
ಬಾಲಿವುಡ್ ನಟರಿಗೆ ಮಾಫಿಯಾ ಕಾಟ ಶುರುವಾಗಿದೆ. ಈಗಾಗಲೇ ಸಲ್ಮಾನ್ ಖಾನ್, ಕಪಿಲ್ ಶರ್ಮಾ, ರೋಹಿತ್ ಶೆಟ್ಟಿ, ದಿಶಾ ಪಟಾನಿ ಅವರುಗಳ ನಿವಾಸಗಳ ಮೇಲೆ ಬಂದೂಕು ದಾಳಿಗಳನ್ನು ಈ ಮಾಫಿಯಾ ಮಂದಿ ಮಾಡಿದ್ದಾರೆ. ಟೈಗರ್ ಶ್ರಾಫ್ ಅವರ ಮೇಲೆ ದಾಳಿ ಮಾಡಿದ್ದು, ಅವರಿಗೆ ಗಾಯಗಳಾಗಿದ್ದವು. ಅದರ ಬೆನ್ನಲ್ಲೆ ಇತರೆ ಕೆಲವು ಬಾಲಿವುಡ್ ನಟರಿಗೆ ಬೆದರಿಕೆ ಕರೆಗಳು ಬರಲು ಆರಂಭವಾಗಿವೆ. ಇತ್ತೀಚೆಗಷ್ಟೆ ನಟ, ನಿರ್ಮಾಪಕ ತುಷಾರ್ ಕಪೂರ್ ಅವರಿಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗಿನ ಸದಸ್ಯನೆಂದು ಹೇಳಿಕೊಂಡು ಕರೆ ಮಾಡಿ 5 ಕೋಟಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಇಂದು ನಟ ಆಯುಷ್ಮಾನ್ ಖುರಾನಾ ಅವರಿಗೂ ಸಹ ಕರೆ ಮಾಡಿ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ.
ಬಾಲಿವುಡ್ ನಟರಾದ ಆಯುಷ್ಮಾನ್ ಖುರಾನಾ ಮತ್ತು ತುಷಾರ್ ಕಪೂರ್ ಸೇರಿದಂತೆ ಹಲವರಿಗೆ ಸುಲಿಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿದ ಆರೋಪದ ಮೇಲೆ ಬೆಂಗಳೂರು ಮೂಲದ 30 ವರ್ಷದ ಐಟಿ ಇಂಜಿನಿಯರ್ ಅನ್ನು ಮುಂಬೈ ಪೊಲೀಸರ ಅಪರಾಧ ವಿಭಾಗ (ಕ್ರೈಂ ಬ್ರಾಂಚ್) ಬಂಧಿಸಿದೆ. ಬಂಧಿತ ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಐಟಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ವೈಭವ್ ಮಿಶ್ರಾ (30) ಎಂದು ಗುರುತಿಸಲಾಗಿದೆ. ಈ ಆರೋಪಿಯು ಇನ್‌ಸ್ಟಾಗ್ರಾಮ್ ಮೂಲಕ ಆಯುಷ್ಮಾನ್ ಖುರಾನಾ ಮತ್ತು ನಟರಿಗೆ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದನು. ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಆರೋಪಿಯು ಈ ಕೃತ್ಯ ಎಸಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ನಟ ಆಯುಷ್ಮಾನ್ ಖುರಾನಾಗೆ ಬೆದರಿಕೆ ಕರೆ: ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್
‘ನಟರು ಈ ಬಗ್ಗೆ ಮಾಹಿತಿ ನೀಡಿದ ನಂತರ, ನಾವು ಆನ್‌ಲೈನ್ ಪ್ರೊಫೈಲ್ ಮತ್ತು ತಾಂತ್ರಿಕ ವಿವರಗಳ ಮೂಲಕ ಕಳುಹಿಸಿದವರನ್ನು ಪತ್ತೆಹಚ್ಚಲು ಪ್ರಾರಂಭಿಸಿದೆವು ಮತ್ತು ಕೊನೆಗೂ ಅವರನ್ನು ತಲುಪುವಲ್ಲಿ ಯಶಸ್ವಿಯಾದೆವು’ ಎಂದು ಪೊಲೀಸ ಅಧಿಕಾರಿಯೊಬ್ಬರು ತಿಳಿಸಿದ್ದು, ಆರೋಪಿಯು ನಟ ತುಷಾರ್ ಕಪೂರ್‌ಗೆ 5 ಕೋಟಿ ರೂಪಾಯಿ ಬೇಡಿಕೆ ಇಟ್ಟು ಧ್ವನಿ ಸಂದೇಶವನ್ನು ಕಳುಹಿಸಿದ್ದ ಎಂದಿದ್ದರು. ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರಾಜ್‌ತಿಲಾಕ್ ರೋಷನ್ ಅವರು ಬಂಧನವನ್ನು ದೃಢಪಡಿಸಿದ್ದು, ಬೆಂಗಳೂರಿನ ಸ್ಥಳೀಯ ನ್ಯಾಯಾಲಯದಿಂದ ಟ್ರಾನ್ಸಿಟ್ ರಿಮಾಂಡ್ ಪಡೆದ ನಂತರ ಮಿಶ್ರಾ ಅವರನ್ನು ಮುಂಬೈಗೆ ಕರೆತರಲಾಗುವುದು ಎಂದು ತಿಳಿಸಿದ್ದಾರೆ. ಈ ಐಟಿ ಇಂಜಿನಿಯರ್‌ಗೆ ಬಿಷ್ಣೋಯ್ ಗ್ಯಾಂಗ್‌ನೊಂದಿಗೆ ಯಾವುದೇ ರೀತಿಯ ನಂಟಿರುವಂತೆ ಸದ್ಯಕ್ಕೆ ಕಂಡುಬಂದಿಲ್ಲವಾದರೂ, ತನಿಖೆ ಮತ್ತು ವಿಚಾರಣೆಯ ಬಳಿಕವೇ ಸ್ಪಷ್ಟತೆ ಸಿಗಲಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಅಕ್ಟೋಬರ್ 18ರಂದು ಜುಹುವಿನಲ್ಲಿ ನಟ ಟೈಗರ್ ಶ್ರಾಫ್ ಅವರ ಕಾರಿನ ಮೇಲೆ ಗುಂಡಿನ ದಾಳಿ ನಡೆದ ಕೆಲವು ದಿನಗಳ ನಂತರ, ತುಷಾರ್ ಕಪೂರ್ ಅವರಿಗೆ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಆಪ್ತ ಸಹಚರ ಹರಿ ಚಂದ್ ಜಟ್ ಅಲಿಯಾಸ್ ಹ್ಯಾರಿ ಬಾಕ್ಸರ್ ಹೆಸರಿನಲ್ಲಿ ಬೆದರಿಕೆ ಆಡಿಯೋ ಬಂದಿತ್ತು. ಬಳಿಕ ಆಯುಷ್ಮಾನ್ ಖುರಾನಾಗೂ ಸಹ ಇದೇ ವ್ಯಕ್ತಿಯ ಹೆಸರಲ್ಲಿ ಬೆದರಿಕೆ ಹಾಕಲಾಗಿತ್ತು. ಪೊಲೀಸರು ಹ್ಯಾರಿ ಬಾಕ್ಸರ್ನ ಆಡಿಯೋ ಸ್ಯಾಂಪಲ್ ಜೊತೆಗೆ ಆರೋಪಿ ಕಳಿಸಿದ್ದ ಆಡಿಯೋ ಅನ್ನು ಮ್ಯಾಚ್ ಮಾಡಿ ನೋಡಲಾಗಿತ್ತು. ಬಳಿಕ ಸೈಬರ್ ವಿಭಾಗದ ನೆರವಿನಿಂದ ಆರೋಪಿಯನ್ನು ಪತ್ತೆ ಹಚ್ಚಿ ಹಿಡಿಯಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ