ಬಾಲಿವುಡ್ನ ಖ್ಯಾತ ಗೀತರಚನಾಕಾರ ಜಾವೇದ್ ಅಖ್ತರ್ ವಿರುದ್ಧ್ ಎಫ್ಐಆರ್ ದಾಖಲು
ಸುದ್ದಿ ವಾಹಿನಿಯೊಂದರ ಚರ್ಚೆಯಲ್ಲಿ ಭಾಗವಹಿಸಿದ್ದ ಜಾವೇದ್ ಅಖ್ತರ್ ಅವರು ಆರ್ಎಸ್ಎಸ್ ಬಗ್ಗೆ ಮಾತನಾಡಿದ್ದರು. ಅವರ ಮಾತುಗಳನ್ನು ಆರ್ಎಸ್ಎಸ್ ಕಾರ್ಯಕರ್ತರು ಖಂಡಿಸಿದ್ದಾರೆ
ಬಾಲಿವುಡ್ನ ಖ್ಯಾತ ಗೀತರಚನಾಕಾರ, ಕವಿ ಜಾವೇದ್ ಅಖ್ತರ್ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಬಗ್ಗೆ ಅವರು ನೀಡಿದ ಹೇಳಿಕೆಗಳು ಅವಹೇಳನಕಾರಿಯಾಗಿವೆ ಎಂಬ ಆರೋಪದಡಿ ದೂರು ದಾಖಲಾಗಿತ್ತು. ಈಗ ಈ ಪ್ರಕರಣದಲ್ಲಿ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ.
ಸುದ್ದಿ ವಾಹಿನಿಯೊಂದರ ಚರ್ಚೆಯಲ್ಲಿ ಭಾಗವಹಿಸಿದ್ದ ಜಾವೇದ್ ಅಖ್ತರ್ ಅವರು ಆರ್ಎಸ್ಎಸ್ ಬಗ್ಗೆ ಮಾತನಾಡಿದ್ದರು. ಅವರ ಮಾತುಗಳನ್ನು ಆರ್ಎಸ್ಎಸ್ ಕಾರ್ಯಕರ್ತರು ಖಂಡಿಸಿದ್ದಾರೆ. ವಕೀಲರೂ ಆಗಿರುವ ಆರ್ಎಸ್ಎಸ್ ಕಾರ್ಯಕರ್ತ ದೃಷ್ಟಿಮಾನ್ ಜೋಶಿ ಅವರು ಕ್ರಿಮಿನಲ್ ದೂರು ನೀಡಿದ್ದಾರೆ. ‘ಸೆ.4ರಂದು ಜಾವೇದ್ ಅಖ್ತರ್ ಅವರು ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಹಿಂದೂ ಸಂಘಟನೆಗಳನ್ನು ತಾಲಿಬಾನ್ಗೆ ಹೋಲಿಸಿದ್ದನ್ನು ನಾನು ಗಮನಿಸಿದ್ದೇನೆ. ಹಿಂದೂ ಧರ್ಮಕ್ಕಾಗಿ ಕೆಲಸ ಮಾಡುತ್ತಿರುವ ಸಂಘಟನೆಗಳ ಮಾನಹಾನಿ ಮಾಡುವ ಉದ್ದೇಶದಿಂದಲೇ ಜಾವೇದ್ ಅಖ್ತರ್ ಈ ರೀತಿ ಹೇಳಿಕೆಗಳನ್ನು ನೀಡಿದ್ದಾರೆ. ಆರ್ಎಸ್ಎಸ್ ಈ ಸಮಾಜದಲ್ಲಿ ಕ್ಯಾನ್ಸರ್ ಇದ್ದಂತೆ ಅಂತ ಅವರು ಹೇಳಿದ್ದಾರೆ. ಇದು ಪೂರ್ವನಿಯೋಜಿತ ಕೆಲಸ. ಆರ್ಎಸ್ಎಸ್ಗೆ ಸೇರುವವರನ್ನು ದಾರಿ ತಪ್ಪಿಸಲು ಇಂಥ ಹೇಳಿಕೆ ನೀಡಲಾಗಿದೆ’ ಎಂದು ದೂರಿನಲ್ಲಿ ಜೋಶಿ ಆರೋಪಿಸಿದ್ದರು.
‘ಯಾವುದೇ ಸಾಕ್ಷಿಗಳು ಇಲ್ಲದೇ ಆರ್ಎಸ್ಎಸ್ ಬಗ್ಗೆ ಜಾವೇದ್ ಅಖ್ತರ್ ಅವರು ಇಂಥ ಮಾತುಗಳನ್ನು ಆಡಿದ್ದಾರೆ. ಪ್ರಧಾನಮಂತ್ರಿ, ರಾಷ್ಟ್ರಪತಿ ಮತ್ತು ಕೇಂದ್ರದ ಅನೇಕ ಮಂತ್ರಿಗಳು ಆರ್ಎಸ್ಎಸ್ ಬೆಂಬಲಿಗರಾಗಿದ್ದಾರೆ. ಅಂಥ ಸಂಘಟನೆ ಬಗ್ಗೆ ಜಾವೇದ್ ಅಖ್ತರ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ’ ಎಂದು ದೃಷ್ಟಿಮಾನ್ ಜೋಶಿ ಹೇಳಿದ್ದರು. ಈಗ ನ್ಯಾಯಾಲಯ ಅವರ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿದೆ.
ಇದನ್ನೂ ಓದಿ: Javed Akhtar ಮುಂಬೈಯಲ್ಲಿರುವ ಜಾವೇದ್ ಅಖ್ತರ್ ಮನೆಗೆ ಬಿಗಿ ಭದ್ರತೆ; ಹೇಳಿಕೆಗೆ ಕ್ಷಮೆಯಾಚಿಸಲು ಬಿಜೆಪಿ ಒತ್ತಾಯ
RSS ಬಗ್ಗೆ ಅವಹೇಳನಕಾರಿ ಹೇಳಿಕೆ: ಜಾವೇದ್ ಅಖ್ತರ್ ವಿರುದ್ಧ 100 ಕೋಟಿ ರೂ. ಮಾನನಷ್ಟ ಮೊಕದ್ದಮೆ