ಸೆಲೆಬ್ರಿಟಿಗಳು ಏನೇ ಮಾಡಿದರೂ ಅದು ಸುದ್ದಿ ಆಗುತ್ತದೆ. ಚಿಕ್ಕ ವಿಚಾರಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತವೆ. ಅವರು ತಮ್ಮ ವಾಹನ ಬಿಟ್ಟು ಬೈಕ್ ಏರಿದರೆ ಅಥವಾ ನಡೆದು ಸಾಗಿದರೆ ಸಾಕಷ್ಟು ಅದು ಸಾಕಷ್ಟು ಚರ್ಚೆ ಆಗುತ್ತದೆ. ಈಗ ಅಮಿತಾಭ್ ಬಚ್ಚನ್ಗೂ (Amitabh Bachchan) ಹೀಗೆಯೇ ಆಗಿದೆ. ಅವರು ಬೈಕ್ನಲ್ಲಿ ಸಾಗಿದ್ದು ಸುದ್ದಿ ಆಗಿದೆ. ಈ ಬಗ್ಗೆ ಮುಂಬೈ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲ, ಕೇಸ್ ಕೂಡ ದಾಖಲು ಮಾಡಿಕೊಂಡಿದ್ದಾರೆ. ಇದಕ್ಕೆ ಅಮಿತಾಭ್ ಬಚ್ಚನ್ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಅಮಿತಾಭ್ ಬಚ್ಚನ್ ಶಿಸ್ತಿನ ವ್ಯಕ್ತಿ. ಎಲ್ಲ ಕಡೆಗಳಲ್ಲೂ ಅವರು ಶಿಸ್ತನ್ನು ಕಾಪಾಡಿಕೊಳ್ಳುತ್ತಾರೆ. ವಿವಾದದಿಂದ ದೂರ ಇರಲು ಬಯಸುತ್ತಾರೆ. ಆದರೆ, ಕೆಲವೊಮ್ಮೆ ಅರಿಯದೇ ಮಾಡಿದ ತಪ್ಪಿಗೆ ತೊಂದರೆ ಅನುಭವಿಸಬೇಕಾಗುತ್ತದೆ. ಇತ್ತೀಚೆಗೆ ಅಮಿತಾಭ್ ಅವರು ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದರು. ಈ ಫೋಟೋದಲ್ಲಿ ಅವರು ಬೈಕ್ ಹಿಂದೆ ಕುಳಿತಿದ್ದರು. ಬೈಕ್ ಓಡಿಸುತ್ತಿದ್ದ ವ್ಯಕ್ತಿಯೂ ಹೆಲ್ಮೆಟ್ ಹಾಕಿರಲಿಲ್ಲ. ಈ ಸಂಬಂಧ ಸೋಶಿಯಲ್ ಮೀಡಿಯಾದಲ್ಲೇ ದೂರು ಬಂದಿದ್ದು ಮುಂಬೈ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ.
ಬೈಕ್ನಲ್ಲಿ ಹೋಗುತ್ತಿರುವ ಫೋಟೋಗೆ ಕ್ಯಾಪ್ಶನ್ ನೀಡಿದ್ದ ಅಮಿತಾಭ್ ಬಚ್ಚನ್, ‘ಧನ್ಯವಾದ ಗೆಳೆಯ. ನನಗೆ ನೀವು ಯಾರೆಂದು ಗೊತ್ತಿಲ್ಲ. ಆದರೆ ಸರಿಯಾದ ಸಮಯಕ್ಕೆ ನನ್ನನ್ನು ಕೆಲಸದ ಸ್ಥಳಕ್ಕೆ ತಲುಪಿಸಿದ್ದೀರಿ. ಟ್ರಾಫಿಕ್ ಜಾಮ್ ಕಿರಿಕಿರಿಯಿಂದ ತಪ್ಪಿಸಿದ್ದೀರಿ’ ಎಂದು ಅಮಿತಾಭ್ ಬಚ್ಚನ್ ಬರೆದುಕೊಂಡಿದ್ದರು. ಅನೇಕರು ಅಮಿತಾಭ್ ಅವರ ಸರಳತೆ ಮೆಚ್ಚಿಕೊಂಡರೆ ಇನ್ನೂ ಅನೇಕರಿಗೆ ಅಮಿತಾಭ್ ಹೆಲ್ಮೆಟ್ ಧರಿಸಿಲ್ಲ ಎಂಬುದು ಎದ್ದು ಕಂಡಿದೆ.
ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್: ಕೊರಿಯೋಗ್ರಾಫರ್ ಚಿನ್ನಿ ಪ್ರಕಾಶ್ ಕೆಲಸದ ಬಗ್ಗೆ ಅಮಿತಾಭ್ ಬಚ್ಚನ್ ಮಾತು
ಅಮಿತಾಭ್ ಬಚ್ಚನ್ ಅವರು ‘ಪ್ರಾಜೆಕ್ಟ್ ಕೆ’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅವರು ಇತ್ತೀಚೆಗೆ ಸೆಟ್ನಲ್ಲಿ ಗಾಯಗೊಂಡ ಹಿನ್ನೆಲೆಯಲ್ಲಿ ಮನೆಯಲ್ಲೇ ರೆಸ್ಟ್ ಪಡೆಯುತ್ತಿದ್ದರು. ಈಗ ಅವರು ಚೇತರಿಸಿಕೊಂಡಿದ್ದು ಮತ್ತೆ ಸೆಟ್ಗೆ ಮರಳಿದ್ದಾರೆ ಎನ್ನಲಾಗಿದೆ. ಅವರು ಶೂಟಿಂಗ್ ಸೆಟ್ಗೆ ಬೈಕ್ನಲ್ಲಿ ತೆರಳಿದ್ದು ಯಾವ ಸಿನಿಮಾ ಚಿತ್ರೀಕರಣಕ್ಕೆ ಎಂಬುದು ಸದ್ಯದ ಕುತೂಹಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ