ನಟನೆ ಇಷ್ಟವಿಲ್ಲದೆ ಸೂಪರ್​ ಸ್ಟಾರ್​ ಆದ್ರು, ರಾಜಕೀಯ ಇಷ್ಟ ಇಲ್ಲದೇ ಸಿಎಂ ಆದ್ರು: ಜಯಲಲಿತಾ ರೋಚಕ ಕಥೆ

TV9 Digital Desk

| Edited By: ಮದನ್​ ಕುಮಾರ್​

Updated on: Sep 09, 2021 | 2:06 PM

ಜಯಲಲಿತಾ ಅವರ ಸಿನಿಮಾ ಜರ್ನಿ ಮತ್ತು ರಾಜಕೀಯದ ಬದುಕಿನಲ್ಲಿ ಅನೇಕ ರೋಚಕ ತಿರುವುಗಳಿವೆ. ಆದೆಲ್ಲವನ್ನೂ ‘ತಲೈವಿ’ ಚಿತ್ರದಲ್ಲಿ ಕಟ್ಟಿಕೊಡಲಾಗಿದೆ.

ನಟನೆ ಇಷ್ಟವಿಲ್ಲದೆ ಸೂಪರ್​ ಸ್ಟಾರ್​ ಆದ್ರು, ರಾಜಕೀಯ ಇಷ್ಟ ಇಲ್ಲದೇ ಸಿಎಂ ಆದ್ರು: ಜಯಲಲಿತಾ ರೋಚಕ ಕಥೆ
ನಟನೆ ಇಷ್ಟವಿಲ್ಲದೆ ಸೂಪರ್​ ಸ್ಟಾರ್​ ಆದ್ರು, ರಾಜಕೀಯ ಇಷ್ಟ ಇಲ್ಲದೇ ಸಿಎಂ ಆದ್ರು: ಜಯಲಲಿತಾ ರೋಚಕ ಕಥೆ

ಭಾರತೀಯ ರಾಜಕಾರಣದಲ್ಲಿ ಎಂದಿಗೂ ಮರೆಯಲು ಸಾಧ್ಯವಿಲ್ಲದಂತಹ ವ್ಯಕ್ತಿತ್ವ ಜಯಲಲಿತಾ ಅವರದ್ದು. ಪುರುಷ ಪ್ರಧಾನ ವ್ಯವಸ್ಥೆಗೆ ಸೆಡ್ಡುಹೊಡೆದ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗುವ ಮಟ್ಟಕ್ಕೆ ಬೆಳೆದು ನಿಂತರು. ರಾಜಕೀಯಕ್ಕೆ ಕಾಲಿಡುವುದಕ್ಕೂ ಮನ್ನ ನೂರಾರು ಸಿನಿಮಾಗಳಲ್ಲಿ ನಟಿಸಿ ಸೂಪರ್​ ಸ್ಟಾರ್​ ಆಗಿದ್ದರು. ಅಂಥ ಸಾಧಕಿಯ ಬದುಕಿನ ಕಥೆ ಈಗ ‘ತಲೈವಿ’ ಸಿನಿಮಾ ರೂಪದಲ್ಲಿ ಬರುತ್ತಿದೆ. ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್​ ನಟಿಸಿದ್ದಾರೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಸೆ.10ರಂದು ‘ತಲೈವಿ’ ಬಿಡುಗಡೆ ಆಗುತ್ತಿದೆ. ಈ ಸಂದರ್ಭದಲ್ಲಿ ಜಯಲಲಿತಾ ಅವರ ಬದುಕಿನ ಕೆಲವು ರೋಚಕ ವಿಚಾರಗಳನ್ನು ಮೆಲುಕು ಹಾಕಲಾಗುತ್ತಿದೆ.

ಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಜಯಲಲಿತಾ ಅವರು ಕೆಲವು ಅಚ್ಚರಿ ಮಾಹಿತಿಗಳನ್ನು ಹಂಚಿಕೊಂಡಿದ್ದರು. 125ಕ್ಕೂ ಅಧಿಕ ಸಿನಿಮಾಗಳಲ್ಲಿ ಜಯಲಲಿತಾ ನಟಿಸಿದ್ದರು. ಅಚ್ಚರಿ ಎಂದರೆ ಅವರಿಗೆ ಚಿತ್ರರಂಗಕ್ಕೆ ಬರಲು ಇಷ್ಟವೇ ಇರಲಿಲ್ಲ! ಕುಟುಂಬದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಅನಿವಾರ್ಯವಾಗಿ ಅವರು ಕೇವಲ 16ನೇ ವಯಸ್ಸಿನಲ್ಲಿ ನಟಿ ಆಗಬೇಕಾಯಿತು.

‘ನನಗೆ ಸಿನಿಮಾದಲ್ಲಿ ಆಸಕ್ತಿಯೇ ಇರಲಿಲ್ಲ. ನಾನು ನಾಚಿಕೆ ಸ್ವಭಾವದ ವ್ಯಕ್ತಿ ಆಗಿದ್ದೆ’ ಎನ್ನುವ ಜಯಲಲಿತಾ ನಂಬರ್​ ಒನ್​ ನಟಿಯಾಗಿ ಮಿಂಚಿದ್ದು ಇತಿಹಾಸ. ಬಳಿಕ ಅವರು ಕಾಲಿಟ್ಟಿದ್ದು ರಾಜಕೀಯಕ್ಕೆ. ಅದು ಕೂಡ ಅನಿವಾರ್ಯ ಕಾರಣದಿಂದ. ‘ಒಮ್ಮೆ ಒಂದು ನಿರ್ಧಾರ ತೆಗೆದುಕೊಂಡ ಮೇಲೆ ಅದಕ್ಕೆ ಸಂಪೂರ್ಣ ಶ್ರಮ ಹಾಕಬೇಕು. ನನಗೆ ಶಾಸ್ತ್ರೀಯ ನೃತ್ಯ ಇಷ್ಟ ಇರಲಿಲ್ಲ. ಆದರೂ ನಾನು ದೇಶದ ಅತ್ಯುತ್ತಮ ಡಾನ್ಸರ್​ಗಳಲ್ಲಿ ಒಬ್ಬಳಾದೆ. ಸಿನಿಮಾವನ್ನು ನಾನು ದ್ವೇಷಿಸುತ್ತಿದ್ದೆ. ಆದರೆ ನಾನೇ ನಂಬರ್​ ಒನ್​ ನಟಿ ಆದೆ. ನಾನು ಹೀಗೆ ಹೇಳಬಾರದು. ಆದ್ರೂ.. ನನಗೆ ರಾಜಕೀಯ ಇಷ್ಟ ಇಲ್ಲ. ಆದರೆ ಜನರು ನನ್ನನ್ನು ಯಶಸ್ವಿ ರಾಜಕಾರಣಿ ಎನ್ನುತ್ತಾರೆ. ನನಗೆ ಇದು ಅಚ್ಚರಿ ಆಗುತ್ತದೆ’ ಎಂದು ಸಂದರ್ಶನದಲ್ಲಿ ಜಯಲಲಿತಾ ಹೇಳಿದ್ದರು.

ಒಟ್ಟಿನಲ್ಲಿ ಅವರ ಸಿನಿಮಾ ಜರ್ನಿ ಮತ್ತು ರಾಜಕೀಯದ ಬದುಕಿನಲ್ಲಿ ಅನೇಕ ರೋಚಕ ತಿರುವುಗಳಿವೆ. ಆದೆಲ್ಲವನ್ನೂ ‘ತಲೈವಿ’ ಸಿನಿಮಾದಲ್ಲಿ ಕಟ್ಟಿಕೊಡಲಾಗಿದೆ. ಸೆ.10ರಂದು ಬಿಡುಗಡೆ ಆಗುತ್ತಿರುವ ಈ ಚಿತ್ರಕ್ಕೆ ಎ.ಎಲ್. ವಿಜಯ್​ ನಿರ್ದೇಶನ ಮಾಡಿದ್ದಾರೆ. ಅರವಿಂದ್ ಸ್ವಾಮಿ, ನಾಸರ್​, ಭಾಗ್ಯಶ್ರೀ, ಸಮುದ್ರಖಣಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನೈಟ್​ ಕರ್ಫ್ಯೂ ಮತ್ತು ಥಿಯೇಟರ್​ನಲ್ಲಿ ಶೇ.50ರಷ್ಟು ನಿರ್ಬಂಧದ ನಡುವೆಯೂ ‘ತಲೈವಿ’ ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ:

‘ನಿರ್ದೇಶಕರು ತಪ್ಪು ಮಾಡಿದರು ಎಂದು ನನಗನಿಸಿತು’; ‘ತಲೈವಿ’ ಬಗ್ಗೆ ಕಂಗನಾ ರಣಾವತ್​ ಅಚ್ಚರಿಯ ಹೇಳಿಕೆ

‘ಸಲ್ಮಾನ್ ಖಾನ್, ವಿಜಯ್​ ಚಿತ್ರಗಳಿಗೆ ಅನ್ವಯವಾಗದ ನಿಯಮಗಳು ನಮಗೇಕೆ?’; ಐನಾಕ್ಸ್, ಪಿವಿಆರ್ ವಿರುದ್ಧ ಕಂಗನಾ ಕಿಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada