
2025ರಲ್ಲಿ ಸ್ಟಾರ್ ಹೀರೋಗಳು ದೊಡ್ಡ ಮಟ್ಟದಲ್ಲಿ ಗೆಲುವು ಕಂಡಿಲ್ಲ. ಆದರೆ, ಯುವ ಹೀರೋಗಳು ಅಬ್ಬರಿಸುತ್ತಿದ್ದಾರೆ. ಕನ್ನಡದಲ್ಲಿ ಯುವ ಹಾಗೂ ಕಿರೀಟಿ ನಟನೆಯ ‘ಎಕ್ಕ’ ಹಾಗೂ ‘ಜೂನಿಯರ್’ ಸಿನಿಮಾಗಳು ಯಶಸ್ಸು ಕಂಡಿವೆ. ಕಾಕತಾಳೀಯ ಎಂಬಂತೆ ಹಿಂದಿಯ ಹೊಸ ಹೀರೋ ಅಹಾನ್ ಪಾಂಡೆ ಕೂಡ ಗೆಲುವು ಕಂಡಿದ್ದಾರೆ. ಅವರ ಅಭಿನಯದ ಹಿಂದಿಯ ‘ಸೈಯಾರ’ ಸಿನಿಮಾ (Saiyaara Movie) ಜುಲೈ 18ರಂದು ರಿಲೀಸ್ ಆಗಿ ಬಾಕ್ಸ್ ಆಫೀಸ್‌ನಲ್ಲಿ ಹಬ್ಬ ಮಾಡುತ್ತಿದೆ. ಈ ಸಿನಿಮಾದ ಗಳಿಕೆ ಸ್ಟಾರ್ ಹೀರೋಗಳ ಚಿತ್ರವನ್ನೂ ಮೀರಿದೆ. ಮೂರೇ ದಿನಕ್ಕೆ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.
‘ಆಶಿಕಿ 2’ ರಿತೀಯ ಚಿತ್ರಗಳನ್ನು ನೀಡಿರೋ ಮೋಹಿತ್ ಸೂರಿ ಅವರು ‘ಸೈಯಾರ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಕೂಡ ‘ಆಶಿಕಿ 2’ ಸ್ಟೈಲ್ನಲ್ಲಿಯೇ ಮೂಡಿ ಬಂದಿದೆ. ಈ ಚಿತ್ರದ ಮೂಲಕ ಅಹಾನ್ ಪಾಂಡೆ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ. ಅಹಾನ್ ಬಾಲಿವುಡ್ ಹಿರಿಯ ನಟ ಚಂಕಿ ಪಾಂಡೆ ಸಹೋದರ ಚಿಕ್ಕಿ ಪಾಂಡೆ ಮಗ. ಅಹಾನ್ ಬಾಕ್ಸ್ ಆಫೀಸ್ ಆಳುವ ಕೆಲಸ ಮಾಡುತ್ತಿದ್ದಾರೆ.
‘ಸೈಯಾರ’ ಸಿನಿಮಾ ಮೊದಲ ದಿನ 21 ಕೋಟಿ ರೂಪಾಯಿ, ಎರಡನೇ ದಿನ 25 ಕೋಟಿ ರೂಪಾಯಿ ಹಾಗೂ ಭಾನುವಾರ 37 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ಮೂಲಕ ಭಾರತದಲ್ಲಿ ಸಿನಿಮಾದ ಗಳಿಕೆ 83 ಕೋಟಿ ರೂಪಾಯಿ ಆಗಿದೆ. ವಿದೇಶದ ಕಲೆಕ್ಷನ್ ಸೇರಿದರೆ ಸಿನಿಮಾದ ಗಳಿಕೆ 105 ಕೋಟಿ ರೂಪಾಯಿ ಆಗಿದೆ. ಯುವ ಹೀರೋನ ಚಿತ್ರವನ್ನು ಜನರು ಈ ಮಟ್ಟದಲ್ಲಿ ವೀಕ್ಷಿಸುತ್ತಿದ್ದಾರೆ ಎಂಬುದೇ ವಿಶೇಷ.
ಇದನ್ನೂ ಓದಿ: ಯುವ ನಟ ಅಹಾನ್ ಚಿತ್ರಕ್ಕೆ ಮೊದಲ ದಿನವೇ 20 ಕೋಟಿ ರೂ. ಕಲೆಕ್ಷನ್; ಹೀರೋ ಹಿನ್ನೆಲೆ ಅಂತಿಂಥದ್ದಲ್ಲ
ಇತ್ತೀಚೆಗೆ ಬಾಲಿವುಡ್ನ ಸ್ಟಾರ್ ಹೀರೋಗಳು ಯಶಸ್ಸು ಕಾಣಲು ಕಷ್ಟಪಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಯುವ ಹೀರೋಗಳು ಅಬ್ಬರಿಸುತ್ತಿರುವುದು ಚಿತ್ರರಂಗಕ್ಕೆ ಕೊಂಚ ಚೇತರಿಕೆ ನೀಡಿದೆ. ಈ ಸಿನಿಮಾದಲ್ಲಿ ಅನೀತ್ ಪಡ್ಡಾ ಅವರು ನಾಯಕಿ ಆಗಿ ನಟಿಸಿದ್ದಾರೆ. ಸಿನಿಮಾದ ಅಬ್ಬರ ಹೀಗೆಯೇ ಮುಂದುವರಿದರೆ ಈ ಚಿತ್ರ ಶೀಘ್ರವೇ 300 ಕೋಟಿ ರೂಪಾಯಿ ಕ್ಲಬ್ ಸೇರಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.