ಮುಸ್ಲಿಂ ಎಂಬ ಕಾರಣಕ್ಕೆ ಹಿಂದಿಯಲ್ಲಿ ನನಗೆ ಆಫರ್​​ಗಳು ಬರುತ್ತಿಲ್ಲ; ಎಆರ್ ರೆಹಮಾನ್

ಆಸ್ಕರ್ ವಿಜೇತ ಎಆರ್ ರೆಹಮಾನ್ ಅವರು ಬಾಲಿವುಡ್‌ನಲ್ಲಿ ಧರ್ಮದ ಕಾರಣಕ್ಕೆ ತಮಗೆ ಆಫರ್‌ಗಳು ಸಿಗುತ್ತಿಲ್ಲ ಎಂದು ನೀಡಿರುವ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ. ಕಳೆದ ಎಂಟು ವರ್ಷಗಳಿಂದ ಹಿಂದಿ ಚಿತ್ರರಂಗದಿಂದ ಅವಕಾಶಗಳು ಬಂದಿಲ್ಲ ಎಂದಿರುವ ರೆಹಮಾನ್, 'ಸೃಜನಾತ್ಮಕವಲ್ಲದ ಜನರು ನಿರ್ಧಾರ ಕೈಗೊಳ್ಳುತ್ತಾರೆ' ಎಂದಿದ್ದಾರೆ. ಅವರ ಈ ಹೇಳಿಕೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅನೇಕರು ಟೀಕಿಸಿದ್ದಾರೆ.

ಮುಸ್ಲಿಂ ಎಂಬ ಕಾರಣಕ್ಕೆ ಹಿಂದಿಯಲ್ಲಿ ನನಗೆ ಆಫರ್​​ಗಳು ಬರುತ್ತಿಲ್ಲ; ಎಆರ್ ರೆಹಮಾನ್
ರೆಹಮಾನ್

Updated on: Jan 17, 2026 | 12:03 PM

ಎಆರ್ ರೆಹಮಾನ್ ಅವರು ಖ್ಯಾತ ಸಂಗೀತ ಸಂಯೋಜಕ. ಅವರು ಆಸ್ಕರ್ ಕೂಡ ಗೆದ್ದಿದ್ದಾರೆ. ಅವರು ಪಡೆದ ಖ್ಯಾತಿ ತುಂಬಾನೇ ದೊಡ್ಡದು. ಈಗ ರೆಹಮಾನ್ ಅವರು ನೀಡಿದ ಹೇಳಿಕೆ ಚರ್ಚೆಗೆ ಕಾರಣ ಆಗಿದೆ. ‘ಹಿಂದಿ ಚಿತ್ರರಂಗದಲ್ಲಿ ಧರ್ಮದ ಕಾರಣಕ್ಕೆ ನನಗೆ ಆಫರ್ ಸಿಗುತ್ತಿಲ್ಲ’ ಎಂಬ ಆರೋಪವನ್ನು ಅವರು ಮಾಡಿದ್ದಾರೆ. ರೆಹಮಾನ್ ಹೇಳಿಕೆಯನ್ನು ಅನೇಕರು ಟೀಕೆ ಮಾಡಿದ್ದಾರೆ. ಅವರ ಹೇಳಿಕೆ ಸರಿ ಅಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ಬಿಬಿಸಿ ಏಷ್ಯನ್ ನೆಟ್ವರ್ಕ್​​ಗೆ ನೀಡಿದ ಸಂದರ್ಶನದಲ್ಲಿ ರೆಹಮಾನ್ ಮಾತನಾಡಿದರು. ‘ಕಳೆದ ಎಂಟು ವರ್ಷಗಳಿಂದ ನನಗೆ ಹಿಂದಿ ಸಿನಿಮಾ ರಂಗದಲ್ಲಿ ಆಫರ್​​ಗಳು ಬಂದಿಲ್ಲ. ಇದಕ್ಕೆ ಕಾರಣ ಏನು ಎಂಬ ವಿಷಯ ಹಿಂದಿನ ಬಾಗಿಲಿನಿಂದ ನನಗೆ ತಿಳಿಯುತ್ತದೆ. ನಾನು ಕೆಲಸ ಹುಡುಕುತ್ತಾ ಇಲ್ಲ. ಕೆಲಸ ನನ್ನ ಬಳಿಗೆ ಬರಬೇಕೆಂದು ನಾನು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.

‘ರಾಜನಿಂದ ಅಥವಾ ಭಿಕ್ಷುಕನಿಂದ ಪಡೆದ ಜ್ಞಾನಕ್ಕೆ ಬೆಲೆ ಕಟ್ಟಲಾಗದು. ಒಳ್ಳೆಯದರಿಂದ ಅಥವಾ ಕೆಟ್ಟದರಿಂದ ಪಡೆದ ಜ್ಞಾನಕ್ಕೆ ಬೆಲೆ ಕಟ್ಟಲಾಗದು ಎಂದು ಪ್ರವಾದಿ ಹೇಳಿದ್ದರು. ನಾವು ಸಣ್ಣತನ ಮತ್ತು ಸ್ವಾರ್ಥವನ್ನು ಮೀರಿ ಹೋಗಬೇಕು’ ಎಂದು ರೆಹಮಾನ್ ಹೇಳಿದ್ದಾರೆ.

ಇದನ್ನೂ ಓದಿ: ನಟನೆ ಆರಂಭಿಸಿದ ಆಸ್ಕರ್ ವಿಜೇತ ಸಂಗೀತ ನಿರ್ದೇಶಕ ಎಆರ್ ರೆಹಮಾನ್

‘ಸೃಜನಶೀಲರಲ್ಲದ ಜನರು ಬಾಲಿವುಡ್​​​ನಲ್ಲಿ ವಿಷಯಗಳನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿದ್ದಾರೆ. ಧರ್ಮದ ವಿಷಯದ ಕಾರಣಕ್ಕೂ ಆಫರ್ ಬರದೆ ಇರಬಹುದು. ಸಿನಿಮಾಗೆ ನಿಮ್ಮನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂಬ ಸುದ್ದಿ ಬರುತ್ತದೆ. ಆದರೆ, ನಂತರ ಮ್ಯೂಸಿಕ್ ಕಂಪನಿ ಅವರದ್ದೇ ಆದ ಐದು ಮ್ಯೂಸಿಕ್ ಕಂಪೋಸರ್​​​​ಗಳನ್ನು ಆಯ್ಕೆ ಮಾಡಿಕೊಂಡಿರುತ್ತದೆ. ಆಗ ನಾನು ಮನೆಯಲ್ಲಿ ಹಾಯಾಗಿ ವಿಶ್ರಾಂತಿ ಪಡೆಯಬಹುದು’ ಎಂದಿದ್ದಾರೆ ಅವರು.

‘ನಾನು ಮುಸ್ಲಿಂ, ನಾನು ಬ್ರಾಹ್ಮಣ ಶಾಲೆಯಲ್ಲಿ ಓದಿದೆ. ಅಲ್ಲಿ ನಾನು ರಾಮಾಯಣ ಹಾಗೂ ಮಹಾಭಾರತ ಕಲಿತೆ’ ಎಂದಿದ್ದಾರೆ ಅವರು. ಈಗ ಹಿಂದಿಯ ‘ರಾಮಾಯಣ’ ಚಿತ್ರಕ್ಕೆ ಅವರದ್ದೇ ಸಂಗೀತ ಸಂಯೋಜನೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:00 pm, Sat, 17 January 26