GGVV: ರಾಜ್​ ಶೆಟ್ಟಿಗೆ ಶಿವಣ್ಣ ಸರ್ಪ್ರೈಸ್ ಫೋನ್ ಕಾಲ್; ಶಿವ- ಶಿವ ಮಾತುಕತೆಯಲ್ಲಿ ಹೊರಬಿತ್ತು ಸಂತಸದ ವಿಚಾರ!

GGVV: ರಾಜ್​ ಶೆಟ್ಟಿಗೆ ಶಿವಣ್ಣ ಸರ್ಪ್ರೈಸ್ ಫೋನ್ ಕಾಲ್; ಶಿವ- ಶಿವ ಮಾತುಕತೆಯಲ್ಲಿ ಹೊರಬಿತ್ತು ಸಂತಸದ ವಿಚಾರ!
ರಾಜ್​ ಬಿ ಶೆಟ್ಟಿ, ಶಿವರಾಜ್​ಕುಮಾರ್ (Credits: Zee5Kannada/ Twitter)

Shiva Rajkumar | Raj B Shetty: ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ನಟ ರಾಜ್ ಬಿ ಶೆಟ್ಟಿಗೆ ಕರೆ ಮಾಡಿ ಸರ್ಪ್ರೈಸ್ ನೀಡಿದ್ದಾರೆ. ಈ ವೇಳೆ ಅಭಿಮಾನಿಗಳಿಗೆ ಸಂತಸದ ವಿಚಾರವೊಂದು ಹೊರಬಿದ್ದಿದೆ.

TV9kannada Web Team

| Edited By: shivaprasad.hs

Jan 04, 2022 | 12:11 PM

Garuda Gamana Vrishabha Vahana: ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ನಟ ರಾಜ್ ಬಿ ಶೆಟ್ಟಿಗೆ ಸರ್ಪ್ರೈಸ್ ಕರೆ ಮಾಡಿದ್ದಾರೆ. ತಮ್ಮ ಗುರುತನ್ನು ಹೇಳಿಕೊಳ್ಳದ ಶಿವಣ್ಣ, ಮಾಸ್ ಸ್ಟೈಲ್​ನಲ್ಲೇ ರಾಜ್ ಶೆಟ್ಟಿ ಕಾಲೆಳೆದಿದ್ದಾರೆ. ಮಂಗಳಾದೇವಿ ಗುಂಗಲ್ಲಿರುವ ರಾಜ್ ಕೂಡ ತಮ್ಮನ್ನು ಬಿಟ್ಟುಕೊಡದೇ ಸರಿಯಾಗಿಯೇ ಉತ್ತರ ಕೊಟ್ಟಿದ್ದಾರೆ. ಇಷ್ಟಕ್ಕೂ ಈ ಸಂಭಾಷಣೆ ನಡೆದಿರುವುದು ಎಲ್ಲಿ? ಇದರಲ್ಲಿ ಹೊರಬಿದ್ದಿರೋ ಸಂತಸದ ವಿಚಾರವೇನು ಎಂಬ ಅನುಮಾನ ಕಾಡುತ್ತಿದೆಯೇ? ಇಲ್ಲಿದೆ ಉತ್ತರ. ‘ಗರುಡ ಗಮನ ವೃಷಭ ವಾಹನ’ ಓಟಿಟಿ ಬಿಡುಗಡೆಗೆ ಸಿದ್ಧವಾಗುತ್ತಿದೆ. ಜೀ5ನಲ್ಲಿ ತೆರೆಕಾಣುತ್ತಿರುವ ಈ ಚಿತ್ರದ ಪ್ರಚಾರ ಹಾಗೂ ರಿಲೀಸ್ ದಿನಾಂಕವನ್ನು ವಿಭಿನ್ನವಾಗಿ ವೀಕ್ಷಕರ ಮುಂದಿಡಲಾಗಿದೆ. ಈಗಾಗಲೇ ಜೀ5ಲ್ಲಿ ಬಿಡುಗಡೆಯಾಗಿರುವ ‘ಭಜರಂಗಿ 2’ ದಾಖಲೆಯ ವೀಕ್ಷಣೆಯೊಂದಿಗೆ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಸಂತಸದಲ್ಲಿರುವ ಶಿವಣ್ಣ ರಾಜ್ ಬಿ ಶೆಟ್ಟಿಗೆ ಕರೆ ಮಾಡಿದ್ದಾರೆ.

ಶಿವಣ್ಣ ರಾಜ್ ಶೆಟ್ಟಿ ಕಾಲೆಳೆದಿದ್ದು ಹೇಗೆ? ರಾಜ್ ಶೆಟ್ಟಿಯವರಿಗೆ ಕರೆ ಮಾಡಿದ ಶಿವಣ್ಣ, ‘‘ಮಂಗಳಾದೇವಿಗೆ ನೀನೇನು ದೊಡ್ಡ ಡಾನಾ?’’ ಎಂದು ಕೇಳಿದ್ದಾರೆ. ‘‘ಯಾರು ಯಾರು’’ ಎಂದು ಗೊಂದಲದಲ್ಲಿ ಕೇಳಿರುವ ರಾಜ್ ಶೆಟ್ಟಿಗೆ, ‘‘ಅಲ್ಲೇ ಬರ್ಲಾ? ನಾನೋ ನೀನೋ ನೋಡೇ ಬಿಡೋಣ’’ ಎಂದು ಖಡಕ್ ಆಗಿ ನುಡಿದಿದ್ದಾರೆ ಶಿವಣ್ಣ. ‘‘ಸರಿ ಬನ್ನಿ, ನೋಡೇ ಬಿಡೋಣ’’ ಎಂದು ಪ್ರತ್ಯುತ್ತರ ನೀಡಿದ್ದಾರೆ ರಾಜ್. ಜತೆಗೆ ನೀವ್ಯಾರು ಎಂದು ಪ್ರಶ್ನಿಸಿದ್ದಾರೆ.

ಆಗ ಶಿವಣ್ಣ ‘‘ನಾನು ಭಜರಂಗಿ’’ ಎಂದು ನಕ್ಕಿದ್ದಾರೆ. ಒಂದು ಕ್ಷಣ ಯೋಚಿಸಿದ ರಾಜ್ ಶೆಟ್ಟಿಯವರಿಗೆ ನಂತರ ಅರಿವಾಗಿದೆ. ನಂತರ ಇಬ್ಬರೂ ಮಾತು ಮುಂದುವರೆಸಿದ್ದಾರೆ. ‘‘ನೀವು ಭಜರಂಗಿ ಮಾಡಿದ ನಂತರ ನಮ್ಮ ಗರುಡ ಗಮನ… ಬಂದಿದ್ದು. ಆದ್ದರಿಂದ ನೀವೇ ದೊಡ್ಡ ಡಾನ್’’ ಎಂದು ತಮಾಷೆ ಮಾಡಿದ್ದಾರೆ ರಾಜ್ ಶೆಟ್ಟಿ.

ಈರ್ವರ ಮಜವಾದ ಸಂಭಾಷಣೆ ಇಲ್ಲಿದೆ:

‘ಗರುಡ ಗಮನ..’ವನ್ನು ಹೊಗಳಿದ ಶಿವಣ್ಣ: ಸಂವಾದದಲ್ಲಿ ಶಿವರಾಜ್​ಕುಮಾರ್ ರಾಜ್ ಶೆಟ್ಟಿಯವರ ಚಿತ್ರಗಳನ್ನು ಹಾಗೂ ಅವರ ಅಭಿನಯವನ್ನು ಶ್ಲಾಘಿಸಿದ್ದಾರೆ. ನಿಮ್ಮ ಎರಡೂ ಚಿತ್ರ ನೋಡಿದ್ದೇನೆ. ಬಹಳ ಸಹಜವಾಗಿ ಅಭಿನಯಿಸುತ್ತೀರಿ’’ ಎಂದು ರಾಜ್​ಗೆ ಶಹಬ್ಬಾಸ್​ಗಿರಿ ನೀಡಿದ್ದಾರೆ ಶಿವಣ್ಣ.

‘ಗರುಡ ಗಮನ ವೃಷಭ ವಾಹನ’ ಓಟಿಟಿ ಬಿಡುಗಡೆಗೆ ಕಾಯುತ್ತಿದ್ದವರಿಗೆ ಇಲ್ಲಿದೆ ಸಂತಸದ ವಿಚಾರ: ರಾಜ್ ಹಾಗೂ ಸಂಭಾಷಣೆಯ ಮೂಲಕ ಜೀ5 ‘ಗರುಡ ಗಮನ…’ದ ಬಿಡುಗಡೆ ದಿನಾಂಕ ಘೋಷಿಸಿದೆ. ಈಗಾಗಲೇ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದ ಚಿತ್ರ ಜನವರಿ 13ರಿಂದ ಪ್ರಸಾರವಾಗಲಿದೆ. ಸಂಕ್ರಾಂತಿ ಹಬ್ಬದ ಮುನ್ನಾದಿನವೇ ಚಿತ್ರ ಬಿಡುಗಡೆಯಾಗುತ್ತಿರುವುದು ಸಿನಿಪ್ರೇಮಿಗಳಿಗೆ ಖುಷಿ ತಂದಿದೆ.

‘ಗರುಡ ಗಮನ ವೃಷಭ ವಾಹನ’ ಚಿತ್ರದಲ್ಲಿ ರಾಜ್​ ಬಿ. ಶೆಟ್ಟಿ, ರಿಷಬ್​ ಶೆಟ್ಟಿ ಅವರೊಂದಿಗೆ ಗೋಪಾಲಕೃಷ್ಣ ದೇಶಪಾಂಡೆ ಮೊದಲಾದವರು ಕಾಣಿಸಿಕೊಂಡಿದ್ದಾರೆ. ಕಾಫಿ ಗ್ಯಾಂಗ್​ ಸ್ಡುಡಿಯೋ, ಲೈಟರ್​ ಬುದ್ಧ ಫಿಲ್ಮ್ಸ್​ ಬ್ಯಾನರ್​ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ತಾಂತ್ರಿಕವಾಗಿಯೂ ಗಮನ ಸೆಳೆದ ಈ ಚಿತ್ರಕ್ಕೆ ಪ್ರವೀಣ್​ ಶ್ರಿಯಾನ್ ಛಾಯಾಗ್ರಹಣ, ಮಿಥುನ್​ ಮುಕುಂದನ್​ ಸಂಗೀತ ಹಾಗೂ ಹಿನ್ನೆಲೆ ಸಂಗೀತವಿದೆ.

ಇದನ್ನೂ ಓದಿ:

Shiva Rajkumar: ಜಗಮೆಚ್ಚಿದ ‘ಭಜರಂಗಿ 2’; ಕನ್ನಡ ಚಿತ್ರಗಳ ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಶಿವಣ್ಣ ನಟನೆಯ ಚಿತ್ರ 

Puneeth Rajkumar: ದೇಶ- ಭಾಷೆ ಮೀರಿ ಜನರನ್ನು ತಲುಪುತ್ತಿದೆ ‘ರಾಜಕುಮಾರ’; ಚಿತ್ರಕ್ಕೆ ಲಭ್ಯವಾಯ್ತು ವಿಶೇಷ ಗರಿಮೆ

Follow us on

Related Stories

Most Read Stories

Click on your DTH Provider to Add TV9 Kannada