Puneeth Rajkumar: ದೇಶ- ಭಾಷೆ ಮೀರಿ ಜನರನ್ನು ತಲುಪುತ್ತಿದೆ ‘ರಾಜಕುಮಾರ’; ಚಿತ್ರಕ್ಕೆ ಲಭ್ಯವಾಯ್ತು ವಿಶೇಷ ಗರಿಮೆ

Puneeth Rajkumar: ದೇಶ- ಭಾಷೆ ಮೀರಿ ಜನರನ್ನು ತಲುಪುತ್ತಿದೆ ‘ರಾಜಕುಮಾರ’; ಚಿತ್ರಕ್ಕೆ ಲಭ್ಯವಾಯ್ತು ವಿಶೇಷ ಗರಿಮೆ
ಪುನೀತ್ ರಾಜ್​ಕುಮಾರ್

Azadi Ka Amrit Mahotsav: ಪುನೀತ್ ರಾಜ್​ಕುಮಾರ್ ನಟನೆಯ ‘ರಾಜಕುಮಾರ’ ಚಿತ್ರ ಈಗಾಗಲೇ ಹಲವು ದಾಖಲೆ ಬರೆದಿದೆ. ಇದೀಗ ಅದಕ್ಕೆ ಮತ್ತೊಂದು ಗರಿಮೆ ಲಭ್ಯವಾಗಿದ್ದು, ದೇಶ- ಭಾಷೆ ಮೀರಿ ಜನರನ್ನು ತಲುಪಿದೆ.

TV9kannada Web Team

| Edited By: shivaprasad.hs

Jan 03, 2022 | 9:21 PM

ಪುನೀತ್ ರಾಜ್​ಕುಮಾರ್ ನಟನೆಯ ‘ರಾಜಕುಮಾರ’ ಚಿತ್ರ ಹಲವು ಕಾರಣಗಳಿಗಾಗಿ ಕನ್ನಡ ಚಿತ್ರರಂಗದ ಒಂದು ಅಪೂರ್ವ ಚಿತ್ರವಾಗಿ ದಾಖಲಾಗಿದೆ. ಈಗ ಚಿತ್ರವನ್ನು ನೋಡಿದರೆ ಪುನೀತ್ ಜೀವನದಂತೆ ಆ ಚಿತ್ರವಿತ್ತೇನೋ ಎಂದು ಅಭಿಮಾನಿಗಳು ಹೇಳುವುದುಂಟು. ಅದೇನೇ ಇದ್ದರೂ ಒಂದು ಚಿತ್ರವಾಗಿ ‘ರಾಜಕುಮಾರ’ದ ಸಾಧನೆ ಅಪೂರ್ವ. 2017ರಲ್ಲಿ ತೆರೆಕಂಡ ಚಿತ್ರ ಬಾಕ್ಸಾಫೀಸ್​ನಲ್ಲೂ ಹಲವು ದಾಖಲೆ ಬರೆದಿತ್ತು. ಸಂತೋಷ್ ಆನಂದ್​ರಾಮ್ ಚಿತ್ರವನ್ನು ನಿರ್ದೇಶಿಸಿದ್ದರೆ, ಹೊಂಬಾಳೆ ಫಿಲ್ಮ್ಸ್ ಚಿತ್ರವನ್ನು ನಿರ್ಮಿಸಿತ್ತು. ಬಿಡುಗಡೆಯಾಗಿ ಸುಮಾರು ಐದು ವರ್ಷ ಸಮೀಪಿಸುತ್ತಾ ಬಂದರೂ, ಚಿತ್ರವು ದೇಶ- ಭಾಷೆ ಮೀರಿ ಜನರನ್ನು ತಲುಪುತ್ತಿದೆ. ಇತ್ತೀಚೆಗೆ ಶ್ರೀಲಂಕಾದ ಸಹಾಯಕ ಭಾರತೀಯ ರಾಯಭಾರ ಕಚೇರಿಯು (High Commission Of India in Kandy, Sri Lanka) ‘ರಾಜಕುಮಾರ’ ಚಿತ್ರವನ್ನು ತನ್ನ ಮಾಲಿಕೆಯಲ್ಲಿ ಪರಿಚಯಿಸಿ, ಗೌರವಿಸಿದೆ.

ಸರ್ಕಾರ ಪ್ರಸ್ತುತ ‘ಆಜಾದಿ ಕಾ ಅಮೃತ ಮಹೋತ್ಸವ’ವನ್ನು ಆಚರಿಸುತ್ತಿದೆ. ಭಾರತಕ್ಕೆ ಸ್ವಾತಂತ್ರ ಲಭಿಸಿ 75 ವರ್ಷಗಳಾದ ಹಿನ್ನೆಲೆಯಲ್ಲಿ ಎಲ್ಲೆಡೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಶ್ರೀಲಂಕಾದಲ್ಲಿರುವ ಭಾರತೀಯ ಕಛೇರಿಯು ಕೂಡ ಈ ನಿಟ್ಟಿನಲ್ಲಿ ತನ್ನ ಕಾರ್ಯ ನಡೆಸುತ್ತಿದೆ. ಅದರಲ್ಲಿ ಒಂದು, ಸಾಮಾಜಿಕ ಜಾಲತಾಣಗಳಲ್ಲಿ ದೇಶದ ವಿವಿಧ ವಿಶೇಷತೆಗಳ ಪರಿಚಯ.

ಈ ಮಾಲಿಕೆಯಲ್ಲಿ ಭಾರತದ ಹಲವು ತಾಣಗಳು, ವಿಶೇಷತೆಗಳು, ವೈಶಿಷ್ಟ್ಯಪೂರ್ಣ ಚಲನಚಿತ್ರಗಳನ್ನು ಭಾರತೀಯ ರಾಯಭಾರ ಕಛೇರಿ ಪರಿಚಯಿಸುತ್ತಿದೆ. ಈ ಬಾರಿ ‘ರಾಜಕುಮಾರ’ ಚಿತ್ರವನ್ನು ಪರಿಚಯಿಸಲಾಗಿದ್ದು, ಚಿತ್ರದ ಕುರಿತು ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ‘‘ಪುನೀತ್ ರಾಜ್​ಕುಮಾರ್ ಹಾಗೂ ಪ್ರಿಯಾ ಆನಂದ್ ರಾಜಕುಮಾರದಲ್ಲಿ ನಟಿಸಿದ್ದಾರೆ. ಫ್ಯಾಮಿಲಿ ಆಕ್ಷನ್ ಚಿತ್ರ ಇದಾಗಿದ್ದು, ವೃದ್ಧಾಶ್ರಮಗಳ ಕುರಿತು ಕತೆ ಕಟ್ಟಿಕೊಡುತ್ತದೆ’’ ಎಂದು ಬರೆಯಲಾಗಿದೆ. ಇದರೊಂದಿಗೆ ತಮಿಳು ಹಾಗೂ ಸಿಂಹಳೀ ಭಾಷೆಯಲ್ಲೂ ಚಿತ್ರದ ಮಾಹಿತಿ ನೀಡಲಾಗಿದೆ.

ಶ್ರೀಲಂಕಾದ ಭಾರತೀಯ ರಾಯಭಾರ ಕಛೇರಿ ಹಂಚಿಕೊಂಡ ಟ್ವೀಟ್ ಇಲ್ಲಿದೆ:

ಹೊಂಬಾಳೆ ಸಂಸ್ಥೆಯು ಇದಕ್ಕೆ ಪ್ರತಿಕ್ರಿಯಿಸಿ ಧನ್ಯವಾದ ತಿಳಿಸಿದೆ. ‘ಕೌಟುಂಬಿಕ ಮೌಲ್ಯ ಸಾರುವ ಚಿತ್ರ ಇದಾಗಿದ್ದು, ‘ಆಜಾದಿ ಕಾ ಅಮೃತ್ ಮಹೋತ್ಸವ’ ವಿಶೇಷ ಮಾಲಿಕೆಯಲ್ಲಿ ಪರಿಚಯಿಸಿದ್ದಕ್ಕೆ ಧನ್ಯವಾದಗಳು’’ ಎಂದು ಹೇಳಿದೆ. ಈ ಮಾಲಿಕೆಯಲ್ಲಿ ಭಾರತೀಯ ರಾಯಭಾರ ಕಛೇರಿಯು ಇದುವರೆಗೆ ಕೆಲವೇ ಕೆಲವು ಚಿತ್ರಗಳನ್ನು ಪರಿಚಯಿಸಿದ್ದು, ಅವುಗಳಲ್ಲಿ ಹೃತಿಕ್ ರೋಷನ್ ಹಾಗೂ ಐಶ್ವರ್ಯಾ ರೈ ನಟನೆಯ ‘ಜೋಧಾ ಅಕ್ಬರ್’ ಕೂಡಾ ಸೇರಿದೆ.

ಹೊಂಬಾಳೆ ಧನ್ಯವಾದ ತಿಳಿಸಿದ ಟ್ವೀಟ್ ಇಲ್ಲಿದೆ:

2017ರಲ್ಲಿ ತೆರೆಕಂಡ ‘ರಾಜಕುಮಾರ’ ಬಹುತಾರಾಗಣದ ಚಿತ್ರ. ಅನಂತ್​ನಾಗ್, ಶರತ್​ಕುಮಾರ್, ಪ್ರಕಾಶ್ ರಾಜ್, ಚಿಕ್ಕಣ್ಣ, ಅಚ್ಯುತ್ ಕುಮಾರ್ ಸೇರಿದಂತೆ ಖ್ಯಾತ ತಾರೆಯರು ಬಣ್ಣಹಚ್ಚಿದ್ದರು. ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದರು. ಚಿತ್ರಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ, ಫಿಲ್ಮ್​ಫೇರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಲಭಿಸಿದ್ದವು. ಇದೀಗ ಚಿತ್ರವು ದೇಶ-ಭಾಷೆಗಳ ಗಡಿ ದಾಟಿ ಜನರಿಗೆ ಪರಿಚಯವಾಗುತ್ತಿರುವುದು ಸಹಜವಾಗಿಯೇ ಕನ್ನಡಿಗರಿಗೆ ಖುಷಿ ತಂದಿದೆ.

ಇದನ್ನೂ ಓದಿ:

‘ಈಗ’ದ ತಯಾರಿಗೆ ನೊಣಗಳನ್ನು ಫ್ರಿಡ್ಜ್​ನಲ್ಲಿಟ್ಟು ಅಧ್ಯಯನ ಮಾಡಿದ್ದ ರಾಜಮೌಳಿ; ಇಲ್ಲಿವೆ ಹಲವು ಅಚ್ಚರಿಯ ವಿಚಾರಗಳು!

‘ನನಗೆ ಶಾಕ್ ಆಗಿ ಅಳಲು ಆರಂಭಿಸಿದೆ’; ಗೆಳೆಯ ಪ್ರಪೋಸ್ ಮಾಡಿದ ಸಂದರ್ಭ ವಿವರಿಸಿದ ಖ್ಯಾತ ನಟಿ

Follow us on

Related Stories

Most Read Stories

Click on your DTH Provider to Add TV9 Kannada