ಕಂಗನಾ ರಣಾವತ್ ನಟನೆಯ ‘ತಲೈವಿ’ ಸಿನಿಮಾ ರಿಲೀಸ್ಗೆ ರೆಡಿ ಇದೆ. ನಾಳೆ (ಸೆ.10) ಸಿನಿಮಾ ತೆರೆಗೆ ಬರುತ್ತಿದೆ. ಅದಕ್ಕೂ ಮೊದಲೇ ಕಂಗನಾಗೆ ಬಾಂಬೆ ಹೈಕೋರ್ಟ್ ಕಹಿ ಸುದ್ದಿ ನೀಡಿದೆ. ತಮ್ಮ ವಿರುದ್ಧ ದಾಖಲಾದ ಮಾನನಷ್ಟ ಮೊಕದ್ದಮೆ ಅರ್ಜಿಯನ್ನು ವಜಾ ಮಾಡುವಂತೆ ಅವರು ಬಾಂಬೆ ಹೈಕೋರ್ಟ್ಗೆ ಮನವಿ ಮಾಡಿದ್ದರು. ಆದರೆ, ಈ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ.
ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕಂಗನಾ ರಣಾವತ್ ಗೀತ ರಚನೆಕಾರ ಜಾವೇದ್ ಅಖ್ತರ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದರು. ‘ಈ ಆರೋಪಗಳೆಲ್ಲ ಸುಳ್ಳು. ಅವರು ನನ್ನ ಮಾನ ಹರಾಜು ಹಾಕಿದ್ದಾರೆ’ ಎಂದು ಕಂಗನಾ ವಿರುದ್ಧ ಜಾವೇದ್ ದೂರು ದಾಖಲಿಸಿದ್ದರು. ಈ ದೂರನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ಆರಂಭಿಸಿದ್ದರು. ಇದನ್ನು ಕಂಗನಾ ಪ್ರಶ್ನೆ ಮಾಡಿದ್ದರು. ಅಲ್ಲದೆ, ಈ ಪ್ರಕ್ರಿಯೆಗೆ ತಡೆ ನೀಡಬೇಕು ಎಂದು ಕೋರಿದ್ದರು. ಸೆಪ್ಟೆಂಬರ್ 1ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ರೇವತಿ ಅವರು ಆದೇಶವನ್ನು ಕಾಯ್ದಿರಿಸಿದ್ದರು. ಇಂದು ಈ ಪ್ರಕರಣದ ಆದೇಶವನ್ನು ನೀಡಲಾಗಿದ್ದು, ಕಂಗನಾ ಅರ್ಜಿ ವಜಾಗೊಂಡಿದೆ.
ಕಂಗನಾ ರಣಾವತ್ ಟಿವಿ ಸಂದರ್ಶನದಲ್ಲಿ ಜಾವೇದ್ ಅಖ್ತರ್ ಬಗ್ಗೆ ಮಾನ ಹಾನಿ ಆಗುವ ರೀತಿಯಲ್ಲಿ ಮಾತನಾಡಿದ್ದರು. ಈ ಸಂಬಂಧ ಕಳೆದ ನವೆಂಬರ್ ತಿಂಗಳಲ್ಲಿ ಜಾವೇದ್ ಅವರು ಅಂಧೇರಿ ಮೆಟ್ರೋಪೊಲಿಟನ್ ಮ್ಯಾಜಿಸ್ಟ್ರೇಟ್ನಲ್ಲಿ ದೂರು ದಾಖಲಿಸಿದ್ದರು. 2020ರ ಡಿಸೆಂಬರ್ ತಿಂಗಳಲ್ಲಿ ಕೋರ್ಟ್ ಈ ಪ್ರಕರಣ ಸಂಬಂಧ ಪೊಲೀಸರಿಗೆ ಆದೇಶ ಒಂದನ್ನು ನೀಡಿತ್ತು. ಜಾವೇದ್ ನೀಡಿದ ದೂರನ್ನು ಆಧರಿಸಿ ತನಿಖೆ ನಡೆಸಲು ನಿರ್ದೇಶಿಸಿತ್ತು. ಈ ವರ್ಷ ಫೆಬ್ರವರಿಯಲ್ಲಿ ಕಂಗನಾಗೆ ಸಮನ್ಸ್ ನೀಡಲಾಗಿತ್ತು.
ಸೆ.10ರಂದು ಬಿಡುಗಡೆ ಆಗುತ್ತಿರುವ ‘ತಲೈವಿ’ ಚಿತ್ರಕ್ಕೆ ಎ.ಎಲ್. ವಿಜಯ್ ನಿರ್ದೇಶನ ಮಾಡಿದ್ದಾರೆ. ಅರವಿಂದ್ ಸ್ವಾಮಿ, ನಾಸರ್, ಭಾಗ್ಯಶ್ರೀ, ಸಮುದ್ರಖಣಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನೈಟ್ ಕರ್ಫ್ಯೂ ಮತ್ತು ಥಿಯೇಟರ್ನಲ್ಲಿ ಶೇ.50ರಷ್ಟು ನಿರ್ಬಂಧದ ನಡುವೆಯೂ ‘ತಲೈವಿ’ ಬಿಡುಗಡೆ ಆಗುತ್ತಿದೆ.
ಇದನ್ನೂ ಓದಿ: Thalaivii: ಕಂಗನಾ ಆಕ್ರೋಶದ ನಂತರ ‘ತಲೈವಿ’ಯ ಪ್ರದರ್ಶನಕ್ಕೆ PVR ಒಪ್ಪಿಗೆ; ಆದರೂ ಬಗೆಹರಿದಿಲ್ಲ ಹಿಂದಿ ಆವೃತ್ತಿಯ ಸಮಸ್ಯೆ
‘ನಿರ್ದೇಶಕರು ತಪ್ಪು ಮಾಡಿದರು ಎಂದು ನನಗನಿಸಿತು’; ‘ತಲೈವಿ’ ಬಗ್ಗೆ ಕಂಗನಾ ರಣಾವತ್ ಅಚ್ಚರಿಯ ಹೇಳಿಕೆ