ಕರಣ್ ಜೋಹರ್ ಬಗ್ಗೆ ಸಿನಿಮಾ: ಬಿಡುಗಡೆಗೆ ಕೋರ್ಟ್ ತಡೆ
Karana Johar: ಬಾಲಿವುಡ್ ನ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರನ್ನು ಗೇಲಿ ಮಾಡುವ ಮಾತ್ರವಲ್ಲದೆ ಬಾಲಿವುಡ್ನ ಹಲವು ನಿರ್ದೇಶಕರು, ನಟರನ್ನು ಗೇಲಿ ಮಾಡುವ ಸಿನಿಮಾ ‘ಶಾದಿ ಕೇ ಡೈರೆಕ್ಟರ್ ಕರಣ್ ಆಂಡ್ ಜೋಹರ್’ ಸಿನಿಮಾದ ಬಿಡುಗಡೆಗೆ ಹೇರಲಾಗಿರುವ ತಡೆಯನ್ನು ಹಿಂಪಡೆಯಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಅಂಥಹದ್ದೇನಿದೆ ಆ ಸಿನಿಮಾದಲ್ಲಿ ಇಲ್ಲಿದೆ ಮಾಹಿತಿ...

ಬಾಲಿವುಡ್ನ ಸ್ಟಾರ್ ನಟರು, ನಿರ್ದೇಶಕರನ್ನು ವ್ಯಂಗ್ಯ ಮಾಡಲೆಂದು ಮಾಡಿದ ಸಿನಿಮಾದ ಬಿಡುಗಡೆಗೆ ಹೈಕೋರ್ಟ್ ತಡೆ ನೀಡಿದೆ. ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಹೆಸರನ್ನು ಸಿನಿಮಾಕ್ಕೆ ಇಡಲಾಗಿದ್ದು, ಕರಣ್ ಜೋಹರ್ ಸೇರಿದಂತೆ ಬಾಲಿವುಡ್ನ ಹಲವು ಸ್ಟಾರ್ ನಟ, ನಟಿಯರನ್ನು ಸಿನಿಮಾದಲ್ಲಿ ಕೆಟ್ಟದಾಗಿ ವ್ಯಂಗ್ಯ ಮಾಡಲಾಗಿತ್ತು. ಇದೇ ಕಾರಣಕ್ಕೆ ಕರಣ್ ಜೋಹರ್, ಸಿನಿಮಾದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದರು ವಿಚಾರಣೆ ನಡೆಸಿದ ನ್ಯಾಯಾಲಯ ಸಿನಿಮಾ ಬಿಡುಗಡೆಗೆ ತಡೆ ನೀಡಿದೆ. ಆ ಮೂಲಕ ಕರಣ್ ಜೋಹರ್ ಸೇರಿದಂತೆ ಬಾಲಿವುಡ್ ನ ಇನ್ನೂ ಕೆಲವರು ನಿರಾಳರಾಗಿದ್ದಾರೆ.
‘ಶಾದಿ ಡೈರೆಕ್ಟರ್ ಕರಣ್ ಆಂಡ್ ಜೋಹರ್’ ಹೆಸರಿನ ಸಿನಿಮಾದ ವಿರುದ್ಧ ನಿರ್ಮಾಪಕ ಕರಣ್ ಜೋಹರ್ ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದರು. ಕಳೆದ ಜೂನ್ ತಿಂಗಳಲ್ಲಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಸಿನಿಮಾದ ಬಿಡುಗಡೆಗೆ ತಡೆ ನೀಡಿತ್ತು. ಇತ್ತೀಚೆಗೆ ಚಿತ್ರತಂಡ ಹೈಕೋರ್ಟ್ಗೆ ಅರ್ಜಿ ಹಾಕಿದ್ದು, ಸಿನಿಮಾದ ಮೇಲೆ ಹೇರಲಾಗಿರುವ ತಡೆಯನ್ನು ತೆರವುಗೊಳಿಸುವಂತೆ ಮನವಿ ಮಾಡಿತ್ತು. ಆದರೆ ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಸಿನಿಮಾದ ಬಿಡುಗಡೆಗೆ ಹೇರಲಾಗಿರುವ ತಡೆಯನ್ನು ತೆರವುಗೊಳಿಸಲಾಗದು ಎಂದು ಸ್ಪಷ್ಟಪಡಿಸಿದೆ.
ಪ್ರಕರಣದ ವಿಚಾರಣೆ ನಡೆಸಿರುವ ಬಾಂಬೆ ಹೈಕೋರ್ಟ್ನ ಏಕಸದಸ್ಯ ಪೀಠ, ಆರೋಪಿತರು (ಸಿನಿಮಾ ತಂಡದವರು) ದುರಾಲೋಚನೆಯಿಂದ ಕರಣ್ ಜೋಹರ್ ಅವರ ಹೆಸರು, ಅವರ ಸಿನಿಮಾಗಳ ಹೆಸರು, ನಿರ್ಮಾಣ ಸಂಸ್ಥೆಯ ಹೆಸರು, ಅವರ ವ್ಯಕ್ತಿತ್ವದ ನಕಲನ್ನು ಬಳಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದು ಕರಣ್ ಜೋಹರ್ ಅವರ ಖಾಸಗಿ ಹಕ್ಕಿನ ಉಲ್ಲಂಘನೆ, ಪ್ರಚಾರದ ಹಕ್ಕಿನ ಉಲ್ಲಂಘನೆ, ವ್ಯಕ್ತಿತ್ವದ ಉಲ್ಲಂಘನೆ ಆಗಿದೆ ಎಂದಿದೆ ನ್ಯಾಯಾಲಯ.
ಇದನ್ನೂ ಓದಿ:‘ರಾಜಮೌಳಿ ಸಿನಿಮಾಗಳಲ್ಲೂ ಲಾಜಿಕ್ ಇರಲ್ಲ’: ಕರಣ್ ಜೋಹರ್ ವಾದ
ಕರಣ್ ಜೋಹರ್ ಅವರ ಹೆಸರು, ಸಂಸ್ಥೆಯ ಹೆಸರು ಬಳಸುವ ಮೂಲಕ ಅಡ್ಡಹಾದಿಯಲ್ಲಿ ಲಾಭ ಮಾಡಿಕೊಳ್ಳಲು ಆರೋಪಿತರು ಮುಂದಾಗಿದ್ದಾರೆ. ಕರಣ್ ಜೋಹರ್ ಅವರಿಗೆ ಇರುವ ಹೆಸರು, ಹಣ, ಜನಪ್ರಿಯತೆಯನ್ನು ಬಹಳ ವರ್ಷಗಳ ಕಾಲದ ಶ್ರಮದಿಂದ ಪಡೆದುಕೊಂಡಿದ್ದು, ಅವನ್ನು ರಕ್ಷಿಸಿಕೊಳ್ಳುವುದು ಅವರ ಹಕ್ಕಾಗಿದೆ. ಸಿನಿಮಾದಲ್ಲಿ ‘ಕರಣ್’, ‘ಜೋಹರ್’ ಎಂಬುವರು ಇಬ್ಬರು ವ್ಯಕ್ತಿಗಳನ್ನಾಗಿ ತೋರಿಸಲಾಗಿದೆಯಾದರೂ ಸಹ ಸಿನಿಮಾದ ಹಲವು ಕಡೆ ನಿರ್ದೇಶಕ ಕರಣ್ ಜೋಹರ್ ಎಂದೇ ಬಳಸಲಾಗಿದೆ. ಅಲ್ಲದೆ ಹಲವು ಕಡೆ ನಿರ್ದೇಶಕ ಕರಣ್ ಜೋಹರ್ ಅವರನ್ನು ಗಮನದಲ್ಲಿಟ್ಟುಕೊಂಡೇ ದೃಶ್ಯಗಳನ್ನು ನಿರ್ಮಿಸಲಾಗಿದೆ ಎಂದು ನ್ಯಾಯಾಲಯ ಗುರುತಿಸಿದೆ.
‘ಶಾದಿ ಡೈರೆಕ್ಟರ್ ಕರಣ್ ಆಂಡ್ ಜೋಹರ್’ ಸಿನಿಮಾದಲ್ಲಿ ಕರಣ್ ಮತ್ತು ಜೋಹರ್ ಎಂಬುವರು ಸಿನಿಮಾ ನಿರ್ದೇಶಕರಾಗಲು ಹೊರಡುವ ಕತೆ ಇದೆ. ಸಿನಿಮಾದಲ್ಲಿ ಬಾಲಿವುಡ್ ನ ಹಲವು ಸ್ಟಾರ್ ನಟರನ್ನು ಕೆಟ್ಟದಾಗಿ ಗೇಲಿ ಮಾಡಲಾಗಿದೆ. ಸ್ವತಃ ಕರಣ್ ಜೋಹರ್ ಅನ್ನು ಗೇ ರೀತಿಯಲ್ಲಿ ತೋರಿಸಿ ಗೇಲಿ ಮಾಡಲಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ