ಬಾಲಿವುಡ್ನ ಬಿಗ್-ಬಿ ಅಮಿತಾಭ್ ಬಚ್ಚನ್ ಅವರ ಬಳಿ ಸಾವಿರಾರು ಕೋಟಿ ರೂಪಾಯಿ ಆಸ್ತಿ ಇದೆ. ಪ್ರತಿ ಸಿನಿಮಾಗೆ ಅವರು ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಜಾಹೀರಾತಿಗಳಿಂದಲೂ ಅವರು ಬಹುಕೋಟಿ ರೂಪಾಯಿ ಸಂಪಾದನೆ ಮಾಡುತ್ತಾರೆ. ನೂರಾರು ಕಡೆಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ಅದರಿಂದಲೂ ಅವರಿಗೆ ಆದಾಯ ಬರುತ್ತದೆ. ಇಷ್ಟೆಲ್ಲ ದುಡ್ಡು ಇರುವ ಅಮಿತಾಭ್ ಬಚ್ಚನ್ ಅವರು ಶಾಪಿಂಗ್ ಹೇಗೆ ಮಾಡುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದೆ. ಆ ಬಗ್ಗೆ ‘ಕೌನ್ ಬನೇಗಾ ಕರೋಡ್ಪತಿ 16’ ಶೋನಲ್ಲಿ ಅವರು ಮಾತನಾಡಿದ್ದಾರೆ.
ನಾವೆಲ್ಲರೂ ಶಾಪಿಂಗ್ ಮಾಡುವಾಗ ಆ ವಸ್ತುವಿನ ಬೆಲೆ ಎಷ್ಟು ಎಂಬುದನ್ನು ಚೆಕ್ ಮಾಡುತ್ತೇವೆ. ಪ್ರೈಸ್ ಟ್ಯಾಗ್ ನೋಡಿ ಕೆಲವೊಮ್ಮೆ ಹೌಹಾರುವುದೂ ಇದೆ. ನಾವು ಇಷ್ಟಪಟ್ಟ ವಸ್ತುವಿನ ಬೆಲೆ ದುಬಾರಿ ಆಗಿದ್ದರೆ ಬೇಸರ ಆಗುತ್ತದೆ. ಬೆಲೆ ಕಡಿಮೆ ಇದ್ದರೆ ಖುಷಿ ಆಗುತ್ತದೆ. ಹಾಗಾದ್ರೆ ಅಮಿತಾಭ್ ಬಚ್ಚನ್ ಕೂಡ ಪ್ರೈಸ್ ಟ್ಯಾಗ್ ನೋಡಿಯೇ ಶಾಪಿಂಗ್ ಮಾಡುತ್ತಾರಾ? ‘ಹೌದು.. ಅದು ಸಹಜ’ ಎಂದು ಅಮಿತಾಭ್ ಬಚ್ಚನ್ ಹೇಳಿದ್ದಾರೆ. ಈ ವೇಳೆ ಅವರು ಒಂದು ಘಟನೆಯನ್ನು ನೆನಪಿಸಿಕೊಂಡಿದ್ದಾರೆ.
ಅಮಿತಾಭ್ ಬಚ್ಚನ್ ಅವರು ಒಮ್ಮೆ ಲಂಡನ್ನಲ್ಲಿ ಶಾಪಿಂಗ್ ಮಾಡುತ್ತಿದ್ದರು. ಒಂದು ಟೈ ಖರೀದಿಸಬೇಕು ಎಂದು ಅವರು ನೋಡುತ್ತಿದ್ದರು. ಅಮಿತಾಭ್ ಬಚ್ಚನ್ ಅವರ ಹಾವ-ಭಾವ ನೋಡಿದ ಅಂಗಡಿಯವನು ‘ಅದಕ್ಕೆ 120 ಪೌಂಡ್ (13 ಸಾವಿರ ರೂಪಾಯಿ) ಆಗುತ್ತದೆ’ ಎಂದು ವ್ಯಂಗ್ಯವಾಗಿ ಹೇಳಿದೆ. ಈ ವ್ಯಕ್ತಿಗೆ ಎಷ್ಟು ದುಬಾರಿ ಬೆಲೆಯ ಟೈ ಖರೀದಿಸುವ ಯೋಗ್ಯತೆ ಇದೆಯಾ ಎಂಬ ರೀತಿಯಲ್ಲಿತ್ತು ಆ ಅಂಗಡಿಯವನ ಲುಕ್.
ಇದನ್ನೂ ಓದಿ: ಅಮಿತಾಭ್ ಬಚ್ಚನ್ ಕಾಲಿಗೆ ನಮಸ್ಕರಿಸಲು ಬಂದ ರಜನಿಕಾಂತ್; ಬಿಗ್ ಬಿ ಪ್ರತಿಕ್ರಿಯೆ ಏನು?
ಅಂಗಡಿಯವನಿಗೆ ಅಮಿತಾಭ್ ಅವರು ಸರಿಯಾದ ಉತ್ತರ ನೀಡಿದ್ದರು. ‘ಹಾಗಾದ್ರೆ ನನಗೆ ಇಂಥ 10 ಟೈ ಪ್ಯಾಕ್ ಮಾಡು’ ಎಂದು ಅವರು ಹೇಳಿದರು. ‘ಭಾರತೀಯರ ಸ್ಪಿರಿಟ್ ಏನು ಎಂಬುದನ್ನು ಅವರಿಗೆ ತೋರಿಸುವುದು ಎಷ್ಟು ಮುಖ್ಯ ಎಂಬುದು ಅರಿವಾದ ಸಮಯ ಅದು. ನಮ್ಮನ್ನು ಕಡಿಮೆ ಅಂತ ತಿಳಿದುಕೊಳ್ಳುವ ಅವಶ್ಯಕತೆ ಇಲ್ಲ ಎಂಬುದನ್ನು ನಾವು ಕೆಲವೊಮ್ಮೆ ತೋರಿಸಬೇಕಾಗುತ್ತದೆ’ ಎಂದು ಅಮಿತಾಭ್ ಬಚ್ಚನ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.