ತಮಿಳು ಸಿನಿಮಾಕ್ಕೆ ಆಸ್ಕರ್ ವಿಜೇತ ಎಂಎಂ ಕೀರವಾಣಿ ಸಂಗೀತ: ರೆಹಮಾನ್ ಸಂಗೀತ ನೀಡಲಿಲ್ಲವೇಕೆ?
MM Keeravani: ಆರ್ಆರ್ಆರ್ ಸಿನಿಮಾದ ನಾಟು ನಾಟು ಹಾಡಿಗೆ ಆಸ್ಕರ್ ಗೆದ್ದಿರುವ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಹೊಸ ತಮಿಳು ಸಿನಿಮಾ ಒಂದನ್ನು ಒಪ್ಪಿಕೊಂಡಿದ್ದಾರೆ.
ಎಂಎಂ ಕೀರವಾಣಿ (MM Keeravani) ಹೆಸರು ಭಾರತ ಸಿನಿಮಾ ಇತಿಹಾಸದಲ್ಲಿ ಶಾಶ್ವತವಾಗಿ ಸೇರಿ ಹೋಗಿದೆ. ಆರ್ಆರ್ಆರ್ (RRR) ಸಿನಿಮಾಕ್ಕೆ ಕೀರವಾಣಿ ನೀಡಿರುವ ಸಂಗೀತ ವಿಶ್ವದ ಗಮನ ಸೆಳೆದಿದೆ. ಅವರು ಕಂಪೋಸ್ ಮಾಡಿರುವ ನಾಟು-ನಾಟು ಹಾಡಿಗೆ ವಿಶ್ವದ ಎರಡು ಅತ್ಯುನ್ನತ ಪ್ರಶಸ್ತಿಗಳಾದ ಆಸ್ಕರ್ ಹಾಗೂ ಗ್ರ್ಯಾಮಿ ದೊರೆತಿದೆ. ಸಾಕಷ್ಟು ಅವಕಾಶಗಳಿದ್ದರೂ ಆಯ್ದ ಸಿನಿಮಾಗಳನ್ನಷ್ಟೆ ಒಪ್ಪಿಕೊಂಡು ಸಂಗೀತ ನೀಡುತ್ತಾ ಬಂದಿದ್ದಾರೆ ಎಂಎಂ ಕೀರವಾಣಿ. ಇಗ ಆಸ್ಕರ್ ಗೆದ್ದ ಬಳಿಕ ಸಿನಿಮಾ ಆಯ್ಕೆಯಲ್ಲಿ ಇನ್ನಷ್ಟು ಚ್ಯೂಸಿ ಆಗಿರುವ ಕೀರವಾಣಿ, ಇದೀಗ ಹೊಸದೊಂದು ತಮಿಳು (Kollywood) ಸಿನಿಮಾ ಒಪ್ಪಿಕೊಂಡಿದ್ದಾರೆ.
ಆರ್.ಆರ್.ಆರ್ ಚಿತ್ರದ ‘ನಾಟು ನಾಟು’ ಹಾಡಿಗೆ ಆಸ್ಕರ್ ಪ್ರಶಸ್ತಿ ತಮ್ಮದಾಗಿಸಿಕೊಂಡಿರುವ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಮತ್ತೆ ತಮಿಳು ಸಿನಿಮಾ ರಂಗಕ್ಕೆ ಹಾರಿದ್ದಾರೆ. ಈಗಾಗಲೇ ಕೆಲವು ತಮಿಳು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವ ಕೀರವಾಣಿ, ಈಗ ಮತ್ತೆ ಕಾಲಿವುಡ್ನತ್ತ ಪ್ರಯಾಣ ಬೆಳೆಸಿದ್ದಾರೆ. ಈ ಹಿಂದೆ ‘ಜಂಟಲ್ ಮ್ಯಾನ್’, ‘ಕಾದಲ್ ದೇಸಂ’ ಸೇರಿದಂತೆ ಹಲವು ಸೂಪರ್ ಹಿಟ್ ತಮಿಳು ಚಿತ್ರಗಳನ್ನು ನಿರ್ಮಿಸಿರುವ ಕೆ.ಟಿ. ಕುಂಜುಮೋನ್, ಈಗ ಬಹಳ ದಿನಗಳ ನಂತರ ‘ಜಂಟಲ್ ಮ್ಯಾನ್ 2’ ಚಿತ್ರದ ಮೂಲಕ ನಿರ್ಮಾಣಕ್ಕೆ ವಾಪಸ್ಸಾಗಿದ್ದಾರೆ. ಈ ಚಿತ್ರದ ಚಿತ್ರೀಕರಣ ಸದ್ಯದಲ್ಲೇ ಪ್ರಾರಂಭವಾಗಿದ್ದು, ಈ ಚಿತ್ರಕ್ಕೆ ಸಂಗೀತ ಸಂಯೋಜಿಸುವುದಕ್ಕೆ ಕೀರವಾಣಿ ಒಪ್ಪಿದ್ದಾರೆ.
ಎರಡು ತಿಂಗಳ ಹಿಂದೆಯಷ್ಟೇ ಅಮೆರಿಕಾದಲ್ಲಿ ನಡೆದ ಸಮಾರಂಭದಲ್ಲಿ ಕೀರವಾಣಿ ಅವರಿಗೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಅವರು ಅಲ್ಲಿಂದ ಭಾರತಕ್ಕೆ ಬಂದ ಮೇಲೆ, ಅವರನ್ನು ಹೈದರಾಬಾದ್ ನಲ್ಲಿ ಚಿತ್ರದ ನಿರ್ದೇಶಕ ಎ. ಗೋಕುಲ್ ಕೃಷ್ಣ ಭೇಟಿಯಾಗಿದ್ದಾರೆ. ಗೋಕುಲ್ ಹೇಳಿದ ಕಥೆ ಕೇಳಿ ಖುಷಿಯಾದ ಕೀರವಾಣಿ, ತಕ್ಷಣವೇ ಚಿತ್ರಕ್ಕೆ ಸಂಗೀತ ಸಂಯೋಜಿಸುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ತಕ್ಷಣವೇ ನಿರ್ಮಾಪಕ ಕುಂಜುಮೋನ್ ಅವರಿಗೆ ಕರೆ ಮಾಡಿ, ಮುಂದಿನ ತಿಂಗಳಿನಿಂದ ಸಂಗೀತ ಸಂಯೋಜನೆ ಕೆಲಸ ಪ್ರಾರಂಭಿಸುವುದಾಗಿ ಹೇಳಿದ್ದಾರೆ. ಚಿತ್ರವು ಸದ್ಯ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಸದ್ಯದಲ್ಲೇ ಕಲಾವಿದರು ಮತ್ತು ತಂತ್ರಜ್ಞರ ಪಟ್ಟಿ ಹೊರಬೀಳಲಿದೆ.
ಇದನ್ನೂ ಓದಿ:MM Keeravani: ‘ನನಗೆ ಆಸ್ಕರ್ ಸಿಕ್ಕಿದ್ದು ಇದೇ ಮೊದಲೇನಲ್ಲ’: 30 ವರ್ಷದ ಹಿಂದಿನ ವಿಷಯ ತೆರೆದಿಟ್ಟ ಎಂಎಂ ಕೀರವಾಣಿ
1993 ರಲ್ಲಿ ಜಂಟಲ್ಮ್ಯಾನ್ ಸಿನಿಮಾ ಬಿಡುಗಡೆ ಆಗಿತ್ತು. ಸಿನಿಮಾಕ್ಕೆ ಎಆರ್ ರೆಹಮಾನ್ ಸಂಗೀತ ನೀಡಿದ್ದರು. ಆ ಸಿನಿಮಾದ ಹಾಡುಗಳು ಸೂಪರ್ ಡೂಪರ್ ಹಿಟ್ ಆಗಿದ್ದವು. ಆಗ ಜಂಟಲ್ಮ್ಯಾನ್ ಸಿನಿಮಾ ನಿರ್ಮಾಣ ಮಾಡಿದ್ದ ಕುಂಜುಮೋನ್ ಅವರೇ ಈಗ ಜಂಟಲ್ಮ್ಯಾನ್ 2 ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಮೊದಲ ಸಿನಿಮಾಕ್ಕೆ ಸಂಗೀತ ನೀಡಿದ್ದ ಎಆರ್ ರೆಹಮಾನ್ ಅವರನ್ನು ನಿರ್ಮಾಪಕ ಕುಂಜುಮೋನ್ ಏಕೆ ಆಯ್ಕೆ ಮಾಡಿಲ್ಲ ಎಂಬ ಪ್ರಶ್ನೆ ಹಲವರಿಗೆ ಮೂಡಿದೆ.
ಕುಂಜುಮೋನ್ ತಮಿಳಿನ ಜನಪ್ರಿಯ ಸಿನಿಮಾ ನಿರ್ಮಾಪಕರು. 1985 ರಿಂದಲೂ ಸಿನಿಮಾ ನಿರ್ಮಾಣ ಮಾಡುತ್ತಿರುವ ಕುಂಜುಮೋನ್ ಕಾದಲನ್, ಕಾದಲ್ ದೇಸಂ, ಜಂಟಲ್ಮ್ಯಾನ್ ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಆದರೆ 1999 ರ ಬಳಿಕ ಸಿನಿಮಾ ರಂಗದಿಂದ ದೂರ ಉಳಿದಿದ್ದ ಕುಂಜು ಈಗ ಜಂಟಲ್ಮ್ಯಾನ್ 2 ಸಿನಿಮಾದಿಂದ ಮರಳಿ ಬಂದಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ