Alia Bhatt: ಆಲಿಯಾ ಭಟ್ ಹಣ ತೊಡಗಿಸಿರುವ ಐದು ಸಂಸ್ಥೆಗಳಿವು
ಆಲಿಯಾ ಭಟ್ ಒಳ್ಳೆಯ ನಟಿ ಮಾತ್ರವಲ್ಲ ಒಳ್ಳೆಯ ಉದ್ಯಮಿಯೂ ಹೌದು. ಹಲವು ಸಂಸ್ಥೆಗಳ ಮೇಲೆ ಆಲಿಯಾ ಹೂಡಿಕೆ ಮಾಡಿದ್ದಾರೆ ಅವುಗಳಿಂದ ಕೋಟ್ಯಂತರ ಲಾಭವನ್ನೂ ಪಡೆದುಕೊಳ್ಳುತ್ತಿದ್ದಾರೆ. ಆಲಿಯಾ ಹೂಡಿಕೆ ಮಾಡಿರುವ ಸಂಸ್ಥೆಗಳ ಪಟ್ಟಿ ಇಲ್ಲಿದೆ.
ಆಲಿಯಾ ಭಟ್ (Alia Bhatt) ಅತ್ಯುತ್ತಮ ನಟಿ ಮಾತ್ರವಲ್ಲ ಒಳ್ಳೆಯ ಉದ್ಯಮಿ ಸಹ. ನಟನೆ ಆಲಿಯಾರ ಮುಖ್ಯ ವೃತ್ತಿಯಾದರೂ ಅದೊಂದರಿಂದಲೇ ಅವರು ಹಣ ಗಳಿಸುವುದಿಲ್ಲ. ಸರಾಸರಿ ಗಮನಿಸಿದರೆ ನಟನಗಿಂತಲೂ ಉದ್ಯಮದಿಂದಲೇ ಹೆಚ್ಚು ಹಣವನ್ನು ಆಲಿಯಾ ಭಟ್ ಗಳಿಸುತ್ತಾರೆ. ಬಾಲಿವುಡ್ನ ಹಲವರು ಆಲಿಯಾ ಅನ್ನು ದಡ್ಡಿ ಎಂದು ಅಣಕಿಸುವುದುಂಟು ಆದರೆ ಅಸಲಿಗೆ ಆಲಿಯಾ ಬಹಳ ಬುದ್ಧಿವಂತೆ ಅವರು ಹೂಡಿಕೆ ಮಾಡಿರುವ ಸಂಸ್ಥೆಗಳೇ ಆಲಿಯಾ ಎಷ್ಟು ಬುದ್ಧಿವಂತೆ ಎಂಬುದನ್ನು ತೋರಿಸುತ್ತವೆ.
ಆಲಿಯಾ ಭಟ್ರ ಈ ವರೆಗಿನ ಅತಿ ದೊಡ್ಡ ಹೂಡಿಕೆ ಎಂದರೆ ಅದು ನೈಕಾ. ಭಾರತದ ಜನಪ್ರಿಯ ಸೌಂದರ್ಯವರ್ಧಕ ಉತ್ಪನ್ನಗಳ ಸಂಸ್ಥೆ ನೈಕಾನಲ್ಲಿ ಆಲಿಯಾ ಭಟ್ ಒಂದು ದಶಕಕ್ಕೂ ಹಿಂದೆಯೇ ಹೂಡಿಕೆ ಮಾಡಿದ್ದಾರೆ. 2012 ರಲ್ಲಿ ಈ ಸಂಸ್ಥೆ ಪ್ರಾರಂಭವಾದಾಗ ಆಲಿಯಾ ಭಟ್ ಈ ಸಂಸ್ಥೆಯಲ್ಲಿ ಹೂಡಿಕೆ ಮಾಡಿದ್ದರು. ನೈಕಾ ಸಂಸ್ಥೆ ಇದೀಗ ಭಾರಿ ಗಾತ್ರದಲ್ಲಿ ಬೆಳೆದಿದ್ದು, ಈ ಸಂಸ್ಥೆಯ ಪ್ರಸ್ತುತ ಮೌಲ್ಯ ಸುಮಾರು 10,000 ಕೋಟಿಗೂ ಹೆಚ್ಚಿದೆ. ನೈಕಾ ಸಂಸ್ಥೆಯಲ್ಲಿ ದೊಡ್ಡ ಪಾಲುದಾರಿಕೆಯನ್ನೇ ಆಲಿಯಾ ಭಟ್ ಹೊಂದಿದ್ದಾರೆ.
ಎಡ್ಮಾಮ ಹೆಸರಿನ ಬಟ್ಟೆ ಬ್ರಾಂಡ್ ಅನ್ನು ಆಲಿಯಾ ಭಟ್ ಹೊಂದಿದ್ದಾರೆ. ನೈಸರ್ಗಿಕ ವಸ್ತುಗಳನ್ನಷ್ಟೆ ಬಳಸಿ ಬಟ್ಟೆಗಳನ್ನು ಈ ಸಂಸ್ಥೆ ತಯಾರಿಸುತ್ತಿದ್ದು, ಕೇವಲ ಮಕ್ಕಳ ಬಟ್ಟೆಗಳಷ್ಟೆ ಎಡ್ ಮಾಮನಲ್ಲಿ ದೊರೆಯುತ್ತವೆ. ಈ ಸಂಸ್ಥೆಗೆ ಆಲಿಯಾ ಭಟ್ ಪೂರ್ಣ ಒಡತಿ ಬೇರೆ ಪಾಲುದಾರರು ಇಲ್ಲ. ಈ ಸಂಸ್ಥೆ ಸಹ ಲಾಭದಲ್ಲಿದ್ದು ಪ್ರತಿ ವರ್ಷವೂ ತನ್ನ ಸೇಲ್ಸ್ ಅನ್ನು ಹೆಚ್ಚು ಮಾಡಿಕೊಂಡು ಸಾಗುತ್ತಿದೆ.
ಸ್ಟೈಲ್ ಕ್ರ್ಯಾಕರ್ ಹೆಸರಿನ ಸಂಸ್ಥೆಯ ಮೇಲೂ ದೊಡ್ಡ ಮೊತ್ತವನ್ನು ಆಲಿಯಾ ಹೂಡಿಕೆ ಮಾಡಿದ್ದಾರೆ. ಸ್ಟೈಲ್ ಕ್ರ್ಯಾಕರ್ ಎಂಬುದು ಜನರಿಗೆ ಅವರಿಗೆ ಹೊಂದುವ ಬಟ್ಟೆ, ಹೇರ್ಸ್ಟೈಲ್ ಇತರೆಗಳನ್ನು ಕಸ್ಟಮೈಜ್ ಮಾಡಿಕೊಡುವ ಸಂಸ್ಥೆಯಾಗಿದೆ. ಆಲಿಯಾ ಭಟ್ರ ಖಾಸಗಿ ಸ್ಟೈಲಿಸ್ಟ್ ಆಗಿರುವ ಅರ್ಚನಾ ಈ ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಈ ಸಂಸ್ಥೆ ಸಹ ದೊಡ್ಡದಾಗಿ ಬೆಳೆಯುತ್ತಿದ್ದು, 2017 ರಲ್ಲಿ ಎಎಂಜಿ ವೆಂಚರ್ಸ್ ಕಡೆಯಿಂದ ಬರೋಬ್ಬರಿ 14 ಕೋಟಿ ಹಣವನ್ನು ಹೂಡಿಕೆಯಾಗಿ ಪಡೆದುಕೊಂಡಿದೆ.
ಪೂಲ್.ಕೊ ಹೆಸರಿನ ಭಿನ್ನ ಸಂಸ್ಥೆಯೊಂದರ ಮೇಲೆಯೂ ಆಲಿಯಾ ಭಟ್ ಹೂಡಿಕೆ ಮಾಡಿದ್ದಾರೆ. ಈ ಸಂಸ್ಥೆ ಹೂವಿನ ತ್ಯಾಜ್ಯವನ್ನು ಬಳಸಿ ವಿವಿಧ ಸಾಮಗ್ರಿಗಳನ್ನು ತಯಾರಿಸಿ ಮಾರಾಟ ಮಾಡುತ್ತದೆ. ಊದು ಬತ್ತಿ, ಮೇಣದ ಬತ್ತಿ, ಸೆಂಟ್, ಗಿಫ್ಟ್ ಬಾಕ್ಸ್ ಇನ್ನೂ ಹಲವು ಮಾದರಿಯ ವಸ್ತುಗಳನ್ನು ಈ ಸಂಸ್ಥೆ ನಿರ್ಮಿಸಿ ಮಾರಾಟ ಮಾಡುತ್ತದೆ. ಈ ಸಂಸ್ಥೆಯು 73 ಮಂದಿ ಮಹಿಳೆಯರಿಗೆ ಪೂರ್ಣ ಪ್ರಮಾಣದ ಉದ್ಯೋಗ ನೀಡಿರುವ ಜೊತೆಗೆ ಲಾಭದ ಅಂಶದಿಂದ ಬಡಮಕ್ಕಳ ಶಿಕ್ಷಣಕ್ಕೆ ಸಹಾಯ ಮಾಡುತ್ತಿದೆ.
ಇವುಗಳ ಜೊತೆಗೆ ಎಟರ್ನಲ್ಸ್ ಸನ್ಶೈನ್ ಪ್ರೊಡಕ್ಷನ್ ಹೆಸರಿನ ನಿರ್ಮಾಣ ಸಂಸ್ಥೆಯೊಂದನ್ನು ಆಲಿಯಾ ಕಟ್ಟಿದ್ದು ತಮ್ಮದೇ ನಟನೆಯ ಡಾರ್ಲಿಂಗ್ಸ್ ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ, ಮಾಡುತ್ತಲಿದ್ದಾರೆ. ಇವುಗಳ ಹೊರತಾಗಿ ಇನ್ನೂ ಕೆಲವು ಸಂಸ್ಥೆಗಳ ಮೇಲೆ ಆಲಿಯಾ ಭಟ್ ಹೂಡಿಕೆ ಮಾಡಿದ್ದಾರೆ. ಆದರೆ ಆಲಿಯಾರ ಬಹುತೇಕ ಹೂಡಿಕೆಗಳು ನಿಸರ್ಗ ಉಳಿಸುವ ಹಗೂ ಫ್ಯಾಷನ್ ಕೇಂದ್ರಿತವೇ ಆಗಿರುವುದು ವಿಶೇಷ. ಇದಕ್ಕೇ ಹೇಳಿದ್ದು ಆಲಿಯಾ ಜಾಣ ಉದ್ಯಮಿ ಎಂದು.