ಹೆಸರಿನ ಆಕ್ಷನ್ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




