ಅಮಿತಾಭ್ ಬಚ್ಚನ್ ಅವರು ತಂಬಾಕು ಕಂಪನಿ ಕಮಲಾ ಪಸಂದ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಇದಕ್ಕೆ ಸಾಕಷ್ಟು ವಿರೋದ ವ್ಯಕ್ತವಾಗಿತ್ತು. ಜಾಹೀರಾತಿನಿಂದ ಹಿಂದೆ ಸರಿಯುವಂತೆ ಸಂಘಟನೆಯೊಂದು ವಿನಂತಿಸಿತ್ತು. ಈ ವಿನಂತಿಗೆ ಒಪ್ಪಿದ್ದ ಅಮಿತಾಭ್ ಕಳೆದ ಅಕ್ಟೋಬರ್‌ನಲ್ಲಿ ಕಮಲಾ ಪಸಂದ್ ಅಭಿಯಾನದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು. ಒಪ್ಪಂದದ ಮುಗಿದ ಹೊರತಾಗಿಯೂ ಕಮಲಾ ಪಸಂದ್ ಕಂಪನಿ ಅಮಿತಾಭ್ ಜಾಹೀರಾತುಗಳನ್ನು ಟಿವಿಯಲ್ಲಿ ಪ್ರಸಾರ ಮಾಡುವುದನ್ನು ಮುಂದುವರೆಸಿತ್ತು. ಈ ಕಾರಣಕ್ಕೆ ಅಮಿತಾಭ್ ಪಾನ್ ಮಸಾಲ ಬ್ರ್ಯಾಂಡ್‌ಗೆ ಕಾನೂನು ನೋಟಿಸ್ ಕಳುಹಿಸಿದ್ದಾರೆ.
‘ಕಮಲಾ ಪಸಂದ್ ಅವರಿಗೆ ಅಮಿತಾಭ್ ಬಚ್ಚನ್ ನೋಟಿಸ್ ಕಳುಹಿಸಿದ್ದಾರೆ. ಬಚ್ಚನ್ ಅವರು ಇರುವ ಟಿವಿ ಜಾಹೀರಾತುಗಳನ್ನು ಪ್ರಸಾರ ಮಾಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಸೂಚಿಸಲಾಗಿದೆ. ಒಪ್ಪಂದ ಮುಕ್ತಾಯಗೊಂಡಿದ್ದರೂ ಕಮಲಾ ಪಸಂದ್ ಅಮಿತಾಭ್ ಇರುವ ಜಾಹೀರಾತನ್ನು ಪ್ರಸಾರ ಮಾಡಿದೆ’ ಎಂದು ಬಚ್ಚನ್ ಕಾನೂನು ತಂಡದ ಮೂಲಗಳು ತಿಳಿಸಿವೆ.
‘ಪಾನ್ ಮಸಾಲಾ ಸೇವನೆಯು ಬಾಯಿಯ ಕ್ಯಾನ್ಸರ್ಗೆ ಕಾರಣವಾಗಬಹುದು ಎಂದು ಇತ್ತೀಚಿನ ಹಲವು ಸಂಶೋಧನೆಗಳು ತಿಳಿಸಿವೆ. ಇದನ್ನು ಇಂಟರ್ನ್ಯಾಷನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್ (ಐಎಆರ್‌ಸಿ) ಮತ್ತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವರದಿಗಳೂ ಒಪ್ಪಿವೆ. ಆದ್ದರಿಂದ ಅಮಿತಾಭ್ ತಮ್ಮ ನಿರ್ಧಾರದ ಕುರಿತು ಆಲೋಚಿಸಬೇಕು. ಶಾರುಖ್ ಖಾನ್, ಅಜಯ್ ದೇವಗನ್, ರಣವೀರ್ ಸಿಂಗ್, ಹೃತಿಕ್ ರೋಷನ್ ಮೊದಲಾದವರು ಪಾನ್ ಮಸಾಲಾ ಜಾಹಿರಾತಿನಲ್ಲಿ ಕಾಣಿಸಿಕೊಂಡಿರುವುದು ವಿದ್ಯಾರ್ಥಿಗಳಲ್ಲಿ ತಂಬಾಕು ಬಳಕೆ ಹೆಚ್ಚಲು ಕಾರಣವಾಗಿದೆ. ಈ ಕುರಿತು ನನಗೆ ಬೇಸರವಿದೆ’ ಎಂದು ರಾಷ್ಟ್ರೀಯ ತಂಬಾಕು ವಿರೋಧಿ ಸಂಘಟನೆ (NOTE) ಅಧ್ಯಕ್ಷ ಡಾ.ಶೇಖರ್ ಸಲ್ಕರ್ ಅಮಿತಾಭ್ಗೆ ಬರೆದ ಪತ್ರದಲ್ಲಿ ತಿಳಿಸಿದ್ದರು. ಇದಾದ ಬೆನ್ನಲ್ಲೇ ಬಚ್ಚನ್ ಅವರು ಜಾಹೀರಾತು ಪ್ರಚಾರದಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು.
ಇದನ್ನೂ ಓದಿ: ಸಂಪೂರ್ಣವಾಗಿ ಬದಲಾಯ್ತು ಅಭಿಷೇಕ್ ಬಚ್ಚನ್ ಚಹರೆ; ಇವರು ಅಮಿತಾಭ್ ಮಗನಾ ಎಂದು ಪ್ರಶ್ನಿಸಿದ ಫ್ಯಾನ್ಸ್