ದೊಡ್ಡ ಬ್ಯಾನರ್ ಸಿನಿಮಾಗಳಲ್ಲಿ, ಸ್ಟಾರ್ ನಟರೊಟ್ಟಿಗೆ ನಟಿಸಬೇಕು ಎಂಬುದು ಹಲವು ನಟ-ನಟಿಯರ ಬಯಕೆ. ಅದರಲ್ಲಿಯೂ ವೃತ್ತಿಯ ಆರಂಭದ ಸಮಯದಲ್ಲಿಯೇ ಸ್ಟಾರ್ ನಟರೊಟ್ಟಿಗೆ ನಟಿಸಲು ಆಫರ್ ದೊರೆತರೆ ಯಾವ ನಟ-ನಟಿಯರೂ ಒಲ್ಲೆ ಎನ್ನುವುದಿಲ್ಲ. ಆದರೆ ನಟಿ ಅಮೃತಾ ರಾವ್ (Amrita Rao) ಇಂಥಹಾ ದೊಡ್ಡ ಆಫರ್ ಒಂದನ್ನು ತಮ್ಮ ಆರಂಭದ ದಿನದಲ್ಲಿಯೇ ಕಳೆದುಕೊಂಡರು, ಅದೂ ತಮ್ಮ ತಪ್ಪಿನಿಂದ ಅಲ್ಲ, ಅವರ ಮ್ಯಾನೇಜರ್ ಮಾಡಿದ ಮೋಸದಿಂದ!
ಚಿತ್ರರಂಗದಲ್ಲಿ 21 ವರ್ಷ ಕಳೆದಿರುವ ನಟಿ ಅಮೃತಾ ರಾವ್ ತಮ್ಮ ಜೀವನ ಪಯಣದ ಬಗ್ಗೆ ಪುಸ್ತಕವೊಂದನ್ನು ಬರೆದಿದ್ದಾರೆ. ಪುಸ್ತಕಕ್ಕೆ ಕಪಲ್ ಆಫ್ ಥಿಂಗ್ಸ್ ಎಂದು ಹೆಸರಿಟ್ಟಿದ್ದು, ತಮ್ಮ ಜೀವನ, ಸಿನಿಮಾ ಇನ್ನಿತರೆ ವಿಷಯಗಳನ್ನು ಪುಸ್ತಕದಲ್ಲಿ ದಾಖಲಿಸಿದ್ದಾರೆ. ವೃತ್ತಿ ಬದುಕಿನ ಆರಂಭದಲ್ಲಿ ದೊಡ್ಡ ಸಿನಿಮಾ ಒಂದರ ಅವಕಾಶವನ್ನು ಹೇಗೆ ಕಳೆದುಕೊಂಡರು ಎಂಬ ಬಗ್ಗೆಯೂ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ ನಟಿ ಅಮೃತಾ.
ಅಮೃತಾ ರಾವ್ ಒಮ್ಮೆ ಸಿನಿಮಾದ ಚಿತ್ರೀಕರಣ ಮುಗಿಸಿ ಹೈದರಾಬಾದ್ನ ತಾಜ್ ಬಂಜಾರಾ ಹೋಟೆಲ್ಗೆ ಮರಳಿದರಂತೆ ಅದೇ ಸಮಯಕ್ಕೆ ಅಲ್ಲಿ ನಿರ್ಮಾಪಕ ಬೋನಿ ಕಪೂರ್ ಅವರ ಮ್ಯಾನೇಜರ್ ಭೇಟಿಯಾಗಿದ್ದಾರೆ. ಹಾಗೆಯೇ ಅವರೊಟ್ಟಿಗೆ ಮಾತನಾಡುತ್ತಿದ್ದಾಗ, ನಿಮ್ಮ ಡೇಟ್ಸ್ ಕ್ಲಾಶ್ ಆಗದೇ ಇದ್ದರೆ ನಾವು ಒಟ್ಟಿಗೆ ವಾಂಟೆಡ್ ಸಿನಿಮಾದಲ್ಲಿ ಕೆಲಸ ಮಾಡಿರುತ್ತಿದ್ದೆವು ಎಂದರಂತೆ. ಇದನ್ನು ಕೇಳಿದ ಅಮೃತಾ ರಾವ್ಗೆ ಶಾಕ್ ಆಗಿದೆ, ”ವಾಂಟೆಡ್ ಸಿನಿಮಾಕ್ಕಾ? ನನಗೆ ಆ ಸಿನಿಮಾದ ಆಫರ್ ಬಂದಿತ್ತಾ?” ಎಂದು ಅಮೃತಾ ಪ್ರಶ್ನೆ ಮಾಡಿದ್ದಾರೆ.
”ಹೌದು, ನಾನು ನಿಮ್ಮ ಮ್ಯಾನೇಜರ್ಗೆ ಕರೆ ಮಾಡಿದ್ದೆ. ನೀವು ಬಹಳ ಬ್ಯುಸಿ ಇರುವುದಾಗಿಯೂ ಎಷ್ಟೇ ಪ್ರಯತ್ನ ಪಟ್ಟರು ನಿಮ್ಮ ಡೇಟ್ಸ್ ಗಳನ್ನು ಹೊಂದಿಸಲು ಸಾಧ್ಯವೇ ಇಲ್ಲ ಎಂದು ಹೇಳಿ ನೀವು ವಾಂಟೆಡ್ ಸಿನಿಮಾದಲ್ಲಿ ನಟಿಸಲು ಸಾಧ್ಯವಿಲ್ಲ ಎಂದು ಮ್ಯಾನೇಜರ್ ಹೇಳಿದ. ಸರಿ ಎಂದುಕೊಂಡು ನಾವು ಆಯೆಷಾ ಟಾಕಿಯಾ ಅನ್ನು ನಾಯಕಿಯನ್ನಾಗಿ ಹಾಕಿಕೊಂಡೆವು” ಎಂದರಂತೆ ಬೋನಿ ಕಪೂರ್ ಮ್ಯಾನೇಜರ್.
ಇದನ್ನು ಕೇಳಿದ ಅಮೃತಾಗೆ ಇನ್ನಷ್ಟು ಶಾಕ್ ಆಗಿದೆ. ಏಕೆಂದರೆ ಅಮೃತಾಗೆ ವಾಂಟೆಡ್ ಸಿನಿಮಾದ ನಾಯಕಿ ಪಾತ್ರದ ಆಫರ್ ಬಂದಿದ್ದನ್ನು ಅವರ ಮ್ಯಾನೇಜರ್ ಅವರಿಗೆ ಹೇಳಿಯೇ ಇರಲಿಲ್ಲವಂತೆ. ಈ ಘಟನೆ ಬಗ್ಗೆ ಬರೆದುಕೊಂಡಿರುವ ಅಮೃತಾ, ”ನನ್ನ ಮ್ಯಾನೇಜರ್ ಅನ್ನು ಕೆಲಸದಿಂದ ತೆಗೆದಿದ್ದೆ, ಅದಕ್ಕೆ ಆತ ಹೀಗೆ ನನ್ನ ವಿರುದ್ಧ ಸೇಡು ತೀರಿಸಿಕೊಂಡಿದ್ದ” ಎಂದು ಬರೆದುಕೊಂಡಿದ್ದಾರೆ.
ಅಂದಹಾಗೆ, ಸಲ್ಮಾನ್ ಖಾನ್ ನಟಿಸಿದ್ದ ವಾಂಟೆಡ್ ಸಿನಿಮಾವು 2009 ರಲ್ಲಿ ಬಿಡುಗಡೆ ಆಗಿತ್ತು. ತೆಲುಗಿನ ‘ಪೋಕಿರಿ’ ಸಿನಿಮಾದ ರೀಮೇಕ್ ಆದ ಈ ಸಿನಿಮಾದಲ್ಲಿ ಆಯೆಷಾ ಟಾಕಿಯಾ ನಾಯಕಿ. ಮೊದಲು ಸಿನಿಮಾದ ನಾಯಕಿ ಪಾತ್ರಕ್ಕೆ ಅಸೀನ್ ಅವರನ್ನು ಕೇಳಲಾಗಿತ್ತು. ಬಳಿಕ ಮೂಲ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಇಲಿಯಾನಾ ಅವರನ್ನೂ ಕೇಳಲಾಗಿತ್ತು. ಅವರಿಬ್ಬರೂ ನಟಿಸುವುದಿಲ್ಲ ಎಂದ ಬಳಿಕ ಆ ಅವಕಾಶ ಅಮೃತಾಗೆ ಹೋಗಿತ್ತು, ಆದರೆ ಅವರ ಮ್ಯಾನೇಜರ್ ಮಾಡಿದ ತಪ್ಪಿನಿಂದ ಆ ಅವಕಾಶ ಆಯೆಷಾ ಟಾಕಿಯಾ ಪಾಲಾಯಿತು. ಸಿನಿಮಾ ಸೂಪರ್ ಹಿಟ್ ಆಯಿತು. ಆ ಅವಕಾಶ ತಪ್ಪಿದ ಬಳಿಕ ಅಮೃತಾ ಮತ್ತೆ ಸಲ್ಮಾನ್ ಖಾನ್ ಜೊತೆ ನಟಿಸಲು ಸಾಧ್ಯವಾಗಲೇ ಇಲ್ಲ.