ಜಾಕ್ವೆಲಿನ್ ಫರ್ನಾಂಡೀಸ್ ವಿರುದ್ಧ ನೋರಾ ಫತೇಹಿ ಮೊಕದ್ದಮೆ, ಹೇಳಿಕೆ ಬಿಡುಗಡೆ ಮಾಡಿದ ಜಾಕ್ವೆಲಿನ್
Jacqueline Fernandez-Nora Fatehi: ಜಾಕ್ವೆಲಿನ್ ಫರ್ನಾಂಡೀಸ್ ವಿರುದ್ಧ ನಟಿ ನೋರಾ ಫತೇಹಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಆ ಕುರಿತು ಜಾಕ್ವೆಲಿನ್ರ ವಕೀಲರು ಪ್ರತಿಕ್ರಿಯೆ ನೀಡಿದ್ದಾರೆ.
200 ಕೋಟಿ ಸುಲಿಗೆ ಸೇರಿದಂತೆ ಇನ್ನೂ ಹಲವು ವಂಚನೆ, ಸುಲಿಗೆ ಪ್ರಕರಣಗಳ ಆರೋಪಿ ಸುಖೇಶ್ ಚಂದ್ರಶೇಖರ್ (Sukhesh Chandrashekhar) ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದು ವಿಚಾರಣೆ ಎದುರಿಸುತ್ತಿದ್ದಾರೆ. ಇದೇ ಪ್ರಕರಣದಲ್ಲಿ ಕೆಲವು ಬಾಲಿವುಡ್ (Bollywood) ನಟಿಯರ ಹೆಸರೂ ಸಹ ಕೇಳಿ ಬಂದಿದೆ. ಅದರಲ್ಲಿ ಪ್ರಮುಖವಾಗಿ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಅವರ ಹೆಸರಿದೆ. ಜಾಕ್ವೆಲಿನ್ ಫರ್ನಾಂಡೀಸ್ ಅನ್ನು ಸಹ ಪ್ರಕರಣದಲ್ಲಿ ಆರೋಪಿಯನ್ನಾಗಿಸಲಾಗಿದೆ. ಇನ್ನು ನಟಿ ನೋರಾ ಫತೇಹಿ ಹೆಸರು ಸಹ ಪ್ರಕರಣದಲ್ಲಿದ್ದು, ಸದ್ಯಕ್ಕೆ ಅವರು ಸಾಕ್ಷಿಯಷ್ಟೆ ಆಗಿದ್ದಾರೆ. ಆದರೆ ನಟಿ ಜಾಕ್ವೆಲಿನ್, ನೋರಾ ಫತೇಹಿ (Nora Fatehi) ವಿರುದ್ಧವೂ ನ್ಯಾಯಾಲಯದಲ್ಲಿ ಹೇಳಿಕೆಗಳನ್ನು ನೀಡಿ, ನೋರಾ ಅನ್ನು ಈ ಪ್ರಕರಣದಲ್ಲಿ ಸಾಕ್ಷಿಯನ್ನಾಗಿ ಪರಿಗಣಿಸಿರುವ ಬಗ್ಗೆ ಆಕ್ಷೇಪ ಎತ್ತಿದ್ದರು.
ಇತ್ತೀಚೆಗಷ್ಟೆ ನಟಿ ನೋರಾ ಫತೇಹಿ, ತಮ್ಮ ವಿರುದ್ಧ ಹೇಳಿಕೆ ದಾಖಲಿಸಿದ್ದ ಜಾಕ್ವೆಲಿನ್ ಫರ್ನಾಂಡೀಸ್ ಹಾಗೂ ಕೆಲವು ಮಾಧ್ಯಮಗಳು, ಪಬ್ಲಿಕೇಷನ್ಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿಯ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿದ್ದ ನೋರಾ ಫತೇಹಿ, ”ನನ್ನನ್ನು ಗೋಲ್ಡ್ ಡಿಗ್ಗರ್ (ಹಣಕ್ಕಾಗಿ ಸಂಬಂಧ ಬೆಳೆಸುವಾಕೆ) ಎಂದು ಜರಿಯಲಾಗಿದೆ. ವಂಚಕ ಸುಖೇಶ್ ಜೊತೆ ಸಂಬಂಧ ಹೊಂದಿದೆ ಎಂದು ಸುಳ್ಳು ಆರೋಪ ಹೊರಿಸಲಾಗಿದೆ. ಸಾರ್ವಜನಿಕರ ದೃಷ್ಟಿಯಲ್ಲಿ ನನ್ನನ್ನು ಕೆಟ್ಟ ರೀತಿಯಾಗಿ ಬಿಂಬಿಸುವ ಪ್ರಯತ್ನ ಮಾಡಲಾಗಿದೆ” ಎಂದಿದ್ದಾರೆ.
”ನಾನು ಈ ಪ್ರಕರಣದಲ್ಲಿ ಹರಕೆಯ ಕುರಿ ಆಗಿದ್ದೇನೆ. ಇಲ್ಲಿ ನನ್ನ ಬೆಂಬಲಕ್ಕೆ ಯಾರೂ ಇಲ್ಲ, ನಾನು ಸ್ಥಳೀಯಳಲ್ಲ, ಹೊರಗಿನವಳು ಎಂಬ ಕಾರಣಕ್ಕೆ ನನ್ನನ್ನು ಗುರಿ ಮಾಡಿ ಮಾನಹಾನಿ ಮಾಡಲಾಗುತ್ತಿದೆ. ಜಾಕ್ವೆಲಿನ್ ಸಹ ವಿನಾಕಾರಣ ನನ್ನನ್ನು ಈ ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲು ಯತ್ನಿಸುತ್ತಿದ್ದಾರೆ. ಸುಖೇಶ್ನ 200 ಕೋಟಿ ಸುಲಿಗೆ ಪ್ರಕರಣಕ್ಕೂ ನನಗೂ ದೂರ-ದೂರಕ್ಕೂ ಸಂಬಂಧವಿಲ್ಲ” ಎಂದಿದ್ದಾರೆ.
ಇದನ್ನೂ ಓದಿ:Nora Fatehi: ಹಾಟ್ ಲುಕ್ನಲ್ಲಿ ಗಮನ ಸೆಳೆದ ನೋರಾ ಫತೇಹಿ
ನೋರಾ ಫತೇಹಿ ದಾಖಲಿಸಿರುವ ಮಾನನಷ್ಟ ಮೊಕದ್ದಮೆಗೆ ವಕೀಲರ ಮೂಲಕ ಹೇಳಿಕೆ ಬಿಡುಗಡೆ ಮಾಡಿರುವ ಜಾಕ್ವೆಲಿನ್ ಫರ್ನಾಂಡೀಸ್, ”ನಟಿ ಜಾಕ್ವೆಲಿನ್ ಫರ್ನಾಂಡೀಸ್, ಈ ಪ್ರಕರಣ ಕುರಿತಾಗಿ ಯಾವುದೇ ಟಿವಿ ಮಾಧ್ಯಮ, ಸಾಮಾಜಿಕ ಜಾಲತಾಣ ಅಥವಾ ಇನ್ಯಾವುದೇ ಮಾಧ್ಯಮಗಳಲ್ಲಿ ಮಾತನಾಡಿಲ್ಲ, ಯಾರ ಮೇಲೂ ವೈಯಕ್ತಿಕ ಆರೋಪಗಳನ್ನು ಮಾಡಿಲ್ಲ. ಪ್ರಕರಣದ ಬಗ್ಗೆ ಗಂಭೀರ ಮೌನವನ್ನು ಅವರು ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ” ಎಂದಿದ್ದಾರೆ.
‘ನನ್ನ ಕಕ್ಷಿದಾರರು ಮೌನವಾಗಿದ್ದಾರೆ ಎಂದ ಮಾತ್ರಕ್ಕೆ ಅವರ ಹೆಸರನ್ನು ಎಳೆಯಬಹುದು ಎಂದಲ್ಲ. ಒಂದೊಮ್ಮೆ ಯಾರೇ ಆದರು ವಾಕ್ ಸ್ವಾತಂತ್ರ್ಯವನ್ನು ದುರುಪಯೋಗ ಪಡಿಸಿಕೊಂಡು ಸುಳ್ಳು ಅಥವಾ ಅನವಶ್ಯಕ ಆರೋಪಗಳನ್ನು ಕಕ್ಷಿಧಾರ (ಜಾಕ್ವೆಲಿನ್) ವಿರುದ್ಧ ಮಾಡಿದ್ದಾದಲ್ಲಿ, ಅದಕ್ಕೆ ನ್ಯಾಯಾಲಯದ ಮೂಲಕ ಯಾವ ರೀತಿಯ ರಕ್ಷಣೆ ಪಡೆಯಬೇಕೋ ಪಡೆಯಲಾಗುತ್ತದೆ ಮಾತ್ರವಲ್ಲದೆ ಆರೋಪಗಳನ್ನು ಮಾಡಿದವರ ವಿರುದ್ಧ ಪ್ರತ್ಯೇಕ ಕಾನೂನು ಸಮರವನ್ನು ಸಾರಲಾಗುತ್ತದೆ. ಜಾಕ್ವೆಲಿನ್ ಸಹ ಮಾನನಷ್ಟ ಮೊಕದ್ದಮೆ ಹೂಡಲು ಅರ್ಹರಾಗಿದ್ದಾರೆ. ಅವರ ಹಕ್ಕನ್ನು ಅವರು ಕಾಯ್ದಿರಿಸಿಕೊಂಡಿದ್ದಾರೆ” ಎಂದಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ