ಡ್ರಗ್ಸ್ ಕೇಸ್ನಲ್ಲಿ ಎನ್ಸಿಬಿ ಅಧಿಕಾರಿಗಳ ಬಲೆಗೆ ಬಿದ್ದು ಜೈಲು ಸೇರಿದ್ದ ಆರ್ಯನ್ ಖಾನ್ ಈಗ ಜಾಮೀನು ಪಡೆದು ಹೊರಬಂದಿದ್ದಾರೆ. ಬಾಂಬೆ ಹೈಕೋರ್ಟ್ ಗುರುವಾರವೇ (ಅ.28) ಶಾರುಖ್ ಖಾನ್ ಪುತ್ರನಿಗೆ ಜಾಮೀನು ನೀಡಿತ್ತು. ಅದಕ್ಕೆ ಸಂಬಂಧಿಸಿದಂತೆ ಜೈಲಿನ ಕೆಲವು ಪ್ರಕ್ರಿಯೆಗಳು ಇಂದು (ಅ.30) ಮುಗಿದಿದ್ದು, ಆರ್ಯನ್ ಖಾನ್ ಹೊರಗೆ ಬಂದಿದ್ದಾರೆ. ಅವರನ್ನು ಸ್ವಾಗತ ಮಾಡಲು ಶಾರುಖ್ ನಿವಾಸ ಮನ್ನತ್ ಎದುರಿನಲ್ಲಿ ಫ್ಯಾನ್ಸ್ ಜಮಾಯಿಸಿದ್ದಾರೆ. ಪುತ್ರನ ಆಗಮನದಿಂದಾಗಿ ಶಾರುಖ್ ಖಾನ್ ಮತ್ತು ಗೌರಿ ಖಾನ್ ನಿಟ್ಟುಸಿರು ಬಿಟ್ಟಿದ್ದಾರೆ. ಜಾಮೀನು ಕೊಡಿಸಲು ಅವರು ಹರಸಾಹಸ ಮಾಡಿದ್ದರು.
ಅ.2ರಂದು ಮಂಬೈನ ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿದೆ ಎಂಬ ಮಾಹಿತಿ ಆಧರಿಸಿ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಆ ಪಾರ್ಟಿಯಲ್ಲಿ ಆರ್ಯನ್ ಖಾನ್ ಕೂಡ ಭಾಗವಹಿಸಿದ್ದರಿಂದ ಅವರನ್ನು ವಶಕ್ಕೆ ಪಡೆಯಲಾಗಿತು. ಬಳಿಕ ಅವರನ್ನು ಕೋರ್ಟ್ ನ್ಯಾಯ್ಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಸುಮಾರು 25 ದಿನಗಳಿಗೂ ಹೆಚ್ಚು ದಿನಗಳ ಕಾಲ ಆರ್ಯನ್ ಅವರು ಆರ್ಥರ್ ರೋಡ್ ಜೈಲಿನಲ್ಲಿ ಇರುವುದು ಅನಿವಾರ್ಯ ಆಗಿತ್ತು. ಅಂತೂ ಅವರೀಗ ಜಾಮೀನನ ಮೇಲೆ ಹೊರಗೆ ಬಂದಿದ್ದಾರೆ.
ಆರ್ಯನ್ ಖಾನ್ಗೆ ಜಾಮೀನು ಸಿಕ್ಕ ಕೂಡಲೇ ಅನೇಕ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾ ಮೂಲಕ ಪ್ರತಿಕ್ರಿಯಿಸಿದ್ದರು. ಸೋನು ಸೂದ್, ಸ್ವರಾ ಭಾಸ್ಕರ್, ಆರ್. ಮಾಧವನ್, ಸೋನಮ್ ಕಪೂರ್, ಮಿಕಾ ಸಿಂಗ್, ಹನ್ಸಲ್ ಮೆಹ್ತಾ, ಸಂಜಯ್ ಗುಪ್ತಾ, ಮಲೈಕಾ ಅರೋರಾ, ಕರಣ್ ಜೋಹರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಸಂತಸ ಹಂಚಿಕೊಂಡಿದ್ದರು.
ಆರ್ಯನ್ ಖಾನ್ ತಂಗಿ ಸುಹಾನಾ ಖಾನ್ ಅವರು ತಮ್ಮಿಬ್ಬರ ಬಾಲ್ಯದ ಫೋಟೋಗಳನ್ನು ಹಂಚಿಕೊಂಡು, ‘ಐ ಲವ್ ಯೂ’ ಎಂದು ಕ್ಯಾಪ್ಷನ್ ನೀಡಿದ್ದರು. ‘ಕಾಲವೇ ತೀರ್ಪು ನೀಡಿದಾಗ ಸಾಕ್ಷಿಗಳ ಅವಶ್ಯಕತೆ ಇರುವುದಿಲ್ಲ’ ಎಂದು ಸೋನು ಸೂದ್ ಟ್ವೀಟ್ ಮಾಡಿದ್ದರು. ‘ಧನ್ಯವಾದಗಳು ದೇವರೇ.. ಒಬ್ಬ ತಂದೆಯಾಗಿ ನನಗೆ ಈಗ ಸಮಾಧಾನ ಎನಿಸುತ್ತಿದೆ. ಒಳ್ಳೆಯ ಸಂಗತಿಗಳೇ ನಡೆಯಲಿ’ ಎಂದು ಆರ್. ಮಾಧವನ್ ಟ್ವೀಟ್ ಮಾಡಿದ್ದರು.
ಆರ್ಯನ್ ಖಾನ್ ಬಂಧನದ ಬಗ್ಗೆ ರಮ್ಯಾ ಅವರು ಮೊದಲಿನಿಂದಲೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ ಬಂದಿದ್ದರು. ತನಿಖೆಯ ರೀತಿ-ನೀತಿ ಬಗ್ಗೆ ಅವರು ತಕರಾರು ಎತ್ತಿದ್ದರು. ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿ ಮೂಲಕ ಅನಿಸಿಕೆ ಹಂಚಿಕೊಳ್ಳುತ್ತಿದ್ದರು. ಆರ್ಯನ್ ಖಾನ್ಗೆ ಜಾಮೀನು ಮಂಜೂರು ಆದ ತಕ್ಷಣ ‘ಕಡೆಗೂ ಜಾಮೀನು ಸಿಕ್ತು’ ಎಂದು ನಿಟ್ಟುಸಿರು ಬಿಡುವ ರೀತಿಯಲ್ಲಿ ಅವರು ಸ್ಟೋರಿ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ:
‘ಇನ್ಮೇಲೆ ಒಳ್ಳೇ ಮನುಷ್ಯ ಆಗ್ತೀನಿ’; ಎನ್ಸಿಬಿ ಅಧಿಕಾರಿಗಳಿಗೆ ಭರವಸೆ ನೀಡಿದ ಶಾರುಖ್ ಪುತ್ರ ಆರ್ಯನ್ ಖಾನ್
ಬಂಧನದ ಭೀತಿಯಲ್ಲಿ ಸಮೀರ್ ವಾಂಖೆಡೆ; ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಎನ್ಸಿಬಿ ಅಧಿಕಾರಿಗೆ ಹಿನ್ನೆಡೆ