ಎ.ಆರ್.ರೆಹಮಾನ್​ ಕನಸಿನಲ್ಲಿ ಬಂದ ಸಂಗೀತ ಆ ಅದ್ಭುತ ಹಾಡಾಯ್ತು

|

Updated on: Jun 30, 2023 | 4:16 PM

AR Rahaman: ತಮ್ಮ ಸಂಗೀತ ಪ್ರತಿಭೆಗೆ ಎರಡು ಆಸ್ಕರ್ ಗೆದ್ದಿರುವ ಎ.ಆರ್.ರೆಹಮಾನ್ ಪ್ರತಿ ನಿಮಿಷವೂ ಸಂಗೀತವನ್ನೂ ಉಸಿರಾಡುವ ವ್ಯಕ್ತಿ, ಅವರ ಕನಸೂ ಸಹ ಸಂಗೀತಮಯವಾಗಿರುತ್ತದೆ. ಇಲ್ಲಿದೆ ಉದಾಹರಣೆ..

ಎ.ಆರ್.ರೆಹಮಾನ್​ ಕನಸಿನಲ್ಲಿ ಬಂದ ಸಂಗೀತ ಆ ಅದ್ಭುತ ಹಾಡಾಯ್ತು
ಎಆರ್ ರೆಹಮಾನ್
Follow us on

ಎ.ಆರ್.ರೆಹಮಾನ್ (AR Rahaman) ವಿಶ್ವದ ಅತ್ಯುತ್ತಮ ಸಂಗೀತ ನಿರ್ದೇಶಕರಲ್ಲಿ (Music Director) ಒಬ್ಬರು. ತಮ್ಮ ಅದ್ಭುತ ಸಂಗೀತಕ್ಕೆ ಎರಡು ಆಸ್ಕರ್​ಗಳನ್ನು ಮುಡಿಗೇರಿಸಿಕೊಂಡಿರುವ ರೆಹಮಾನ್ ಇನ್ನೂ ಹಲವು ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗೌರವಗಳನ್ನು ಪಡೆದುಕೊಂಡಿದ್ದಾರೆ. ರೆಹಮಾನ್ ಜೀವನವೇ ಸಂಗೀತ, ಎಲ್ಲದರಲ್ಲೂ ಸಂಗೀತವನ್ನೇ ಕಾಣುತ್ತಾರೆ. ರೆಹಮಾನ್, ಸಾಮಾನ್ಯವಾಗಿ ಬೆಳಗಿನ ಜಾವ 3 ಗಂಟೆಗೆ ಎದ್ದು ಸಂಗೀತ ಕಂಪೋಸ್ ಮಾಡಲು ಪ್ರಾರಂಭಿಸುತ್ತಾರಂತೆ. ಆದರೆ ಅವರು ಮಲಗಿದ್ದಾಗಲೂ ಅವರ ಮೆದುಳು ಸಂಗೀತಕ್ಕೆ ಬಗ್ಗೆಯೇ ಆಲೋಚಿಸುತ್ತಿರುತ್ತದೆ.

ತಮಿಳಿನಲ್ಲಿ ನೂರಾರು ಅತ್ಯುತ್ತಮ ಹಾಡುಗಳನ್ನು ನೀಡಿರುವ ಎ.ಆರ್.ರೆಹಮಾನ್ ಬಾಲಿವುಡ್​ಗೆ ಸಂಗೀತ ನೀಡಲು ಪ್ರಾರಂಭಿಸಿದ್ದು ರಂಗೀಲ ಸಿನಿಮಾ ಮೂಲಕ. ತಮಿಳಿನಂತೆ ಹಿಂದಿಯಲ್ಲಿಯೂ ನೂರಾರು ಅತ್ಯುತ್ತಮ ಹಾಡುಗಳನ್ನು ಎ.ಆರ್.ರೆಹಮಾನ್ ನೀಡಿದ್ದಾರೆ. ತಮಿಳಿನಲ್ಲಿ ಹೆಚ್ಚಾಗಿ ಪ್ರೇಮ, ವಿರಹ ಹಾಗೂ ಹೀರೋ ಇಂಟ್ರೋಡಕ್ಷನ್ ಹಾಡುಗಳನ್ನು ನೀಡಿರುವ ಎ.ಆರ್.ರೆಹಮಾನ್ ಹಿಂದಿಯಲ್ಲಿ ಭಕ್ತಿಗೀತೆಗಳು, ದೇಶಪ್ರೇಮ ಸಾರುವ ಗೀತೆಗಳು, ಭಜನೆ ಮಾದರಿಯ ಹಾಡು, ತಾಯಿ ಮಗನಿಗಾಗಿ ಹಾಡುವ ಹಾಡು, ರಾಕ್ ಸಂಗೀತ, ಧರ್ಮ ಸಾಮರಸ್ಯ ಸಾರುವ ಹೀಗೆ ಭಿನ್ನ ಭಿನ್ನ ಹಾಡುಗಳನ್ನು ನೀಡಿದ್ದಾರೆ.

ಇದನ್ನೂ ಓದಿ:IIFA: ಎಆರ್​​ ರೆಹಮಾನ್ ಪಾದ ಮುಟ್ಟಿ ನಮಸ್ಕರಿಸಿದ ಹನಿ ಸಿಂಗ್​

ಎ.ಆರ್.ರೆಹಮಾನ್ ಅವರ ಸಂಗೀತವನ್ನು ಪರಿಣಾಮಕಾರಿ ಬಳಸಿಕೊಂಡ ನಿರ್ದೇಶಕರಲ್ಲಿ ಬಾಲಿವುಡ್​ನ ರಾಕೇಶ್ ಓಂ ಪ್ರಕಾಶ್ ಮೆಹ್ರಾ ಒಬ್ಬರು. ಮೊದಲ ಬಾರಿಗೆ ರಂಗ್ ದೇ ಬಸಂತಿ ಸಿನಿಮಾದಲ್ಲಿ ಎ.ಆರ್.ರೆಹಮಾನ್ ಜೊತೆ ಕೆಲಸ ಮಾಡಿ ಅತ್ಯುತ್ತಮ ಹಾಡುಗಳನ್ನು ಪಡೆದುಕೊಂಡಿದ್ದರು. ಆ ಸಿನಿಮಾ ಹಾಗೂ ಅದರ ಸಂಗೀತ ಈಗ ಕಲ್ಟ್ ಆಗಿ ಗುರಿತಿಸಲಾಗುತ್ತದೆ. ಅದಾದ ಬಳಿಕ ರೆಹಮಾನ್​ ಜೊತೆಗೆ ಓಂ ಪ್ರಕಾಶ್ ಮೆಹ್ರಾ ಕೆಲಸ ಮಾಡಿದ್ದು ಅವರ ನಿರ್ದೇಶನದ ಡೆಲ್ಲಿ 6 ಸಿನಿಮಾಕ್ಕಾಗಿ.

ರಂಗ್ ದೇ ಬಸಂತಿ ಸಿನಿಮಾ ರೀತಿಯಲ್ಲಿಯೇ ಡೆಲ್ಲಿ 6 ನ ಎಲ್ಲ ಹಾಡುಗಳು ಸೂಪರ್ ಡೂಪರ್ ಹಿಟ್. ಧರ್ಮ ಜಂಜಾಟದ ಕತೆಯುಳ್ಳ ಆ ಸಿನಿಮಾದ ಒಂದೊಂದು ಹಾಡು ಸಹ ಭಿನ್ನ-ಭಿನ್ನ ಸಂದರ್ಭ ಹಾಗೂ ಭಿನ್ನ ಭಿನ್ನ ವಿಷಯಗಳ ಕುರಿತಾದದ್ದಾಗಿತ್ತು. ಮಹಿಳಾ ಸ್ವಾತಂತ್ರ್ಯದ ಬಗ್ಗೆ ಮಸಕ್ಕಲಿ-ಮಸಕ್ಕಲಿ ಹಾಡು, ಜನಪದ ಪ್ರತಿನಿಧಿಸುವ ಗೆಂಡಾ ಫೂಲ್ ಹಾಡು, ವ್ಯಕ್ತಿಯ ವಿಕಸನ ಅವನ ಮೂಲ ಮರೆಯದಂತೆ ಪ್ರೇರೇಪಿಸುವ ‘ರೆಹನಾ ತೂ ಹೇ ಜೈಸಾ ತೂ’ ಹಾಗೂ ಸರ್ವಶಕ್ತ ದೇವರನ್ನು ಕುರಿತು ಮಸೀದಿಗಳಲ್ಲಿ ಹಾಡು ಅರ್ಜಿಯಾ ಅಂತೂ ಸೂಪರ್ ಡೂಪರ್ ಹಿಟ್.

ಹಾಡುಗಳಿಗೆ ಸಂಗೀತ ಹೊಸೆವಾಗ ನಿರ್ದೇಶಕ ಓಂ ಪ್ರಕಾಶ್ ಮೆಹ್ರಾ, ಚೆನ್ನೈನ ರೆಹಮಾನ್ ಸ್ಟುಡಿಯೋನಲ್ಲಿಯೇ ಇರುತ್ತಿದ್ದರಂತೆ. ಒಮ್ಮೆ ಅವರ ಸ್ಟುಡಿಯೋನಲ್ಲಿ ಸೋಫಾ ಮೇಲೆ ಮಲಗಿದ್ದಾಗ ನಾಲ್ಕು ಗಂಟೆಗೆ ಬಂದು ಎ.ಆರ್.ರೆಹಮಾನ್, ಮೆಹ್ರಾರನ್ನು ಎಬ್ಬಿಸಿದರಂತೆ. ನಾನು ಮಲಗಿದ್ದಾಗ ಒಂದು ಕನಸು ಬಿತ್ತು, ಆ ಕನಸಿನಲ್ಲಿ ಒಂದು ಟ್ಯೂನ್ ಇತ್ತು ಎಂದರಂತೆ. ಕೂಡಲೇ ಪಿಯಾನೊ ಮುಂದೆ ಕೂತು ಸುಮಾರು ಅರ್ಧ ಗಂಟೆ ಅದೂ ಇದೂ ಟ್ಯೂನ್ ಭಾರಿಸಿ ಈ ಟ್ಯೂನ್​ಗಳ ನಡುವೆ ನಿಮ್ಮ ಹಾಡಿದೆ ಎಂದರಂತೆ. ಅದೇ ನನಗೆ ಕನಸಿಗೆ ಬಂದಿತ್ತು ಎಂದರಂತೆ. ಆ ಬಳಿಕ ಮತ್ತೊಮ್ಮೆ ಬಾರಿಸಿದಾಗ ಅದರಲ್ಲಿನ ಒಂದು ಪೀಸ್ ಅನ್ನು ಪುನಃ ಪುನಃ ಭಾರಿಸಿ ಇದೇ ನೋಡಿ ನನಗೆ ಕನಸಿನಲ್ಲಿ ಬಂದ ಸಂಗೀತ ಎಂದರಂತೆ. ಆ ಸಂಗೀತವೇ ಮುಂದೆ ‘ಅರ್ಜಿಯಾ’ ಹಾಡಾಯಿತು ಕೋಟ್ಯಂತರ ಮನಗಳನ್ನು ಗೆದ್ದಿತು.

ಅದೇ ಸಿನಿಮಾದ ‘ರೆಹನಾ ತೂ ಹೇ ಜೈಸಾ ತೂ’ ಹಾಡು ಸಹ ಭಿನ್ನವಾಗಿ ಕಂಪೋಸ್ ಆಯಿತಂತೆ. ”ನಾನು ಡೆಲ್ಲಿ 6 ಮಾಡುತ್ತಿರುವ ಕಾರಣವನ್ನು ತಿಳಿಸುತ್ತಾ ಹೋದೆ. ನಾವೆಲ್ಲರೂ ಮುಂಚೆ ಹೇಗಿದ್ದೆವು, ಹಳೆ ದೆಹಲಿಯಲ್ಲಿ ಧರ್ಮ ಎಂಬುದು ಒಂದು ವಿಷಯವೇ ಆಗಿರಲಿಲ್ಲ, ಎಲ್ಲರೂ ಸಾಮರಸ್ಯದಿಂದ ಇದ್ದರು ಈಗ ಒಬ್ಬರ ಬಗ್ಗೆ ಒಬ್ಬರಿಗೆ, ಒಬ್ಬರ ಧರ್ಮದ ಬಗ್ಗೆ ಅಸಹಿಷ್ಣುತೆ ಶುರುವಾಗಿದೆ. ದೆಹಲಿಯ ಚಾಂದಿನಿ ಚೌಕ್​ನಲ್ಲಿ ಎಲ್ಲ ಧರ್ಮವೂ ಇದೆ. ಅಲ್ಲಿನ ಮಸೀದಿಯೊಂದರಲ್ಲಿ ನಾನು ಕ್ರಿಕೆಟ್ ಆಡುತ್ತಿದ್ದೆ. ಸಮಾಜ ಏಕೆ ಹೀಗಾಯಿತು? ಇದಕ್ಕೆ ರಾಜಕಾರಣ ಕಾರಣವಾ? ಹೀಗೆ ಮಾತನಾಡುತ್ತಾ ಹೋದೆ. ನನ್ನೆಲ್ಲ ಬೇಸರ, ಆತಂಕವನ್ನು ರೆಹಮಾನ್ ಮುಂದೆ ತೋಡಿಕೊಂಡೆ, ನಾನು ಮಾತನಾಡುತ್ತಿರುವಾಗಲೇ ನನ್ನ ಮಾತುಗಳನ್ನು ಕೇಳಿಸಿಕೊಂಡು, ಅದಕ್ಕೆ ಅವರು ಉತ್ತರಿಸುತ್ತಲೇ ಜೊತೆಗೆ ಕೀ ಬೋರ್ಡ್ ಬಾರಿಸುತ್ತಲೇ ಇದ್ದರು. ಸುಮಾರು ಅರ್ಧ ಗಂಟೆ ಸತತವಾಗಿ ಮಾತನಾಡಿದ ಬಳಿಕ ಇದೋ ನಿಮ್ಮ ಹಾಡು ತಯಾರಾಯಿತು ಎಂದು ಸಂಗೀತ ಕೇಳಿಸಿದರು ಅದು ಅದ್ಭುತವಾಗಿತ್ತು” ಎಂದು ನೆನಪು ಮಾಡಿಕೊಂಡಿದ್ದಾರೆ ಓಂ ಪ್ರಕಾಶ್ ಮೆಹ್ರಾ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ