
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರಿಗೆ ಮತ್ತೊಮ್ಮೆ ಜೀವ ಬೆದರಿಕೆ ಎದುರಾಗಿದೆ. ಮುಂಬೈನ ಜುಹು ಪ್ರದೇಶದಲ್ಲಿರುವ ಅವರ ಐಷಾರಾಮಿ ನಿವಾಸ ಜಲ್ಸಾ ಬಂಗಲೆಯನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ. ಈ ಅನಾಮಧೇಯ ಇ-ಮೇಲ್ ಸಂದೇಶವು ಬಾಲಿವುಡ್ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ. ಈ ಬೆದರಿಕೆ ಬಳಿಕ ನಟನಿಗೆ ಮತ್ತಷ್ಟು ಭದ್ರತೆ ನೀಡಲಾಗಿದೆ.
ಕೇವಲ ಅಮಿತಾಭ್ ಬಚ್ಚನ್ ಅವರ ನಿವಾಸಕ್ಕೆ ಮಾತ್ರವಲ್ಲದೆ, ಮುಂಬೈ ಮೇಯರ್ ರಿತು ತಾವ್ಡೆ ಅವರ ಕಚೇರಿಗೂ ಇದೇ ರೀತಿಯ ಬಾಂಬ್ ಬೆದರಿಕೆ ಬಂದಿದೆ. ಇ-ಮೇಲ್ ಮೂಲಕ ಈ ಬೆದರಿಕೆ ಸಂದೇಶವನ್ನು ಕಳುಹಿಸಲಾಗಿದ್ದು, ಎರಡೂ ಕಡೆ ಬಾಂಬ್ ಸ್ಫೋಟಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಮುಂಬೈ ಪೊಲೀಸರು ಅಲರ್ಟ್ ಆಗಿದ್ದಾರೆ.
ಬೆದರಿಕೆ ಇ-ಮೇಲ್ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ಅಮಿತಾಭ್ ಅವರ ‘ಜಲ್ಸಾ’ ಬಂಗಲೆ ಹಾಗೂ ಮೇಯರ್ ಕಚೇರಿಯ ಸುತ್ತಮುತ್ತ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ. ಬಾಂಬ್ ನಿಷ್ಕ್ರಿಯ ದಳ ಮತ್ತು ಶ್ವಾನ ದಳದಿಂದ ತಪಾಸಣೆ ನಡೆಸಲಾಗಿದೆ. ಇ-ಮೇಲ್ ಎಲ್ಲಿಂದ ಬಂದಿದೆ ಮತ್ತು ಕಳುಹಿಸಿದವರು ಯಾರು ಎಂಬುದನ್ನು ಪತ್ತೆಹಚ್ಚಲು ಸೈಬರ್ ಕ್ರೈಂ ಹಾಗೂ ಮುಂಬೈ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಬಾಂಬ್ ಬೆದರಿಕೆ: ಬುಲೆಟ್‌ಪ್ರೂಫ್ ಗ್ಲಾಸ್ ಕವರ್‌ನೊಂದಿಗೆ ಅಭಿಮಾನಿಗಳನ್ನು ಭೇಟಿಯಾದ ಅಮಿತಾಭ್
ಅಮಿತಾಭ್ ಬಚ್ಚನ್ ಅವರ ಬಂಗಲೆಗೆ ಈ ರೀತಿಯ ಬಾಂಬ್ ಬೆದರಿಕೆ ಬರುತ್ತಿರುವುದು ಇದೇ ಮೊದಲೇನಲ್ಲ, ಈ ಹಿಂದೆಯೂ ಇಂತಹ ಬೆದರಿಕೆ ಕರೆಗಳು ಬಂದಿದ್ದವು. ಭದ್ರತಾ ದೃಷ್ಟಿಯಿಂದ ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆ ವಹಿಸಿರುವ ಅಮಿತಾಭ್ ಬಚ್ಚನ್, ಪ್ರತಿ ಭಾನುವಾರ ಮನೆಯ ಹೊರಗೆ ಅಭಿಮಾನಿಗಳನ್ನು ಭೇಟಿಯಾಗುವ ವೇಳೆ ವಿಶೇಷವಾಗಿ ಬುಲೆಟ್ ಪ್ರೂಫ್ ಗ್ಲಾಸ್ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.