ಭಾರತದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವಂತೆಯೇ ತೆರೆ ಕಾಣಲು ಸಿದ್ಧವಾಗಿದ್ದ ಬಿಗ್ ಬಜೆಟ್ ಸಿನಿಮಾಗಳು ಬಿಡುಗಡೆಯಿಂದ ಹಿಂದೆ ಸರಿದಿವೆ. ಶಾಹಿದ್ ಕಪೂರ್ ಅಭಿನಯದ ‘ಜೆರ್ಸಿ’ ಹಾಗೂ ರಾಜಮೌಳಿ ನಿರ್ದೇಶನದ ಬಹುನಿರೀಕ್ಷಿತ ‘ಆರ್ಆರ್ಆರ್’ ಈ ಪಟ್ಟಿಯಲ್ಲಿ ಪ್ರಮುಖವಾದವುಗಳು. ಜನವರಿ 14ರಂದು ತೆರೆಕಾಣಲು ನಿರ್ಧರಿಸಿರುವ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಅಭಿನಯದ ಮತ್ತೊಂದು ಬಹುನಿರೀಕ್ಷಿತ ಚಿತ್ರ ‘ರಾಧೆ ಶ್ಯಾಮ್’ ಇನ್ನೂ ಚಿತ್ರದ ಬಿಡುಗಡೆ ಮುಂದೂಡಿಲ್ಲ. ಪ್ಯಾನ್ ಇಂಡಿಯಾ ಚಿತ್ರವಾದ ‘ರಾಧೆ ಶ್ಯಾಮ್’ ಬಿಡುಗಡೆಯಾದರೂ ಕಲೆಕ್ಷನ್ಗೆ ಹೊಡೆತ ಬೀಳುವುದು ಪಕ್ಕಾ ಎನ್ನುತ್ತಿದ್ದಾರೆ ಬಾಕ್ಸಾಫೀಸ್ ಪಂಡಿತರು. ದೆಹಲಿ ಸೇರಿದಂತೆ ಹಲವೆಡೆ ಚಿತ್ರಮಂದಿರಗಳನ್ನು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಬಹುತೇಕ ರಾಜ್ಯಗಳಲ್ಲಿ ಅರ್ಧ ಪ್ರತಿಶತ ಸಾಮರ್ಥ್ಯದೊಂದಿಗೆ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ಒಂದು ವೇಳೆ ಪ್ರಕರಣಗಳು ಏರಿಕೆಯಾದರೆ ಈ ನಿಯಮಗಳು ಬದಲಾಗಿ ಇತರೆಡೆಯೂ ಚಿತ್ರಮಂದಿರಗಳು ಬಂದ್ ಆಗುವ ಸಾಧ್ಯತೆ ಇಲ್ಲದಿಲ್ಲ. ಹೀಗಿರುವಾಗ ‘ರಾಧೇ ಶ್ಯಾಮ್’ ರಿಲೀಸ್ ರಿಸ್ಕ್ ತೆಗೆದುಕೊಳ್ಳುತ್ತದೆಯೇ ಎನ್ನುವುದು ಮಿಲಿಯನ್ ಡಾಲರ್ ಪ್ರಶ್ನೆ. ಇತ್ತೀಚೆಗೆ ಬಂದಿರುವ ಮಾಹಿತಿಗಳ ಪ್ರಕಾರ ‘ರಾಧೆ ಶ್ಯಾಮ್’ಗೆ ಬಹುದೊಡ್ಡ ಮೊತ್ತದ ಓಟಿಟಿ ಆಫರ್ ಸಿಕ್ಕಿದೆಯಂತೆ!
ಹೌದು. ಓಟಿಟಿ ದೈತ್ಯರಾದ ನೆಟ್ಫ್ಲಿಕ್ಸ್ ಹಾಗೂ ಅಮೆಜಾನ್ ಪ್ರೈಮ್ ವಿಡಿಯೋಗಳು ‘ರಾಧೆ ಶ್ಯಾಮ್’ ಹಕ್ಕುಗಳನ್ನು ಪಡೆಯಲು ಬಹುದೊಡ್ಡ ಮೊತ್ತವನ್ನು ಆಫರ್ ಮಾಡಿವೆ. ಚಿತ್ರದ ಬಿಡುಗಡೆ ಅನುಮಾನವಿರುವುದರಿಂದ ನೇರವಾಗಿ ಓಟಿಟಿಯಲ್ಲಿ ತೆರೆಕಾಣಿಸುವ ಒಪ್ಪಂದವನ್ನು ಅವು ಮುಂದಿಟ್ಟಿವೆ. ನೆಟ್ಫ್ಲಿಕ್ಸ್ ಇದಕ್ಕಾಗಿ ಬರೋಬ್ಬರಿ ₹ 300 ಕೋಟಿ ಆಫರ್ ಮಾಡಿತ್ತಂತೆ. ಅಮೆಜಾನ್ ಪ್ರೈಮ್ ವಿಡಿಯೋ ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ₹ 350 ಕೋಟಿ ಆಫರ್ ನೀಡಿದೆಯಂತೆ! ಚಿತ್ರಮಂದಿರದಲ್ಲಿ ನೆಚ್ಚಿನ ನಟನನ್ನು ಕಣ್ತುಂಬಿಕೊಳ್ಳಬೇಕು ಎಂದು ಕಾದ ಅಭಿಮಾನಿಗಳಿಗೆ ಇದು ಶಾಕಿಂಗ್ ಎನ್ನಿಸಿತ್ತು. ಆದರೆ ಇದೀಗ ಅಭಿಮಾನಿಗಳಿಗೆ ಸ್ಪಷ್ಟನೆ ಸಿಕ್ಕಿದ್ದು, ಸಮಾಧಾನಪಟ್ಟುಕೊಂಡಿದ್ದಾರೆ.
ಓಟಿಟಿಯಲ್ಲಿ ಬಿಡುಗಡೆಯಾಗಲಿದೆಯಾ ರಾಧೆ ಶ್ಯಾಮ್? ಚಿತ್ರತಂಡದ ನಡೆಯೇನು? ಕಂಪನಿಗಳು ನೀಡಿದ ನೇರವಾಗಿ ಓಟಿಟಿ ಬಿಡುಗಡೆ ಆಫರ್ಅನ್ನು ನಯವಾಗಿಯೇ ಚಿತ್ರತಂಡ ತಿರಸ್ಕರಿಸಿದೆ. ಇಂತಹ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದರೇ ಚೆನ್ನ. ಆದ್ದರಿಂದ ನೇರವಾಗಿ ಓಟಿಟಿಯಲ್ಲಿ ತೆರೆಕಾಣಿಸುವ ಯಾವುದೇ ಯೋಜನೆಗಳಿಲ್ಲ ಎಂದಿದೆ ಚಿತ್ರತಂಡ. ಇದು ಪ್ರಭಾಸ್ ಅಭಿಮಾನಿಗಳೂ ಸೇರಿ ಚಿತ್ರ ಪ್ರೇಮಿಗಳಿಗೆ ಸಮಾಧಾನ ತಂದಿದೆ. ಆದರೆ ಚಿತ್ರ ಬಿಡುಗಡೆಯ ಕುರಿತು ಅನಿಶ್ಚಿತತೆ ಇದ್ದು, ದಿನಾಂಕ ಮುಂದೂಡುವ ಸಾಧ್ಯತೆ ದಟ್ಟವಾಗಿದೆ.
ಇದನ್ನೂ ಓದಿ:
Puneeth Rajkumar: ದೇಶ- ಭಾಷೆ ಮೀರಿ ಜನರನ್ನು ತಲುಪುತ್ತಿದೆ ‘ರಾಜಕುಮಾರ’; ಚಿತ್ರಕ್ಕೆ ಲಭ್ಯವಾಯ್ತು ವಿಶೇಷ ಗರಿಮೆ
‘ಈಗ’ದ ತಯಾರಿಗೆ ನೊಣಗಳನ್ನು ಫ್ರಿಡ್ಜ್ನಲ್ಲಿಟ್ಟು ಅಧ್ಯಯನ ಮಾಡಿದ್ದ ರಾಜಮೌಳಿ; ಇಲ್ಲಿವೆ ಹಲವು ಅಚ್ಚರಿಯ ವಿಚಾರಗಳು!