ಆರ್ಯನ್ ಏನು ಬೇಕಾದರೂ ಮಾಡಬಹುದು ಎಂದಿದ್ದ ಶಾರುಖ್ ಖಾನ್; ವಿಚಾರಣೆಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗ
Aryan Khan: ತಮ್ಮ ಮಗ ಏನು ಬೇಕಾದರೂ ಮಾಡಬಹುದು. ಡ್ರಗ್ಸ್ ಸೇವಿಸಬಹುದು. ಮದ್ಯ ಸೇವಿಸಬಹುದು. ಹುಡುಗಿಯರ ಜೊತೆ ಇರಬಹುದು. ಆತನಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಶಾರೂಖ್ ಖಾನ್ ಹೇಳಿದ್ದರು.
ದೆಹಲಿ: ಹಡಗಿನಲ್ಲಿ ನಡೆದ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಸಿಕ್ಕಿ ಬಿದ್ದಿರುವ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಎನ್‌ಸಿಬಿ ಅಧಿಕಾರಿಗಳ ಮುಂದೆ ಕೆಲ ಸ್ಪೋಟಕ ಮಾಹಿತಿಯನ್ನ ಬಾಯಿಬಿಟ್ಟಿದ್ದಾನೆ. ಈ ಮಧ್ಯೆ, ಎನ್‌ಸಿಬಿ ವಶದಲ್ಲಿದ್ದಾಗಲೇ, ಪುತ್ರ ಆರ್ಯನ್ ಖಾನ್ ಜೊತೆ ಪೋನ್ ನಲ್ಲಿ ಮಾತನಾಡಲು ಶಾರೂಖ್ ಖಾನ್ಗೆ ಅವಕಾಶ ಕೊಡಲಾಗಿತ್ತು. ಆರ್ಯನ್ ತಾಯಿ ಗೌರಿ ಖಾನ್ ಎನ್‌ಸಿಬಿ ಕಚೇರಿಗೆ ಭೇಟಿ ಕೊಟ್ಟು ಮಗನ ಜೊತೆ ಮಾತನಾಡಿದ್ದರು. ಈ ಹಿಂದೆ ಶಾರುಖ್ ಖಾನ್, ಮಗ ಏನು ಬೇಕಾದರೂ ಮಾಡಬಹುದು, ಡ್ರಗ್ಸ್ ಬೇಕಾದ್ರೂ ಸೇವಿಸಬಹುದು ಎಂದು ನೀಡಿದ್ದ ಹೇಳಿಕೆಯು ವೈರಲ್ ಆಗುತ್ತಿದೆ.
ಮಗ ಆರ್ಯನ್ ಬೆಂಬಲಕ್ಕೆ ನಿಂತ ತಂದೆ-ತಾಯಿ, ಕೆಲ ಬಾಲಿವುಡ್ ನಟರಿಂದ ಧೈರ್ಯ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಈಗಾಗಲೇ ಡ್ರಗ್ಸ್ ಕೇಸ್ನಲ್ಲಿ ಸಿಕ್ಕಿಹಾಕಿಕೊಂಡಿದ್ದು ಸಂಕಷ್ಟಕ್ಕೀಡಾಗಿದ್ದಾನೆ. ಎನ್‌ಸಿಬಿ ಅಧಿಕಾರಿಗಳು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ನನ್ನು ತೀವ್ರವಾಗಿ ನಿನ್ನೆಯಿಂದ ವಿಚಾರಣೆ ನಡೆಸಿದ್ದಾರೆ. ಆತನ ಪೋನ್ ವಶಪಡಿಸಿಕೊಂಡು ವಾಟ್ಸಾಫ್ ಚಾಟಿಂಗ್ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಾಕಷ್ಟು ಸ್ಪೋಟಕ ಮಾಹಿತಿಗಳು ಎನ್‌ಸಿಬಿ ಅಧಿಕಾರಿಗಳಿಗೆ ಸಿಕ್ಕಿವೆ. ವಿದೇಶಕ್ಕೆ ಹೋದಾಗ, ಆರ್ಯನ್ ಖಾನ್ ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಖರೀದಿ ಮಾಡಬೇಕೆಂದು ಚಾಟಿಂಗ್ ನಡೆಸಿರುವುದು ಪತ್ತೆಯಾಗಿದೆ. ಜೊತೆಗೆ ಕಳೆದ ನಾಲ್ಕು ವರ್ಷಗಳಿಂದ ಆರ್ಯನ್ ಖಾನ್ ಡ್ರಗ್ಸ್ ಸೇವಿಸುತ್ತಿದ್ದೆ ಎಂದು ಎನ್‌ಸಿಬಿ ಅಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾನೆ. ತಾನು ಡ್ರಗ್ಸ್ ಸೇವಿಸುವ ವಿಷಯ ತನ್ನ ತಂದೆ ಶಾರುಖ್ ಖಾನ್, ತಾಯಿ ಗೌರಿ ಖಾನ್ಗೂ ಗೊತ್ತಿತ್ತು ಎಂದು ಆರ್ಯನ್ ಎನ್‌ಸಿಬಿ ಅಧಿಕಾರಿಗಳ ಮುಂದೆ ಹೇಳಿದ್ದಾನೆ. ಎನ್‌ಸಿಬಿ ಅಧಿಕಾರಿಗಳ ಮುಂದೆ ಆರ್ಯನ್ ಖಾನ್ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.
ಆರ್ಯನ್ ಎನ್‌ಸಿಬಿ ವಶಕ್ಕೆ ಹೋಗುತ್ತಿದ್ದಂತೆ, ಆತನನ್ನು ಭೇಟಿಯಾಗಲು ಆತನ ಪರ ವಕೀಲರು ಯತ್ನಿಸಿದ್ದರು. ಆದರೆ, ಇದಕ್ಕೆ ಇಂದು ಅವಕಾಶ ಕೊಡಲಾಗಿತ್ತು. ಜೊತೆಗೆ ಆರ್ಯನ್ ತಾಯಿ ಗೌರಿ ಖಾನ್ ಎನ್‌ಸಿಬಿ ಕಚೇರಿಗೆ ಬಂದು ಪುತ್ರ ಆರ್ಯನ್ನನ್ನು ಭೇಟಿಯಾಗಿದ್ದಾರೆ. ಶಾರುಖ್ ಖಾನ್ ಲ್ಯಾಂಡ್ ಲೈನ್ ಪೋನ್ನಲ್ಲಿ ಮಗ ಆರ್ಯನ್ ಜೊತೆಗೆ 2 ನಿಮಿಷ ಮಾತನಾಡಿದ್ದಾರೆ. ಈ ವೇಳೆ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಮಗನನ್ನು ತಂದೆ ಶಾರುಖ್ ಖಾನ್ ಸಮಾಧಾನಪಡಿಸಿದ್ದಾರೆ.
ಪುತ್ರ ಆರ್ಯನ್ ಖಾನ್ ಪರ ಕೋರ್ಟ್ನಲ್ಲಿ ವಾದ ಮಂಡಿಸಲು ಖ್ಯಾತ ವಕೀಲ ಸತೀಶ್ ಮಾನಶಿಂಧೆಯನ್ನು ಶಾರುಖ್ ಖಾನ್ ನೇಮಿಸಿಕೊಂಡಿದ್ದಾರೆ. ಸತೀಶ್ ಮಾನಶಿಂಧೆ ಈ ಹಿಂದೆ ಡ್ರಗ್ಸ್ ಕೇಸ್ನಲ್ಲಿ ಜೈಲು ಪಾಲಾಗಿದ್ದ ನಟಿ ರಿಯಾ ಚಕ್ರವರ್ತಿ ಪರ ವಾದಿಸಿದ್ದ ಅನುಭವ ಹೊಂದಿರುವ ವಕೀಲರು. ಮುಂಬೈನ ಹೈಪ್ರೊಫೈಲ್ ಕೇಸ್ಗಳಲ್ಲಿ ವಾದಿಸಿದ ಅನುಭವ ಹಾಗೂ ಡ್ರಗ್ಸ್ ಕೇಸ್ನಲ್ಲಿ ಆರೋಪಿಯಾಗಿದ್ದ ರಿಯಾ ಚಕ್ರವರ್ತಿಗೆ ಜಾಮೀನು ಸಿಗುವಂತೆ ಸತೀಶ್ ಮಾನಶಿಂಧೆ ಪ್ರಬಲ ವಾದ ಮಂಡಿಸಿದ್ದರು. ಅಂಥ ವಕೀಲರನ್ನೇ ಈಗ ತಮ್ಮ ಮಗನನ್ನು ಕಾನೂನು ಸಂಕಷ್ಟದಿಂದ ಪಾರು ಮಾಡಲು ಶಾರುಖ್ ಖಾನ್ ನೇಮಿಸಿಕೊಂಡಿದ್ದಾರೆ.
ಮಗ ಆರ್ಯನ್ ಏನು ಬೇಕಾದರೂ ಮಾಡಬಹುದು ಎಂದಿದ್ದ ಶಾರುಖ್ ತಮ್ಮ ಪುತ್ರನ ಬಗ್ಗೆ ಕೆಲ ವರ್ಷಗಳ ಹಿಂದೆ ಟಿವಿ ಚಾನಲ್ ಒಂದರ ಕಾರ್ಯಕ್ರಮದಲ್ಲಿ ಶಾರುಖ್ ಖಾನ್ ಮಾತನಾಡಿದ್ದರು. ಆಗ ತಮ್ಮ ಮಗ ಏನು ಬೇಕಾದರೂ ಮಾಡಬಹುದು. ಡ್ರಗ್ಸ್ ಸೇವಿಸಬಹುದು. ಮದ್ಯ ಸೇವಿಸಬಹುದು. ಹುಡುಗಿಯರ ಜೊತೆ ಇರಬಹುದು. ಆತನಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಶಾರೂಖ್ ಖಾನ್ ಹೇಳಿದ್ದರು.
ಆ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದ್ದೆ. ಮಗನಿಗೆ ಈ ರೀತಿ ಡ್ರಗ್ಸ್ ಸೇವಿಸಲು ಕೂಡ ಸ್ವಾತಂತ್ರ್ಯ ನೀಡಿರುವುದಾಗಿ ಶಾರೂಖ್ ಖಾನ್ ಹೇಳಿದ್ದಾರೆ. ಇದು ಜನರ ಟೀಕೆಗೆ ಕಾರಣವಾಗಿದೆ. ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಬೇಕಾದ ಜವಾಬ್ದಾರಿ ತಂದೆಯಾಗಿ ಶಾರೂಖ್ ಖಾನ್ ಮೇಲಿತ್ತು. ಆದರೆ, ತಂದೆಯೇ ಮಗ ಆರ್ಯನ್ ಏನು ಬೇಕಾದರೂ ಮಾಡಲಿ ಎಂದು ಸ್ವೇಚ್ಛಾಚಾರದ ಸ್ವಾತಂತ್ರ್ಯ ನೀಡಿದ್ದು ಈ ಎಲ್ಲ ಅನಾಹುತಗಳಿಗೆ ಕಾರಣ ಎಂದು ಟೀಕೆ ವ್ಯಕ್ತವಾಗಿದೆ. ಆದರೆ, ಮುಂಬೈನ ಹೈ ಪ್ರೊಫೈಲ್ ಕುಟುಂಬಗಳಲ್ಲಿ ಇವೆಲ್ಲವೂ ಸಾಮಾನ್ಯ. ಹಣ ಮದದಲ್ಲಿ ಏನು ಬೇಕಾದರೂ ಮಾಡಬಹುದು. ಏನು ಮಾಡಿದರೂ ನಡೆಯುತ್ತೆ ಎನ್ನುವ ದಾಷ್ಟ್ಯವೇ ಶಾರುಖ್ ಖಾನ್ರಂಥ ಶ್ರೀಮಂತರಲ್ಲಿದೆ. ಆದರೆ, ಮಕ್ಕಳು ಅಡ್ಡದಾರಿ ಹಿಡಿದರೂ, ಅವರನ್ನು ಸರಿ ದಾರಿಗೆ ತರುವ ಪ್ರಯತ್ನವನ್ನೇ ನಡೆಸಲ್ಲ. ಸೆಲಿಬ್ರಿಟಿಗಳು ಹಾಗೂ ಅವರ ಮಕ್ಕಳು ಅಡ್ಡದಾರಿ ಹಿಡಿದಾಗ, ಅವರನ್ನೇ ರೋಲ್ ಮಾಡೆಲ್ಗಳಾಗಿ ಸ್ವೀಕರಿಸುವ ಯುವಜನತೆ ಕೂಡ ಅಡ್ಡದಾರಿ ಹಿಡಿಯುವ ಅಪಾಯ ಇದೆ.
ವರದಿ: ಎಸ್ ಚಂದ್ರಮೋಹನ್, ನ್ಯಾಷನಲ್ ಬ್ಯೂರೋ ಮುಖ್ಯಸ್ಥರು, ಟಿವಿ9 ಕನ್ನಡ
ಇದನ್ನೂ ಓದಿ: ಆರ್ಯನ್ಗೆ ಮುಳುವಾಯ್ತು ಮೊಬೈಲ್ನಲ್ಲಿದ್ದ ಆ ಮಾಹಿತಿ; ಎನ್‌ಸಿಬಿ ಕಸ್ಟಡಿ ಅವಧಿ ವಿಸ್ತರಣೆ
ಇದನ್ನೂ ಓದಿ: ಆರ್ಯನ್ ಮತ್ತೊಂದು ಮುಖ ಬಯಲು; ವೈರಲ್ ಆಯ್ತು ಹಳೇ ವಿಡಿಯೋ
Published On - 7:01 pm, Mon, 4 October 21