‘ದೇವದಾಸ್’, ‘ಲಗಾನ್’, ‘ಜೋಧಾ ಅಕ್ಬರ್’, ‘ಸಲಾಂ ಬಾಂಬೆ’, ‘ಮಂಗಲ್ ಪಾಂಡೆ’ ಇನ್ನೂ ಅನೇಕ ಜನಪ್ರಿಯ ಸೂಪರ್ ಹಿಟ್ ಹಿಂದಿ ಸಿನಿಮಾಗಳಿಗೆ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದ ನಿತಿನ್ ಚಂದ್ರಕಾಂತ್ ದೇಸಾಯಿ (Nitin Chandrakanth Desai) ನಿನ್ನೆ (ಆಗಸ್ಟ್ 2) ಮಹಾರಾಷ್ಟ್ರದ ಖರ್ಜತ್ನಲ್ಲಿನ ತಮ್ಮ ಆರ್ಟ್ ಸ್ಟುಡಿಯೋನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಪ್ರಾಥಮಿಕ ತನಿಖೆಯಲ್ಲಿ ನಿತಿನ್ ದೇಸಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದು ಖಾತ್ರಿಯಾಗಿದೆ. ನಿತಿನ್ರ ಫೋನಿನಲ್ಲಿ ಆಡಿಯೋ ಫೈಲ್ ಒಂದು ಪತ್ತೆಯಾಗಿದ್ದು, ಆತ್ಮಹತ್ಯೆಗೆ ಮುನ್ನಾ ನಿತಿನ್ ಅವರು ದಾಖಲಿಸಿರುವ ಸೂಸೈಡ್ ನೋಟ್ ಇದಾಗಿದ್ದು ನಿತಿನ್ ತಮ್ಮ ಸಾವಿಗೆ ಕಾರಣರಾದ ನಾಲ್ವರ ಹೆಸರನ್ನು ಆಡಿಯೋ ಫೈಲ್ನಲ್ಲಿ ಹೇಳಿದ್ದಾರೆ ಎನ್ನಲಾಗುತ್ತಿದೆ.
ನಿತಿನ್ ದೇಸಾಯಿ ಅವರು ತಮ್ಮ ಆರ್ಟ್ ಸ್ಟುಡಿಯೋಗಾಗಿ 250 ಕೋಟಿ ರೂಪಾಯಿ ಸಾಲ ಮಾಡಿದ್ದರು. ಆರಂಭದಲ್ಲಿ ಆರ್ಟ್ ಸ್ಟುಡಿಯೋ ಚೆನ್ನಾಗಿ ನಡೆಯುತ್ತಿದ್ದಾದರೂ ಕೋವಿಡ್ ಸಮಯದಲ್ಲಿ ಕೆಲಸವೇ ಇಲ್ಲದಾಯಿತು. ಇದರಿಂದಾಗಿ ನಿತಿನ್ ದೇಸಾಯಿಗೆ ಸಾಲ ಮರುಪಾವತಿ ಕಷ್ಟವಾಗಿತ್ತು, ಸಾಲ ಕೊಟ್ಟವರು ಇತ್ತೀಚೆಗೆ ಕಿರುಕುಳ ಆರಂಭಿಸಿದ್ದ ಕಾರಣ ನಿತಿನ್ ದೇಸಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ನಿತಿನ್ರ ಮೊಬೈಲ್ನಲ್ಲಿ ದೊರಕಿರುವ ಆಡಿಯೋ ಫೈಲ್ ಆಧರಿಸಿ ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದು, ನಿತಿನ್ ಹೆಸರಿಸಿರುವ ನಾಲ್ವರನ್ನು ವಿಚಾರಣೆಗೆ ಒಳಪಡಿಸಲಿದ್ದಾರೆ. ನಿತಿನ್ರನ್ನು ಆತ್ಮಹತ್ಯೆಯಂಥಹಾ ಕಠಿಣ ನಿರ್ಧಾರಕ್ಕೆ ದೂಡಿದ ಅಂಶಗಳ ಬಗ್ಗೆ ಆತ್ಮಹತ್ಯೆಗೆ ಪ್ರೇರೇಪಣೆ ನೀಡಿದ ವಿಚಾರಗಳು, ವ್ಯಕ್ತಿಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:‘ಬಿಗ್ ಬಾಸ್’ ಸ್ಟುಡಿಯೋದಲ್ಲಿ ಆತ್ಮಹತ್ಯೆ ಮಾಡಿಕೊಂಡ ಖ್ಯಾತ ಕಲಾ ನಿರ್ದೇಶಕ ನಿತಿನ್ ದೇಸಾಯಿ
ವರದಿಗಳ ಪ್ರಕಾರ, ದೇಸಾಯಿ ಹಾಗೂ ಅವರ ಪತ್ನಿಯ ಹೆಸರಲ್ಲಿ ಒಟ್ಟು 252 ಕೋಟಿ ಸಾಲ ಇತ್ತು. 2016 ರಲ್ಲಿ ಸ್ಟುಡಿಯೋ ನಿರ್ಮಾಣಕ್ಕಾಗಿ ದೇಸಾಯಿ ಅವರ ಪತ್ನಿ ನೈನಾ ದೇಸಾಯಿ ಹೆಸರಲ್ಲಿ 150 ಕೋಟಿ ಸಾಲ ಪಡೆದಿದ್ದರು. ಅದಾದ ಬಳಿಕ 2018 ರಲ್ಲಿ 31 ಕೋಟಿ ಸಾಲ ಪಡೆದಿದ್ದರು. 2019 ರ ಬಳಿಕ ಸಾಲ ಮರುಪಾವತಿ ಕಷ್ಟವಾಗಿತ್ತು, ಅಲ್ಲದೆ ಅವರಿಗೆ ಹಣ ಕೊಡಬೇಕಾದವರು ಹಣ ಕೊಡದೆ ಸತಾಯಿಸಿದ್ದರು ಎಂದೂ ಸಹ ಹೇಳಲಾಗಿದೆ. 2023ರ ವೇಳೆಗೆ ಅವರ ಒಟ್ಟು ನಿವ್ವಳ ಸಾಲ 252 ಕೋಟಿ ಆಗಿತ್ತು. ಬ್ಯಾಂಕ್ ಮಾತ್ರವೇ ಅಲ್ಲದೆ ಖಾಸಗಿ ಫೈನ್ಯಾನ್ಶಿಯರ್ಗಳಿಂದಲೂ ನಿತಿನ್ ದೇಸಾಯಿ ಸಾಲ ಪಡೆದಿದ್ದರು ಎನ್ನಲಾಗುತ್ತಿದ್ದು, ಖಾಸಗಿ ಫೈನ್ಯಾನ್ಶಿಯರ್ಗಳು ಸಾಲ ಮರುಪಾವತಿಸುವಂತೆ ದುಂಬಾಲು ಬಿದ್ದಿದ್ದರಿಂದಲೇ ನಿತಿನ್ ದೇಸಾಯಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ