ತಾಲಿಬಾನ್​ ಪರ ಇರುವ ಭಾರತದ ಮುಸ್ಲಿಮರಿಗೆ ನಟ ನಸೀರುದ್ದೀನ್​ ಷಾ ಛೀಮಾರಿ; ವಿಡಿಯೋ ವೈರಲ್​

| Updated By: ಮದನ್​ ಕುಮಾರ್​

Updated on: Sep 03, 2021 | 8:24 AM

ನಸೀರುದ್ದೀನ್​ ಷಾ ಅವರ ಈ ಮಾತುಗಳಿಗೆ ಕೆಲವರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ಆದರೆ ಇನ್ನು ಕೆಲವರು ಬೆಂಬಲ ಸೂಚಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಈ ವಿಡಿಯೋ ವೈರಲ್​ ಆಗುತ್ತಿದೆ.

ತಾಲಿಬಾನ್​ ಪರ ಇರುವ ಭಾರತದ ಮುಸ್ಲಿಮರಿಗೆ ನಟ ನಸೀರುದ್ದೀನ್​ ಷಾ ಛೀಮಾರಿ; ವಿಡಿಯೋ ವೈರಲ್​
ನಸೀರುದ್ದೀನ್​​ ಷಾ
Follow us on

ಪ್ರಸ್ತುತ ಅಫ್ಘಾನಿಸ್ತಾನ ಯಾವ ಪರಿಸ್ಥಿತಿಯಲ್ಲಿ ಇದೆ ಎಂಬುದನ್ನು ಹೊಸದಾಗಿ ವಿವರಿಸುವ ಅಗತ್ಯವಿಲ್ಲ. ತಾಲಿಬಾನಿಗಳ ಹಿಡಿತಕ್ಕೆ ಸಿಕ್ಕ ಬಳಿಕ ಅಲ್ಲಿನ ಆಡಳಿತ ವ್ಯವಸ್ಥೆ ನರಕದ ರೀತಿ ಆಗಿದೆ. ಜನರು ಪ್ರತಿ ಕ್ಷಣವೂ ಜೀವ ಭಯದಲ್ಲೇ ಬದುಕುವಂತಾಗಿದೆ. ತಮ್ಮದೇ ಸಿದ್ಧಾಂತಗಳನ್ನು ಇಟ್ಟುಕೊಂಡು ತಾಲಿಬಾನ್ ಉಗ್ರರು​ ಆಡಳಿತ ಶುರುಮಾಡಿದ್ದಾರೆ. ಇದನ್ನು ಜಾಗತಿಕವಾಗಿ ಹಲವು ರಾಷ್ಟ್ರಗಳು ಖಂಡಿಸುತ್ತಿವೆ. ಆದರೆ ಭಾರತದಲ್ಲಿನ ಕೆಲವು ಮುಸ್ಲಿಮರು ತಾಲಿಬಾನ್​ ಆಳ್ವಿಕೆಯನ್ನು ಸಂಭ್ರಮಿಸುತ್ತಿರುವುದಕ್ಕೆ ನಟ ನಸೀರುದ್ದೀನ್​ ಷಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ವಿಡಿಯೋ ವೈರಲ್​ ಆಗಿದೆ.

ಭಾರತೀಯ ಚಿತ್ರರಂಗದ ಅಪ್ರತಿಮ ಕಲಾವಿದ ನಸೀರುದ್ಧೀನ್ ಷಾ. ನಟನೆ ಮಾತ್ರವಲ್ಲದೆ ತಮ್ಮ ರಾಜಕೀಯ ನಿಲುವುಗಳ ಕಾರಣದಿಂದಲೂ ಅವರು ಆಗಾಗ ಸುದ್ದಿ ಆಗುತ್ತಾರೆ. ನೇರ ಮಾತುಗಳ ಕಾರಣಕ್ಕೆ ಅವರು ಅನೇಕರ ನಿಷ್ಠುರ ಕಟ್ಟಿಕೊಂಡಿದ್ದೂ ಇದೆ. ಈಗ ತಾಲಿಬಾನಿಗಳ ಪರ ಇರುವ ಭಾರತದ ಮುಸ್ಲಿಮರಿಗೆ ಅವರು ಛೀಮಾರಿ ಹಾಕಿದ್ದಾರೆ.

‘ಅಫ್ಘಾನಿಸ್ತಾನದಲ್ಲಿ ತಾನಿಬಾನಿಗಳು ಆಡಳಿತಕ್ಕೆ ಬಂದಿರುವುದು ಇಡೀ ಪ್ರಪಂಚಕ್ಕೆ ಆತಂಕದ ವಿಷಯವಾಗಿದೆ. ಆದರೆ ಅದಕ್ಕಿಂತಲೂ ದೊಡ್ಡ ಅಪಾಯ ಎಂದರೆ ಭಾರತದ ಕೆಲವು ಮುಸ್ಲಿಮರು ತಾನಿಬಾನಿಗಳ ಗೆಲುವನ್ನು ಸಂಭ್ರಮಿಸುತ್ತಿರುವುದು. ತಮ್ಮ ಧರ್ಮದಲ್ಲಿ ಸುಧಾರಣೆ ಮತ್ತು ಆಧುನಿಕತೆ ಬೇಕಾ ಅಥವಾ ಹಳೇ ಕಾಲದ ಬರ್ಬರ ಮೌಲ್ಯಗಳು ಬೇಕಾ ಎಂಬ ಪ್ರಶ್ನೆಯನ್ನು ಇಂದು ಪ್ರತಿಯೊಬ್ಬ ಭಾರತೀಯ ಮುಸಲ್ಮಾನರು ತಮಗೆ ತಾವೇ ಕೇಳಿಕೊಳ್ಳಬೇಕು’ ಎಂದು ನಸೀರುದ್ದೀನ್ ಷಾ ಹೇಳಿದ್ದಾರೆ.

‘ನಾನು ಹಿಂದುಸ್ತಾನಿ ಮುಸಲ್ಮಾನ. ಅಲ್ಲಾನ ಜೊತೆ ನನ್ನ ಸಂಬಂಧಕ್ಕೆ ಬೇರೆ ಯಾವ ಸಾಟಿಯೂ ಇಲ್ಲ. ರಾಜಕೀಯ ಪ್ರೇರಿತ ಧರ್ಮ ನನಗೆ ಬೇಕಿಲ್ಲ. ಪ್ರಪಂಚದಾದ್ಯಂತ ಇರುವ ಇಸ್ಲಾಂ ಧರ್ಮಕ್ಕಿಂತಲೂ ಹಿಂದುಸ್ತಾನದ ಇಸ್ಲಾಂ ಭಿನ್ನವಾಗಿದೆ. ಆ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗದಂತಹ ಪರಿಸ್ಥಿತಿ ಬಾರದಿರಲಿ ಅಂತ ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ನಸೀರುದ್ಧೀನ್​ ಷಾ ಹೇಳಿರುವುದು ವೈರಲ್​ ಆಗಿದೆ.

ನಸೀರುದ್ದೀನ್​ ಅವರ ಈ ಮಾತುಗಳಿಗೆ ಕೆಲವರು ಭಾರಿ ವಿರೋಧ ವ್ಯಕ್ತಪಡಿಸಿದ್ದಾರೆ. ‘ಇವರು ಸಿನಿಮಾಗಳಿಗೆ ಮಾತ್ರ ಸೀಮಿತ ಆಗಿರಬೇಕು. ಗೊತ್ತಿರದ ವಿಷಯಗಳ ಬಗ್ಗೆ ಮಾತನಾಡಬಾರದು. ಮುಸ್ಲಿಂ ಧರ್ಮವನ್ನೇ ಆಚರಣೆ ಮಾಡದ ಈ ವ್ಯಕ್ತಿ ಈಗ ಇಸ್ಲಾಂನಲ್ಲಿ ಬದಲಾವಣೆ ತರಲು ಬಯಸಿದ್ದಾರೆ. ಮೊದಲು ಇವರು ಇಸ್ಲಾಂ ಧರ್ಮವನ್ನು ಪಾಲನೆ ಮಾಡಲಿ’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ. ಆದರೆ ಇನ್ನೂ ಕೆಲವರು ನಸೀರುದ್ದೀನ್​ ಷಾ ಆಡಿದ ಮಾತುಗಳಿಗೆ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ:

ಅಫ್ಘಾನಿಸ್ತಾನದಲ್ಲಿ ಮುಂದಿನ ಸರ್ಕಾರದ ಸ್ವರೂಪ ಬಗ್ಗೆ ತಿಳಿದಿಲ್ಲ, ಸ್ಥಳಾಂತರಿಸುವ ಕಾರ್ಯಕ್ಕೆ ಆದ್ಯತೆ: ವಿದೇಶಾಂಗ ಸಚಿವಾಲಯ

ಆಳುವವರಿದ್ದಾರೆ, ಆಡಳಿತ ನಡೆಸೋರು ಯಾರು? ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತಕ್ಕೆ ಪ್ರತಿಭಾ ಪಲಾಯನವೇ ದೊಡ್ಡ ಸವಾಲು