ಬಾಲಿವುಡ್ನಲ್ಲಿ ನಟ ಅರ್ಜುನ್ ಕಪೂರ್ ಇನ್ನೂ ಬಹುದೊಡ್ಡ ಯಶಸ್ಸಿಗಾಗಿ ಹಂಬಲಿಸುತ್ತಿದ್ದಾರೆ. ಮಾಸ್ ಚಿತ್ರಗಳಿಗಿಂತ ಇತರ ಚಿತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಅವರನ್ನು, ಸ್ಟಾರ್ ಕುಟುಂಬದ ಕುಡಿ ಎಂದು ಜನರು ಕಾಲೆಳೆಯುವುದೂ ಇದೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಅರ್ಜುನ್, ಒಂದರ ಹಿಂದೊಂದು ಚಿತ್ರಗಳನ್ನು ಒಪ್ಪಿಕೊಳ್ಳುತ್ತಾ, ಕೆಲಸ ಮುಂದುವರೆಸುತ್ತಿದ್ದಾರೆ. ಜತೆಗೆ ಗೆಳಗಿ ಮಲೈಕಾ ಅರೋರಾ ಸುತ್ತಾಡುತ್ತಿರುವ ಅರ್ಜುನ್, ಈ ಕಾರಣದಿಂದಲೂ ಸುದ್ದಿಯಾಗುವುದುಂಟು. ಆದರೆ ಅರ್ಜುನ್ ಚಿತ್ರರಂಗಕ್ಕೆ ಬಂದಿದ್ದು ಹೇಗೆ? ಖ್ಯಾತ ನಿರ್ಮಾಪಕರ ಮಗನಾದರೂ ಚಿತ್ರರಂಗದಲ್ಲಿ ಪಳಗಲು ಅವರು ಅನುಸರಿಸಿದ್ದು ಯಾರನ್ನು? ಅವರ ಮೊದಲ ಚಿತ್ರ ಏನಾಯ್ತು? ಈ ವಿಚಾರಗಳ ಕುರಿತು ಹೆಚ್ಚಿನ ಜನರಿಗೆ ತಿಳಿದಿಲ್ಲ. ಅಚ್ಚರಿಯ ವಿಚಾರವೆಂದರೆ ಮೊದಲ ಚಿತ್ರದಲ್ಲಿ ಅರ್ಜುನ್ ನಟಿಸಿದ್ದ ಪಾತ್ರ ತೆರೆಯ ಮೇಲೆ ಬಂದಾಗ ಅದರಲ್ಲಿ ಅರ್ಜುನ್ ಇರಲೇ ಇಲ್ಲ! ನಂತರ ಅರ್ಜುನ್ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದು ಬರೋಬ್ಬರಿ 5 ವರ್ಷಗಳ ನಂತರ.
ಹೌದು. ಅರ್ಜುನ್ ಕಪೂರ್ ಮೊದಲು ಬಣ್ಣ ಹಚ್ಚಿದ್ದು ‘ಸಲಾಮ್ ಎ ಇಷ್ಕ್’ ಚಿತ್ರದಲ್ಲಿ. 2007ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಖ್ಯಾತ ನಟ ಗೋವಿಂದ ಅವರೊಂದಿಗೆ ಅರ್ಜುನ್ ತೆರೆಹಂಚಿಕೊಂಡಿದ್ದರು. ಇದಕ್ಕೆ ಒಂದು ಹಿನ್ನೆಲೆಯೂ ಇದೆ. ಸಣ್ಣ ವಯಸ್ಸಿನಿಂದಲೇ ಅರ್ಜುನ್ ಚಿತ್ರರಂಗದಲ್ಲಿ ತೊಡಗಿಸಿಕೊಂಡಿದ್ದರು. ನಟನಾಗಿ ಅಲ್ಲ, ಸಹಾಯಕ ನಿರ್ದೇಶಕನಾಗಿ. ನಿಖಿಲ್ ಅಡ್ವಾನಿ ಗರಡಿಯಲ್ಲಿ ‘ಕಲ್ ಹೋ ನಾ ಹೋ’ ಚಿತ್ರಕ್ಕೆ ನಿರ್ದೇಶನ ತಂಡದಲ್ಲಿ ಕೆಲಸ ಮಾಡಿದ್ದ ಅರ್ಜುನ್, ನಂತರ ಅವರದೇ ಚಿತ್ರ ‘ಸಲಾಮ್ ಎ ಇಷ್ಕ್’ನಲ್ಲೂ ಕಾರ್ಯ ನಿರ್ವಹಿಸಿದ್ದರು.
‘ಸಲಾಮ್ ಎ ಇಷ್ಕ್’ನಲ್ಲಿ ಕ್ಯಾಮೆರಾ ಎದುರು ಕಾಣಿಸಿಕೊಳ್ಳುವ ಅವಕಾಶ ಅರ್ಜುನ್ಗೆ ಒಲಿಯಿತು. ನಟ ಗೋವಿಂದ ಕಾರ್ ಡ್ರೈವರ್ ಆಗಿದ್ದರೆ, ಅರ್ಜುನ್ ಅವರ ಕಸ್ಟಮರ್ ಆಗಿ ಪುಟ್ಟ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆ ಚಿತ್ರದ ಎಡಿಟಿಂಗ್ ಸಮಯದಲ್ಲಿ ಅರ್ಜುನ್ ಪಾತ್ರದ ಭಾಗವನ್ನು ಕತ್ತರಿಸಲಾಯಿತು. ಅರ್ಥಾತ್ ಖ್ಯಾತ ನಟನೊಂದಿಗೆ ಕಾಣಿಸಿಕೊಂಡರೂ ಚಿತ್ರದ ಫೈನಲ್ ಕಾಪಿಯಲ್ಲಿ ಅರ್ಜುನ್ ಕಾಣಿಸಿಕೊಳ್ಳಲೇ ಇಲ್ಲ. ಈ ಕುರಿತು ಮುಕ್ತವಾಗಿ ಮಾತನಾಡಿದ್ದ ಅರ್ಜುನ್, ‘‘ಎಡಿಟಿಂಗ್ ಕೆಲಸವಾಗುವಾಗ ನಾನೂ ಇದ್ದುದರಿಂದ ನನ್ನ ಪಾತ್ರ ತೆರೆಯ ಮೇಲೆ ಬರುವುದಿಲ್ಲ ಎಂದು ತಿಳಿದಿತ್ತು. ಆದರೆ ಗೋವಿಂದ ಅವರ ಜತೆ ನಟಿಸುತ್ತಾ ನಾನು ಬೆಳ್ಳಿತೆರೆಗೆ ಕಾಲಿಟ್ಟಿದ್ದು ನನ್ನ ಪುಣ್ಯ’’ ಎಂದು ಹೇಳಿಕೊಂಡಿದ್ದರು.
ಅರ್ಜುನ್ ನಂತರ ಅಧಿಕೃತವಾಗಿ ಬೆಳ್ಳಿತೆರೆಗೆ ಕಾಲಿಟ್ಟಿದ್ದು 2012ರಲ್ಲಿ; Ishaqzaade ಚಿತ್ರದ ಮೂಲಕ. ಪ್ರಸ್ತುತ ಹಲವು ಚಿತ್ರಗಳಲ್ಲಿ ಬ್ಯುಸಿಯಿರುವ ಅರ್ಜುನ್ ಕಡೆಯದಾಗಿ ‘ಭೂತ್ ಪೊಲೀಸ್’ನಲ್ಲಿ ಕಾಣಿಸಿಕೊಂಡಿದ್ದರು. ‘ಏಕ್ ವಿಲನ್ ರಿಟರ್ನ್ಸ್’ನಲ್ಲಿ ಅರ್ಜುನ್ ಬಣ್ಣ ಹಚ್ಚುತ್ತಿದ್ದು, ಅದರಲ್ಲಿ ಜಾನ್ ಅಬ್ರಹಾಂ, ದಿಶಾ ಪಟಾನಿ, ತಾರಾ ಸುತಾರಿಯಾ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:
GGVV: ರಾಜ್ ಶೆಟ್ಟಿಗೆ ಶಿವಣ್ಣ ಸರ್ಪ್ರೈಸ್ ಫೋನ್ ಕಾಲ್; ಶಿವ- ಶಿವ ಮಾತುಕತೆಯಲ್ಲಿ ಹೊರಬಿತ್ತು ಸಂತಸದ ವಿಚಾರ!
Radhe Shyam: ಓಟಿಟಿ ರಿಲೀಸ್ ಮಾಡುವಂತೆ ‘ರಾಧೆ ಶ್ಯಾಮ್’ಗೆ ಬರೋಬ್ಬರಿ 350 ಕೋಟಿ ಆಫರ್; ಚಿತ್ರತಂಡದ ಪ್ಲಾನ್ ಏನು?