AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ಮಾಪಕ ಬೋನಿ ಕಪೂರ್ ವಿರುದ್ಧ ಕೋಟ್ಯಂತರ ಹಣ ವಂಚನೆ ಆರೋಪ

Boney Kapoor: ಜನಪ್ರಿಯ ಹಾಗೂ ಹಿರಿಯ ನಿರ್ಮಾಪಕ ಬೋನಿ ಕಪೂರ್ ವಿರುದ್ಧ ವಂಚನೆ ಆರೋಪವನ್ನು ವ್ಯಕ್ತಿಯೊಬ್ಬ ಹೇರಿದ್ದು, ಈ ಬಗ್ಗೆ ಸ್ವತಃ ಬೋನಿ ಕಪೂರ್ ಮಾತನಾಡಿದ್ದಾರೆ.

ನಿರ್ಮಾಪಕ ಬೋನಿ ಕಪೂರ್ ವಿರುದ್ಧ ಕೋಟ್ಯಂತರ ಹಣ ವಂಚನೆ ಆರೋಪ
ಮಂಜುನಾಥ ಸಿ.
|

Updated on: Mar 30, 2024 | 8:42 PM

Share

ಬಾಲಿವುಡ್​ನ ಜನಪ್ರಿಯ ಯುವ ನಟಿ ಜಾನ್ಹವಿ ಕಪೂರ್ ತಂದೆ, ದಿವಂಗತ ನಟಿ ಶ್ರೀದೇವಿಯ ಪತಿ, ನಿರ್ಮಾಪಕ ಬೋನಿ ಕಪೂರ್ ವಿರುದ್ಧ ಕೋಟ್ಯಂತರ ರೂಪಾಯಿ ಹಣ ವಂಚನೆ ಆರೋಪ ಮಾಡಲಾಗಿದೆ. ಸಿನಿಮಾದ ಚಿತ್ರೀಕರಣಕ್ಕೆ ಬೇಕಾದ ಪ್ರಾಪರ್ಟಿಗಳನ್ನು ಸರಬರಾಜು ಮಾಡಿದ್ದ ಉದ್ದಿಮೆದಾರನೊಬ್ಬ ಬೋನಿ ಕಪೂರ್ ವಿರುದ್ಧ ಆರೋಪ ಮಾಡಿದ್ದು, ತಮಗೆ ಕೋಟ್ಯಂತರ ರೂಪಾಯಿ ಶುಲ್ಕ ನೀಡದೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಬೋನಿ ಕಪೂರ್, ತಮ್ಮ ಮೇಲಿನ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ.

‘ಆ ವ್ಯಕ್ತಿಗೆ ನಮ್ಮ ನಿರ್ಮಾಣ ಸಂಸ್ಥೆಯಿಂದ 1.70 ಕೋಟಿ ರೂಪಾಯಿಗಳ ಬಿಲ್ ನೀಡಬೇಕಿತ್ತು. ನಾವು ಸಿನಿಮಾ ಬಿಡುಗಡೆ ಆಗುವ ಮುನ್ನವೇ 1.07 ಕೋಟಿ ನೀಡಿದ್ದೆವು. 63 ಲಕ್ಷ ರೂಪಾಯಿಗಳನ್ನು ಬಾಕಿ ಉಳಿಸಿದ್ದೆ. ಆತ ಒಮ್ಮೆ ನನ್ನನ್ನು ಬಂದು ಭೇಟಿಯಾಗಿದ್ದ, ಆಗ ನಾನು ಸಿನಿಮಾ ಬಿಡುಗಡೆ ಆಗಲಿ ಹಣ ತಲುಪುತ್ತದೆ ಎಂದಿದ್ದೆ. ಆತ ಸಹ ಖುಷಿಯಾಗಿ ಹೋಗಿದ್ದ. ಸಿನಿಮಾ ಬಿಡುಗಡೆ ಆದ ಬಳಿಕವೇ ಹಲವರ ಬಿಲ್ ಕ್ಲಿಯರ್ ಆಗುತ್ತದೆ ಚಿತ್ರರಂಗದಲ್ಲಿ ಇದು ಮಾಮೂಲಿಯಾಗಿ ನಡೆದುಕೊಂಡು ಬಂದಿದೆ. ಯೋಚಿಸಿ ಒಂದೊಮ್ಮೆ ನಾನು ಮೋಸಗಾರ ಆಗಿದ್ದಿದ್ದರೆ 50 ವರ್ಷಗಳ ಕಾಲ ಈ ಚಿತ್ರರಂಗದಲ್ಲಿ ಉಳಿಯುತ್ತಿದ್ದೆನೆ. ಮೋಸ ಮಾಡಿಕೊಂಡು 50 ವರ್ಷ ಯಾವ ನಿರ್ಮಾಪಕ ತಾನೇ ಉಳಿದಾನು’ ಎಂದಿದ್ದಾರೆ ಬೋನಿ ಕಪೂರ್.

‘ಈಗಾಗಲೇ 1.07 ಕೋಟಿ ರೂಪಾಯಿ ಕೊಟ್ಟವನಿಗೆ 63 ಲಕ್ಷ ರೂಪಾಯಿ ದೊಡ್ಡದೇನಲ್ಲ. ಕೊನೆಯ ಪೇಮೆಂಟ್​ಗೆ ನಾನೇಕೆ ಅವನಿಗೆ ಮೋಸ ಮಾಡಲಿ. ನನ್ನ ವಿರುದ್ಧ ಆರೋಪ ಮಾಡಿದರೆ ನಾನು ಸುಮ್ಮನಿರುತ್ತೇನೆ, ನಾನೇನು ಕ್ರಮ ಕೈಗೊಳ್ಳುವುದಿಲ್ಲ ಎಂಬ ಕಾರಣಕ್ಕೆ ಕೆಲವರು ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಾರೆ. ಅದೆಲ್ಲ ಸಾಮಾನ್ಯ’ ಎಂದಿದ್ದಾರೆ ಬೋನಿ ಕಪೂರ್.

‘ಈ ಹಿಂದೆ ನನ್ನೊಂದಿಗೆ ಕೆಲಸ ಮಾಡಿರುವ ಯಾರನ್ನಾದರೂ ಕೇಳಿಕೊಳ್ಳಿ, ನಾನು ತಡವಾಗಿ ಪೇಮೆಂಟ್ ಮಾಡುತ್ತೇನೆ, ಪೇಮೆಂಟ್ ನೀಡುವುದಿಲ್ಲ ಎಂದು ಯಾರಾದರೂ ದೂರು ಹೇಳುತ್ತಾರೇನೋ. ಈ ಹಿಂದೆ ನನ್ನೊಂದಿಗೆ ಕೆಲಸ ಮಾಡಿರುವವರು ನನ್ನ ವೃತ್ತಿಪರತೆ ನೋಡಿ ಥ್ಯಾಂಕ್ಯು ನೋಟ್​ಗಳನ್ನು ಸಹ ನೀಡಿದ್ದಾರೆ. ಆ ವ್ಯಕ್ತಿ ಏಕೆ ನನ್ನ ವಿರುದ್ಧ ಆರೋಪ ಮಾಡುತ್ತಿದ್ದಾನೆಯೋ ಆತನಿಗೆ ಗೊತ್ತು. ನನ್ನ ವಿರುದ್ಧ ಆರೋಪ ಮಾಡಿದ್ದರಿಂದ ಆತನಿಗೆ ಪ್ರಚಾರ, ಅದರಿಂದ ಖುಷಿ ಸಿಗುತ್ತಿದೆ ಅನಿಸುತ್ತದೆ. ಆತನಿಗೆ ಶುಭಾಶಯಗಳನ್ನು ಮಾತ್ರವೇ ಹೇಳುತ್ತೀನಿ’ ಎಂದಿದ್ದಾರೆ.

ಬೋನಿ ಕಪೂರ್ 1980 ರಿಂದಲೂ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಹಿಂದಿ ಮಾತ್ರವೇ ಅಲ್ಲದೆ ತಮಿಳು, ತೆಲುಗಿನಲ್ಲಿಯೂ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಶ್ರೀದೇವಿಯ ಪತಿಯೂ ಆಗಿರುವ ಬೋನಿ ಕಪೂರ್, ಯುವ ನಟಿಯರಾದ ಜಾನ್ಹವಿ ಕಪೂರ್, ಖುಷಿ ಕಪೂರ್ ಅವರ ತಂದೆ. ನಟ ಅರ್ಜುನ್ ಕಪೂರ್ ತಂದೆಯೂ ಹೌದು. ಬಾಲಿವುಡ್ ಸ್ಟಾರ್ ನಟ ಅನಿಲ್ ಕಪೂರ್ ಇವರ ಸಹೋದರ. ಇದೀಗ ಬೋನಿ ನಿರ್ಮಾಣದ ‘ಮೈದಾನ್’ ಸಿನಿಮಾ ಬಿಡುಗಡೆ ಆಗುತ್ತಿದೆ.