AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಭಾವನೆ ವಿಚಾರ: ಪವನ್ ಕಲ್ಯಾಣ್ ವಿರುದ್ಧ ಕೋಟಾ ಶ್ರೀನಿವಾಸ್ ರಾವ್ ಟೀಕೆ

Kota Srinivas Rao: ತೆಲುಗು ಚಿತ್ರರಂಗದ ಹಿರಿಯ ನಟ ಕೋಟಾ ಶ್ರೀನಿವಾಸ್ ರಾವ್, ಪರೋಕ್ಷವಾಗಿ ನಟ ಪವನ್ ಕಲ್ಯಾಣ್​ಗೆ ಟಾಂಗ್ ನೀಡಿದ್ದಾರೆ.

ಸಂಭಾವನೆ ವಿಚಾರ: ಪವನ್ ಕಲ್ಯಾಣ್ ವಿರುದ್ಧ ಕೋಟಾ ಶ್ರೀನಿವಾಸ್ ರಾವ್ ಟೀಕೆ
ಕೋಟಾ-ಪವನ್
ಮಂಜುನಾಥ ಸಿ.
|

Updated on: Jun 04, 2023 | 3:42 PM

Share

ತೆಲುಗು ಚಿತ್ರರಂಗದ (Tollywood) ಹಿರಿಯ ನಟ ಕೋಟಾ ಶ್ರೀನಿವಾಸ್ ರಾವ್ (Kota Srinivas Rao) ತಮ್ಮ ನಿರ್ದಾಕ್ಷಿಣ್ಯ, ಕಠಿಣ ಮಾತುಗಳಿಂದ ಇತ್ತೀಚೆಗೆ ಸದ್ದು ಮಾಡುತ್ತಿದ್ದಾರೆ. ಈ ಹಿಂದೆ ತೆಲುಗು ಚಿತ್ರರಂಗದ ಕಲಾವಿದರ ಸಂಘ ಮಾ ಚುನಾವಣೆ ವೇಳೆ ಪ್ರಕಾಶ್ ರೈ ಹಾಗೂ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದ ಚಿರಂಜೀವಿ ವಿರುದ್ಧ ತೀವ್ರ ಟೀಕೆ ಮಾಡಿದ್ದರು. ಇದೀಗ ಕಾರ್ಯಕ್ರಮವೊಂದರಲ್ಲಿ ನಟ ಪವನ್ ಕಲ್ಯಾಣ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಕಲಾವಿದರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ನಟ ಕೋಟಾ ಶ್ರೀನಿವಾಸ್ ರಾವ್, ”ಎನ್​ಟಿಆರ್, ಅಕ್ಕಿನೇನಿ ನಾಗೇಶ್ವರ ರಾವ್, ಕೃಷ್ಣ, ಶೋಬನ್ ಬಾಬು ಅವರುಗಳು ನಟಿಸುತ್ತಿದ್ದ ಕಾಲದಲ್ಲಿ ಯಾವ ನಟರು ಎಷ್ಟು ಸಂಭಾವನೆ ತೆಗೆದುಕೊಳ್ಳುತ್ತಿದ್ದಾರೆ ಎಂಬ ಮಾಹಿತಿಯೇ ಯಾರಿಗೂ ತಿಳಿಯುತ್ತಿರಲಿಲ್ಲ. ಆದರೆ ಈಗ ಮೈಕ್ ಹಿಡಿದುಕೊಂಡು ನಾನು ಇಷ್ಟು ತೆಗೆದುಕೊಳ್ಳುತ್ತೇನೆ, ಗಂಟೆಗೆ ಎರಡು ಕೋಟಿ, ಆರು ಕೋಟಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಇದು ಸರಿಯಲ್ಲ” ಎಂದಿದ್ದಾರೆ ಕೋಟಾ ಶ್ರೀನಿವಾಸ್ ರಾವ್.

ತಮ್ಮ ಪಕ್ಷದ ರಾಜಕೀಯ ಸಭೆಯೊಂದರಲ್ಲಿ ವೀರಾವೇಷದಿಂದ ಮಾತನಾಡಿದ್ದ ನಟ ಪವನ್ ಕಲ್ಯಾಣ್, ತಾವು ಒಂದು ದಿನಕ್ಕೆ ಎರಡು ಕೋಟಿ ಸಂಭಾವನೆ ತೆಗೆದುಕೊಳ್ಳುವುದಾಗಿ ಹೇಳಿದ್ದರು. ಇದೀಗ ಅದೇ ವಿಷಯ ಆಧರಿಸಿ ಕೋಟಾ ಶ್ರೀನಿವಾಸ್ ನಟನನ್ನು ಟೀಕಿಸಿದ್ದಾರೆ.

ಮುಂದುವರೆದು ಮಾತನಾಡಿದ ಕೋಟಾ, ”ಆಗ ಎನ್​ಟಿಆರ್, ಶ್ರೀದೇವಿ ಜೊತೆ ನಟಿಸುತ್ತಿದ್ದಾಗ, ಎನ್​ಟಿಆರ್ ವಯಸ್ಸು ಯಾರಿಗೂ ಗೊತ್ತಿರಲಿಲ್ಲ. ಮುದುಕ ಯುವತಿ ಜೊತೆ ನಟಿಸುತ್ತಿದ್ದಾನೆ ಎಂದು ಯಾರೂ ಹೇಳುತ್ತಿರಲಿಲ್ಲ. ಆದರೆ ಈಗ ಹಾಗಿಲ್ಲ. ನಾನು ಹಾಗೆ ಮಾಡಿದರೆ ನನ್ನನ್ನು ಮುದುಕ ಎಂದು ಬೈಯ್ಯುತ್ತಾರೆ ಎಂದಿದ್ದಾರೆ ಕೋಟಾ ಶ್ರೀನಿವಾಸ ರಾವ್.

ಅದೇ ಭಾಷಣದಲ್ಲಿ ತೆಲುಗು ಸಿನಿಮಾ ಕಲಾವಿದರ ಸಂಘಕ್ಕೆ ಕೆಲವು ಮನವಿಗಳನ್ನು ಕೊಟಾ ಶ್ರೀನಿವಾಸ ರಾವ್ ಮಾಡಿದ್ದು, ”ನೂರಾರು ಕೋಟಿ ವೆಚ್ಚ ಮಾಡಿ ಸಿನಿಮಾ ಮಾಡುವವರನ್ನು ಬಿಟ್ಟುಬಿಡಿ ಅವರು ತೆರಿಗೆ ಕಟ್ಟುತ್ತಾರೆ ಏನೋ ಮಾಡುತ್ತಾರೆ. ಆದರೆ ಐದು ಹತ್ತು ಕೋಟಿ ಹಣ ಹಾಕಿ ಸಿನಿಮಾ ಮಾಡುವವರ ಮೇಲೆ ಗಮನವಿರಲಿ. ಎಲ್ಲ ಕಲಾವಿದರು, ತಂತ್ರಜ್ಞರು ಎರಡು ಹೊತ್ತು ಊಟ ಮಾಡುತ್ತಿದ್ದಾರಾ ನೋಡಿ ಯಾರು ನಿಕೃಷ್ಟ ಸ್ಥಿತಿಯಲ್ಲಿರುತ್ತಾರೊ ಅವರಿಗೆ ಸಹಾಯ ಮಾಡಿ” ಎಂದಿದ್ದಾರೆ.

ಸರ್ಕಾರಕ್ಕೆ ಮಾ ಮೂಲಕ ಪತ್ರ ಬರೆದು, ಎರಡು ತೆಲುಗು ರಾಜ್ಯಗಳಲ್ಲಿ ಎಲ್ಲೇ ಸಿನಿಮಾದ ಚಿತ್ರೀಕರಣ ಮಾಡಿದರೂ ಶುಲ್ಕ ಪಾವತಿಸದಂತೆ ಮಾಫಿ ಮಾಡುವಂತೆ ಮನವಿ ಮಾಡಿ, ಕೇವಲ ತೆಲುಗು ನಟರು, ತೆಲುಗು ತಂತ್ರಜ್ಞರನ್ನು ಮಾತ್ರವೇ ಹಾಕಿಕೊಂಡು ಸಿನಿಮಾ ಮಾಡಿದವರಿಗೆ ತೆರಿಗೆ ವಿನಾಯಿತಿ ನೀಡುವಂತೆ ಮನವಿ ಮಾಡಿ ಎಂದು ಸಹ ಕೋಟಾ ಶ್ರೀನಿವಾಸ್ ರಾವ್ ಮನವಿ ಮಾಡಿದ್ದಾರೆ. ಕೋಟಾ ಶ್ರೀನಿವಾಸ್ ರಾವ್ ತೆಲುಗು ಚಿತ್ರರಂಗದ ಬಹು ಹಿರಿಯ ಪೋಷಕ ನಟರು. ಕನ್ನಡದಲ್ಲಿ ಪುನೀತ್ ರಾಜ್​ಕುಮಾರ್ ನಟನೆಯ ನಮ್ಮ ಬಸವ ಸಿನಿಮಾದಲ್ಲಿಯೂ ಕೋಟಾ ನಟಿಸಿದ್ದಾರೆ. ತಮ್ಮ ಅತ್ಯುತ್ತಮ ನಟನೆಗೆ ಹಲವು ಪ್ರಶಸ್ತಿಗಳನ್ನು ಸಹ ಕೋಟಾ ಗಳಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ