ನಟ ಆಯುಷ್ಮಾನ್ ಖುರಾನಾಗೆ ಬೆದರಿಕೆ ಕರೆ: ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್

ಬಾಲಿವುಡ್ ನಟ ಆಯುಷ್ಮಾನ್ ಖುರಾನಾ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಕೋಟಿ ಕೋಟಿ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಆಡಿಯೋ ಸಂದೇಶ ಬಂದಿರುವುದು ವರದಿಯಾಗಿದೆ. ಈ ಕುರಿತು ಮುಂಬೈ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮುಂಬೈನಲ್ಲಿ ಸಾಲು ಸಾಲು ನಟರು ಹಾಗೂ ಚಿತ್ರರಂಗದ ಗಣ್ಯರಿಗೆ ಬೆದರಿಕೆಗಳು ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ನಟ ಆಯುಷ್ಮಾನ್ ಖುರಾನಾಗೆ ಬೆದರಿಕೆ ಕರೆ: ಬಿಷ್ಣೋಯ್ ಗ್ಯಾಂಗ್ ಹೆಸರಲ್ಲಿ ಹಣಕ್ಕೆ ಡಿಮ್ಯಾಂಡ್
Ayushmann Khurrana
Image Credit source: PTI

Updated on: Nov 04, 2026 | 2:22 PM

ಬಾಲಿವುಡ್‌ನಲ್ಲಿ ಗ್ಯಾಂಗ್‌ಸ್ಟರ್‌ಗಳ ಬೆದರಿಕೆ ಸರಣಿ ಮುಂದುವರಿದಿದ್ದು, ಖ್ಯಾತ ನಟ ಆಯುಷ್ಮಾನ್ ಖುರಾನಾ ಅವರಿಗೂ ಈಗ ಜೀವ ಬೆದರಿಕೆ ಕರೆ ಬಂದಿದೆ. ತಮ್ಮನ್ನು ಕುಖ್ಯಾತ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನವರೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಆಯುಷ್ಮಾನ್ ಖುರಾನಾ ಅವರಿಗೆ ಆಡಿಯೋ ಮೆಸೇಜ್ ಕಳುಹಿಸಿ ಕೋಟಿ ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಒಡ್ಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಮುಂಬೈ ಪೊಲೀಸರು ತಕ್ಷಣವೇ ಕಾರ್ಯಾಚರಣೆಗೆ ಇಳಿದು ತನಿಖೆ ಆರಂಭಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ನಟ ಆಯುಷ್ಮಾನ್ ಖುರಾನಾ ಅವರಿಗೆ ತಲುಪಿರುವ ಬೆದರಿಕೆ ಆಡಿಯೋ ಕ್ಲಿಪ್ ಅನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ, ಪ್ರಾಥಮಿಕ ಪರಿಶೀಲನೆಯಲ್ಲಿ ಈ ಆಡಿಯೋ ಸಂದೇಶವು ನಕಲಿ ಇರಬಹುದು ಎಂದು ಶಂಕಿಸಲಾಗಿದೆ. ಆಡಿಯೋ ಸಂದೇಶ ಕಳುಹಿಸಿದ ವ್ಯಕ್ತಿಗೆ ನಿಜವಾಗಿಯೂ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಜೊತೆ ಸಂಪರ್ಕವಿದೆಯೇ ಅಥವಾ ಕೇವಲ ಭಯ ಹುಟ್ಟಿಸಲು ಯಾರಾದರೂ ಹೀಗೆ ಮಾಡಿದ್ದಾರೆಯೇ ಎಂಬ ದಿಕ್ಕಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Loading...

ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿ, ‘ನಟ ಆಯುಷ್ಮಾನ್ ಖುರಾನಾಗೆ ಆಡಿಯೋ ಕರೆ ಬಂದಿರುವುದು ನಿಜ. ಪ್ರಸ್ತುತ ಧ್ವನಿ ಮಾದರಿಯನ್ನು ತನಿಖೆಗೆ ಒಳಪಡಿಸಲಾಗಿದೆ. ಈಗಾಗಲೇ ಪೊಲೀಸ್ ದಾಖಲೆಯಲ್ಲಿರುವ ಇತರ ಆರೋಪಿಗಳ ಧ್ವನಿಯೊಂದಿಗೆ ಇದನ್ನು ಹೋಲಿಸಿ ನೋಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಸದ್ಯಕ್ಕೆ ಅಧಿಕೃತ ಎಫ್‌ಐಆರ್ ದಾಖಲಾಗಿಲ್ಲ.

ಆಯುಷ್ಮಾನ್ ಖುರಾನಾಗೆ ಬೆದರಿಕೆ ಬರುವುದಕ್ಕಿಂತ ಒಂದು ದಿನ ಮುಂಚೆಯಷ್ಟೇ ಮತ್ತೊಬ್ಬ ಬಾಲಿವುಡ್ ನಟ ತುಷಾರ್ ಕಪೂರ್ ಅವರಿಗೂ ಇದೇ ರೀತಿಯ ಬೆದರಿಕೆ ಆಡಿಯೋ ಬಂದಿತ್ತು. ತಾನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ಗೆ ಸೇರಿದ ಹ್ಯಾರಿ ಬಾಕ್ಸರ್ ಎಂದು ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ, ತುಷಾರ್ ಕಪೂರ್‌ಗೆ 5 ಕೋಟಿ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದನು. ಈ ಆಡಿಯೋ ಕೂಡ ನಕಲಿ ಇರಬಹುದು ಎಂದು ಪೊಲೀಸರು ಶಂಕಿಸಿದ್ದು, ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: ಗುಂಡಿನ ದಾಳಿ ಘಟನೆ ಬಳಿಕ ಮುಂಬೈನ ಫ್ಲಾಟ್‌ ಮಾರಾಟ ಮಾಡಿದ ನಟ ಟೈಗರ್ ಶ್ರಾಫ್

ಮುಂಬೈನಲ್ಲಿ ಸೆಲೆಬ್ರಿಟಿಗಳ ಸುರಕ್ಷತೆ ಕುರಿತು ತೀವ್ರ ಆತಂಕ ಎದುರಾಗಿರುವ ಬೆನ್ನಲ್ಲೇ ಈ ಘಟನೆ ನಡೆದಿದೆ. ಕಳೆದೆರಡು ವಾರಗಳ ಹಿಂದಷ್ಟೇ ಮುಂಬೈನ ಜುಹು ಬಳಿ ನಟ ಟೈಗರ್ ಶ್ರಾಫ್ ಅವರ ಕಾರನ್ನು ಗುರಿಯಾಗಿಸಿಕೊಂಡು ಅಪರಿಚಿತರು ಗುಂಡಿನ ದಾಳಿ ನಡೆಸಿದ್ದರು. ಘಟನೆಯಲ್ಲಿ ಟೈಗರ್ ಶ್ರಾಫ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದರೂ, ಅವರ ಚಾಲಕ ಗಾಯಗೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us