ನಟ ಸಲ್ಮಾನ್ ಖಾನ್ (Salman Khan) ಜೀವ ತೆಗೆಯಲು ಉತ್ತರ ಭಾರತದ ನಟೋರಿಯಸ್ ಗ್ಯಾಂಗ್ ಒಂದು ಅಡಿಗಡಿಗೆ ಹೊಂಚು ಹಾಕುತ್ತಿದೆ. ಸಲ್ಮಾನ್ ಖಾನ್ ಅನ್ನು ಕೊಂದೇ ಕೊಲ್ಲುತ್ತೇನೆ ಎಂದು ಪಾತಕಿ ಲಾರೆನ್ಸ್ ಬಿಷ್ಣೋಯಿ ಹಲವು ವರ್ಷಗಳಿಂದ ಹೇಳುತ್ತಲೇ ಬರುತ್ತಿದ್ದಾರೆ. ಕೆಲವು ದಿನ ಮುಂಚೆ ಸಹ ಸಲ್ಮಾನ್ ಖಾನ್ ಅನ್ನು ಕೊಲ್ಲವುದೇ ನನ್ನ ಜೀವನದ ಅಂತಿಮ ಗುರಿ ಎಂದು ಹೇಳಿದ್ದಾನೆ. ಅದರ ಬೆನ್ನಲ್ಲೆ ಸಲ್ಮಾನ್ ಖಾನ್ಗೆ ಮತ್ತೊಂದು ಬೆದರಿಕೆ ಬಂದಿದೆ.
ಈ ಹಿಂದೆ ಸಲ್ಮಾನ್ ಖಾನ್ಗೆ ಪತ್ರದ ಮೂಲಕ ಗೋಲ್ಡಿ ಬ್ರಾರ್-ಬಿಷ್ಣೋಯಿ ಗ್ಯಾಂಗ್ನವರು ಬೆದರಿಕೆ ಹಾಕಿದ್ದರು. ಆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಲಾರೆನ್ಸ್ ಬಿಷ್ಣೋಯಿ ಹಾಗೂ ಇನ್ನೂ ಹಲವರು ತನಿಖೆಗೆ ಒಳಪಡಿಸಿ, ಸಲ್ಮಾನ್ ಖಾನ್ ವಿರುದ್ಧ ನಡೆದ ಕೆಲವು ಹತ್ಯಾಪ್ರಯತ್ನಗಳ ಆತಂಕಕಾರಿ ಸಂಗತಿಗಳನ್ನು ಹೊರ ಹಾಕಿದ್ದರು. ಇದೀಗ ಸಲ್ಮಾನ್ ಖಾನ್ಗೆ ಮತ್ತೊಂದು ಬೆದರಿಕೆ ಬಂದಿದ್ದು ಈ ಬಾರಿ ಇ-ಮೇಲ್ ಮೂಲಕ ಈ ಬೆದರಿಕೆ ಬಂದಿದೆ.
ಸಲ್ಮಾನ್ ಖಾನ್ರ ಆತ್ಮೀಯ ಗೆಳೆಯ ಹಾಗೂ ಮ್ಯಾನೇಜರ್ ಆಗಿರುವ ಪ್ರಶಾಂತ್ ಗುಂಜಲ್ಕರ್ ಅವರಿಗೆ ಬೆದರಿಕೆ ಇ-ಮೇಲ್ ಬಂದಿದ್ದು, ಈ ಬೆದರಿಕೆ ಇ-ಮೇಲ್ ಅನ್ನು ಪಾತಕಿ ಗೋಲ್ಡಿ ಬ್ರಾರ್ನ ಆಪ್ತ ಮೋಹಿತ್ ಗರ್ಗ್ ಕಳಿಸಿದ್ದಾನೆ ಎನ್ನಲಾಗಿದೆ. ಬೆದರಿಕೆ ಇಮೇಲ್ ಬಂದಿರುವ ಬಗ್ಗೆ ಪ್ರಶಾಂತ್ ಮುಂಬೈನ ಬಾಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಶನಿವಾರ ಮಧ್ಯಾಹ್ನ ಇಮೇಲ್ ಬಂದಿದ್ದು, ”ಗೋಲ್ಡಿ ಅಣ್ಣ (ಗೋಲ್ಡಿ ಬ್ರಾರ್) ನಿನ್ನ ಬಾಸ್ (ಸಲ್ಮಾನ್ ಖಾನ್) ಜೊತೆ ಮಾತನಾಡಬೇಕಂತೆ. ಲಾರೆನ್ಸ್ ನ ಸಂದರ್ಶನ ನೋಡಿಯೇ ಇರಬೇಕು ಅವನು. ಸಂದರ್ಶನ ನೋಡಿಲ್ಲ ಎಂದಾದರೆ ತೋರಿಸು ಅವನಿಗೆ. ಈ ವಿಷಯ ಇಲ್ಲಿಗೆ ಮುಗಿಸಬೇಕು ಎಂದರೆ ಗೋಲ್ಡಿ ಅಣ್ಣನ ಜೊತೆ ಮಾತನಾಡಲು ಹೇಳು. ಅದೂ ನೇರಾ-ನೇರಾ. ಈಗಿನ್ನೂ ಸಮಯ ಇದೆ ಅದಕ್ಕೆ ಹೇಳುತ್ತಿದ್ದೇನೆ. ಇಲ್ಲವಾದರೆ ಹೊಡೆಯುತ್ತೇವೆ ಅಷ್ಟೆ” ಎಂದು ಮೇಲ್ನಲ್ಲಿ ಬರೆಯಲಾಗಿದೆ. ಮೇಲ್ ಮೋಹಿತ್ ಗರ್ಗ್ ಎಂಬಾತನ ಖಾತೆಯ ಮೂಲಕ ಬಂದಿದೆ.
ಪಾತಕಿ ಲಾರೆನ್ಸ್ ಬಿಷ್ಣೋಯಿ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದು ಕೆಲವು ದಿನಗಳ ಹಿಂದೆ ಜೈಲಿನಿಂದ ನೀಡಿದ್ದ ಸಂದರ್ಶನದಲ್ಲಿ ಸಲ್ಮಾನ್ ಖಾನ್ ಅನ್ನು ಕೊಲ್ಲುವುದೇ ನನ್ನ ಜೀವನದ ಅಂತಿಮ ಗುರಿ ಎಂದು ಹೇಳಿದ್ದ. ಲಾರೆನ್ಸ್ ಬಿಷ್ಣೋಯಿ ಹಾಗೂ ಗೋಲ್ಡಿ ಬ್ರಾರ್ ಆತ್ಮೀಯರಾಗಿದ್ದು ಒಂದೇ ಗ್ಯಾಂಗ್ನ ಲೀಡರ್ಗಳಾಗಿದ್ದಾರೆ.
ಜಿಂಕೆ ಹತ್ಯೆ ಪ್ರಕರಣದಿಂದಾಗಿ ಲಾರೆನ್ಸ್ ಬಿಷ್ಣೋಯಿ, ಸಲ್ಮಾನ್ ಖಾನ್ ವಿರುದ್ಧ ಹಗೆ ಬೆಳೆಸಿಕೊಂಡಿದ್ದಾರೆ. ಬಿಷ್ಣೋಯಿ ಸಮುದಾಯಕ್ಕೆ ಜಿಂಕೆ ದೇವರಿಗೆ ಸಮಾನ. ಹಾಗಾಗಿ ಜಿಂಕೆಯನ್ನು ಕೊಂದ ಸಲ್ಮಾನ್ ಖಾನ್ ಅನ್ನು ಕೊಂದೇ ತೀರುವುದಾಗಿ ಲಾರೆನ್ಸ್ ಹೇಳಿದ್ದಾನೆ. ಹಲವು ಬಾರಿ ವಿವಿಧ ರೀತಿಯಲ್ಲಿ ಸಲ್ಮಾನ್ ಖಾನ್ ಅನ್ನು ಕೊಲ್ಲಲು ಯತ್ನಿಸಿದ್ದಾನೆ ಆದರೆ ವಿಫಲನಾಗಿದ್ದಾನೆ. ಇನ್ನು ಗೋಲ್ಡಿ ಬ್ರಾರ್ ಸಹ ಪಾತಕಿಯಾಗಿದ್ದು 2017 ರಲ್ಲಿಯೇ ಆತ ಕೆನಡಾಕ್ಕೆ ಪರಾರಿಯಾಗಿ ಈಗ ಅಲ್ಲಿಂದಲೇ ಗ್ಯಾಂಗ್ ನಡೆಸುತ್ತಿದ್ದಾನೆ. ಪಂಜಾಬಿ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲ ಹತ್ಯೆಯನ್ನು ಗೋಲ್ಡಿ ಬ್ರಾರ್ ಮಾಡಿಸಿದ್ದ.
ಕಳೆದ ಬಾರಿ ಪತ್ರದ ಮೂಲಕ ಬೆದರಿಕೆ ಬಂದಾಗಲೇ ಸಲ್ಮಾನ್ರ ಭದ್ರತೆಯನ್ನು ಪೊಲೀಸರು ಹೆಚ್ಚಿಸಿದ್ದಾರೆ ಜೊತೆಗೆ ಸಲ್ಮಾನ್ ಖಾನ್ ಸಹ ಪರವಾನಗಿ ಹೊಂದಿರುವ ಬಂದೂಕನ್ನು ಸಹ ಪಡೆದುಕೊಂಡಿದ್ದಾರೆ.